ಬೆಳ್ತಂಗಡಿ: ನಮ್ಮ ಶ್ರೀ ಕಾಲಭೈರವೇಶ್ವರ ಒಕ್ಕಲಿಗ ಗೌಡರ ಕ್ರೆಡಿಟ್ ಸೌಹಾರ್ದ ಸಹಕಾರ ಸಂಘವು 2019ರಲ್ಲಿ ಆರಂಭವಾದ ದಿನದಿಂದ ಸತತವಾಗಿ ಅಭಿವೃದ್ಧಿ ಪಥದಲ್ಲಿದ್ದು, ಪ್ರಸಕ್ತ ಸಾಲಿನಲ್ಲಿ 42 ಲಕ್ಷ ರೂಪಾಯಿ ನಿವ್ವಳ ಲಾಭಗಳಿಸಿದೆ. ಉಜಿರೆಯಲ್ಲಿ ಸಂಘವು ಹೊಂದಿರುವ 15 ಕೋಟಿ ರೂಪಾಯಿ ಮೌಲ್ಯದ ಆಸ್ತಿಯಲ್ಲಿ 10 ಕೋಟಿ ರೂಪಾಯಿ ಅಂದಾಜು ವೆಚ್ಚದ ಸುಸಜ್ಜಿತ ಸಭಾಭವನ ನಿರ್ಮಾಣ ಗುರಿ ಹೊಂದಲಾಗಿದೆ. ಪ್ರಸಕ್ತ ಸಾಲಿನಲ್ಲಿ ಸದಸ್ಯರಿಗೆ 10% ಡಿವೆಡೆಂಡ್ ನೀಡಲಾಗುತ್ತಿದೆ ಎಂದು ಸಂಘದ ಅಧ್ಯಕ್ಷ ರಂಜನ್ ಜಿ. ಗೌಡ ಹೇಳಿದರು.ಅವರು ಉಜಿರೆ ಶ್ರೀ ಕೃಷ್ಣಾನುಗ್ರಹ ಸಭಾಭವನದಲ್ಲಿ ಆಗಸ್ಟ್ 31ರಂದು ನಡೆದ ಶ್ರೀ ಕಾಲಭೈರವೇಶ್ವರ ಒಕ್ಕಲಿಗ ಗೌಡರ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘದ 2023-24ನೇ ಸಾಲಿನ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.ಸಂಘವು ಒಟ್ಟು 2111 ಸದಸ್ಯರನ್ನು ಹೊಂದಿದ್ದು, 1.82 ಕೋಟಿ ರೂಪಾಯಿ ಪಾಲು ಬಂಡವಾಳ ಹೊಂದಿದೆ. 19 ಕೋಟಿ ರೂಪಾಯಿ ವಿವಿಧ ಸಾಲಗಳನ್ನು ನೀಡಿದ್ದು, 21 ಕೋಟಿ ರೂಪಾಯಿ ಠೇವಣಾತಿ ಹೊಂದಿರುತ್ತದೆ. ಮುಂದಿನ ಮಹಾಸಭೆಯೊಳಗೆ ಒಟ್ಟು ನಾಲ್ಕು ಶಾಖೆಗಳನ್ನು ತೆರೆಯುವ ಗುರಿ ಹೊಂದಲಾಗಿದೆ. ಸಂಘವನ್ನು ರಾಜ್ಯಮಟ್ಟಕ್ಕೆ ವಿಸ್ತರಿಸುವ ಕೆಲಸ ಮಾಡಲಾಗುವುದು ಎಂದರು.ಬೆಳ್ತಂಗಡಿ ತಾಲೂಕು ಒಕ್ಕಲಿಗ ಗೌಡರ ಸಂಘದ ಅಧ್ಯಕ್ಷ ಕೆ. ಬಾಲಕೃಷ್ಣ ಗೌಡ ಮಾತನಾಡಿ; ಸಂಘಟನೆ ಮತ್ತು ಬ್ಯಾಂಕ್ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಸಂಘದ ಅಭಿವೃದ್ಧಿಗೆ ಸಮುದಾಯದ ಎಲ್ಲರ ಸಹಕಾರ ಅಗತ್ಯ ಎಂದು ಹೇಳಿದರು.ಕಳೆದ ಶೈಕ್ಷಣಿಕ ವರ್ಷ ಪಿಯುಸಿಯಲ್ಲಿ 90% ಕ್ಕಿಂತ ಮೇಲ್ಪಟ್ಟು ಅಂಕ ಪಡೆದ ಕೆ.ಎಸ್. ಹಿಮಕರ ಗೌಡ ಕೂಡಿಗೆ, ಕವನಾ ಚಾರ್ಮಾಡಿ, ಪ್ರಜ್ವಲ್ ಅರಳಿ; ಎಸ್‌ಎಸ್‌ಎಲ್‌ಸಿಯಲ್ಲಿ 90% ಕ್ಕಿಂತ ಅಧಿಕ ಅಂಕ ಪಡೆದ ಹರ್ಷ ಎಂ.ಎಚ್. ಮರಕಡ, ಗೌತಮಿ ಡಿ. ಬಡೆಕೊಟ್ಟು, ಸಂಜನಾ ಗಾಂಜಾಲು ಅವರನ್ನು ಗೌರವಿಸಲಾಯಿತು.ಮುಖ್ಯ ಕಾರ್ಯನಿರ್ವಹಣಾಧಿಕಾರಿ ದಿನೇಶ್ ಗೌಡ ಕಲ್ಲಾಜೆ ವರದಿ ವಾಚಿಸಿದರು. ಉಪಾಧ್ಯಕ್ಷ ಶಿವಕಾಂತ ಗೌಡ, ನಿರ್ದೇಶಕರಾದ ಎನ್. ಲಕ್ಷ್ಮಣ ಗೌಡ, ಬಾಲಕೃಷ್ಣ ಗೌಡ ಕೇರಿಮಾರು, ದಾಮೋದರ ಗೌಡ ಸುರುಳಿ, ಕೆ. ಜಯಂತ ಗೌಡ ಗುರಿಪಳ್ಳ, ಸುಂದರ ಗೌಡ ಪುಡ್ಕೆತ್ತು, ಬಿ. ಕೃಷ್ಣಪ್ಪ ಗೌಡ ಬೇಂಗಳ, ಜಯಂತ ಗೌಡ ಓಣಿಯಾಲು, ಭರತ್ ಕುಮಾರ್ ಗೌಡ ಹಾನಿಬೆಟ್ಟು, ಕೆ. ಸಂಜೀವ ಗೌಡ ಪಾಂಚಜನ್ಯ, ಸರೋಜಿನಿ, ಚೇತನಾ ಉಪಸ್ಥಿತರಿದ್ದರು.ನಿರ್ದೇಶಕರಾದ ಧರ್ಮರಾಜ ಗೌಡ ಅಡ್ಕಾಡಿ ವಂದಿಸಿದರು. ನಿತಿನ್ ಗೌಡ ಸುರುಳಿ ಕಾರ್ಯಕ್ರಮ ನಿರೂಪಿಸಿದರು.






