ಗ್ರಾಮದ ಅಭಿವೃದ್ಧಿಗೆ ಸಹಕಾರ ಕ್ಷೇತ್ರದ ಕೊಡುಗೆ ಸಾಕಷ್ಟು. ನಿಡ್ಲೆ ಸೊಸೈಟಿಯ ಶತಮಾನೋತ್ಸವ ಸಮಾರಂಭದಲ್ಲಿ ಡಾ.ಎಂ.ಎನ್.ಆರ್.

ಗ್ರಾಮದ ಅಭಿವೃದ್ಧಿಗೆ ಸಹಕಾರ ಕ್ಷೇತ್ರದ ಕೊಡುಗೆ ಸಾಕಷ್ಟು.           ನಿಡ್ಲೆ ಸೊಸೈಟಿಯ ಶತಮಾನೋತ್ಸವ ಸಮಾರಂಭದಲ್ಲಿ ಡಾ.ಎಂ.ಎನ್.ಆರ್.
Facebook
Twitter
LinkedIn
WhatsApp

ಬೆಳ್ತಂಗಡಿ: ಶತಮಾನಗಳ ಹಿಂದೆ ನಿಡ್ಲೆಯಂತಹ ತೀರಾ ಹಿಂದುಳಿದ ಗ್ರಾಮದಲ್ಲಿ ಸಹಕಾರ ಸಂಘ ಸ್ಥಾಪಿಸಿದ ಇಲ್ಲಿನ ಹಿರಿಯರ ದೂರದೃಷ್ಟಿಯ ಪರಿಣಾಮ ಇಂದು ಗ್ರಾಮದ ಅಭಿವೃದ್ಧಿಯಲ್ಲಿಯೂ ಇಲ್ಲಿನ ಸೊಸೈಟಿ ಮಹತ್ತರ ಕೊಡುಗೆ ನೀಡುವಂತಾಗಿದೆ. ಗ್ರಾಮೀಣ ಪ್ರದೇಶದಲ್ಲಿ ನಿನಾಸಿಗರ ಆರ್ಥಿಕ ಸದೃಢತೆಗಾಗಿ ತನ್ನದೇ ಆದ ಕೊಡುಗೆ ನೀಡಿದ ನಿಡ್ಲೆ ಸೊಸೈಟಿ ಜಿಲ್ಲೆಯ ಪ್ರತಿಷ್ಠಿತ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಎಂದು ಗುರುತಿಸಲ್ಪಟ್ಟಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನ ಅಧ್ಯಕ್ಷ ಡಾ. ಎಂ.ಎನ್. ರಾಜೇಂದ್ರ ಕುಮಾರ್ ಅಭಿಪ್ರಾಯಿಸಿದರು.ಅವರು ಸೆಪ್ಟೆಂಬರ್ 8ರಂದು ನಿಡ್ಲೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವಠಾರದಲ್ಲಿ ಅದ್ದೂರಿ ಹಾಗೂ ಅರ್ಥಪೂರ್ಣವಾಗಿ ನಡೆದ ಸಂಘದ ಶತಮಾನೋತ್ಸವ ಸಮಾರಂಭ ಮತ್ತು ನೂತನ ಕಟ್ಟಡದ ಉದ್ಘಾಟನಾ ಸಮಾರಂಭದಲ್ಲಿ ಶತಮಾನೋತ್ಸವ ಸಮಾರಂಭ ಮತ್ತು ಸಂಘದ ನೂತನ ಕಛೇರಿ ಹಾಗೂ ಗೋದಾಮು ಕಟ್ಟಡವನ್ನು ಉದ್ಘಾಟಿಸಿ; ಬಳಿಕ ಶತಮಾನೋತ್ಸವ ಸಮಾರಂಭವನ್ನು ವೇದಿಕೆಯಲ್ಲಿ ದೀಪ ಪ್ರಜ್ವಲಿಸಿ ಉದ್ಘಾಟಿಸಿ ಮಾತನಾಡುತ್ತಿದ್ದರು.ಗ್ರಾಮದ ಅಭಿವೃದ್ಧಿಗೆ ಸಾಕಷ್ಟು ಕೊಡುಗೆ ನೀಡುತ್ತಿರುವ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು ಪಾರದರ್ಶಕ ಆಡಳಿತದ ಮೂಲಕ ಜನಮನ್ನಣೆ ಗಳಿಸಿದೆ‌. ರಾಷ್ಟ್ರೀಕೃತ ಬ್ಯಾಂಕ್‌ಗಳು ಸಂಸ್ಕೃತಿಯೇ ಇಲ್ಲದ ಭಾಷೆ ಬಾರದ ಸಿಬ್ಬಂದಿಗಳ ಸೇವೆಯಿಂದಾಗಿ ಸಕಾಲದಲ್ಲಿ ಗ್ರಾಹಕರ ಬೇಡಿಕೆಗೆ ಸ್ಪಂದಿಸದೇ ಸಾಲಕ್ಕಾಗಿ ಗ್ರಾಹಕರನ್ನು ಸತಾಯಿಸುತ್ತಿದ್ದರೆ; ಸಹಕಾರಿ ಸಂಘಗಳು ಸುಸಂಸ್ಕೃತ ಸಿಬ್ಬಂದಿವರ್ಗದ ಸೇವೆಯೊಂದಿಗೆ ಸದಸ್ಯರ ಮಗಳ ವಿವಾಹಕ್ಕೂ ಸಾಲ ನೀಡಿ ಸಹಕರಿಸುತ್ತಿದೆ. ಜಿಲ್ಲೆಯಲ್ಲಿ ನವೋದಯ ಸ್ವಸಹಾಯ ಸಂಘಗಳಿಂದ ಮಹಿಳೆಯರೂ ಸ್ವಾವಲಂಬಿ ಬದುಕು ಕಟ್ಟಿಕೊಳ್ಳುವಂತಾಗಿದೆ ಎಂದು ಹೇಳಿದರು.ಸಂಘದ ನೂತನ ಭದ್ರತಾ ಕೊಠಡಿ ಉದ್ಘಾಟಿಸಿದ ಬೆಳ್ತಂಗಡಿಯ ಶಾಸಕ ಹರೀಶ್ ಪೂಂಜ ಮಾತನಾಡಿ; ಶತಮಾನೋತ್ಸವ ಆಚರಿಸುತ್ತಿರುವ ನಿಡ್ಲೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಸೇವೆ ಸಲ್ಲಿಸಿದ ಹತ್ತು ಮಂದಿ ಅಧ್ಯಕ್ಷರ ಸೇವೆಯನ್ನು ಸ್ಮರಿಸಿದರಲ್ಲದೇ; ಶತಮಾನಗಳ ಹಿಂದೆ ಕಳೆಂಜದ ಸಂಕಪ್ಪಯ್ಯ ಅಧ್ಯಕ್ಷತೆಯಲ್ಲಿ ಆರಂಭಗೊಂಡ ಈ ಸೊಸೈಟಿಯ ಶತಮಾನೋತ್ಸವ ಸಮಾರಂಭ ಅವರ ಮೊಮ್ಮಗ ರಮೇಶ್ ರಾವ್‌ರ ಅಧ್ಯಕ್ಷತೆಯಲ್ಲಿ ನಡೆಯುತ್ತಿರುವುದು ಯೋಗಾಯೋಗ ಎಂದರು. ಸಹಕಾರಿ ಕ್ಷೇತ್ರಕ್ಕೆ ಹಾಗೂ ಕೃಷಿ ಕ್ಷೇತ್ರಕ್ಕೆ ವಿಶೇಷ ಒತ್ತು ನೀಡುತ್ತಿರುವ ಪ್ರಧಾನಿ ನರೇಂದ್ರ ಮೋದಿಯವರ ಮಹತ್ವಾಕಾಂಕ್ಷೆಯ ಫಸಲ್‌ಭಿಮಾ ಯೋಜನೆಯ ಪ್ರಯೋಜನವನ್ನು ಇಲ್ಲಿನ ಎಲ್ಲ ಕೃಷಿಕರು ಪಡೆಯುವಂತಾಗಲಿ ಎಂದು ಆಶಿಸಿದರು. ಕ್ಯಾನ್ಸರ್ ಮುಕ್ತ ನಾಡಿಗಾಗಿ ಪ್ರತಿಯೊಬ್ಬರೂ ಮನೆಯಂಗಳದಲ್ಲಿ ರಾಸಾಯನಿಕಮುಕ್ತ ತರಕಾರಿ ಬೆಳೆಯುವ ಮೂಲಕ ಸ್ವಚ್ಛ ಪರಿಸರ ಕಾಪಾಡಲು ಸಂಕಲ್ಪ ಮಾಡೋಣಾ ಎಂದು ವಿನಂತಿಸಿದರು.ಸಂಘದ ಅಧ್ಯಕ್ಷ ಕೆ. ರಮೇಶ್ ರಾವ್‌ರ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ ಕ್ಯಾಂಪ್ಕೊ ಖರೀದಿ ಕೇಂದ್ರವನ್ನು ಮಂಗಳೂರು ಕ್ಯಾಂಪ್ಕೊ ಉಪಾಧ್ಯಕ್ಷ ಶಂಕರ ನಾರಾಯಣ ಭಟ್ ಉದ್ಘಾಟಿಸಿ ಶುಭ ಹಾರೈಸಿದರು. ಮಂಗಳೂರು ಕೆ.ಎಂ.ಎಫ್. ಅಧ್ಯಕ್ಷ ಸುಚರಿತ ಶೆಟ್ಟಿ, ನಿರ್ದೇಶಕ ಪದ್ಮನಾಭ ಅರ್ಕಜೆ, ದಕ್ಷಿಣ ಜಿಲ್ಲಾ ಸಹಕಾರಿ ಯೂನಿಯನ್‌ನ ಅಧ್ಯಕ್ಷ ಬೆಳ್ಳಿಪ್ಪಾಡಿ ಪ್ರಸಾದ್ ಕೌಶಲ್ ಶೆಟ್ಟಿ, ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನ ನಿರ್ದೇಶಕ ಪೂವಾಜೆ ಕುಶಾಲಪ್ಪ ಗೌಡ, ನಿಡ್ಲೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ಯಾಮಲಾ, ಪುತ್ತೂರು ಸಹಕಾರಿ ಸಂಘಗಳ ಸಹಾಯಕ ನಿಬಂಧಕ ಎಸ್‌.ಎಂ‌. ರಘು, ಬೆಳ್ತಂಗಡಿ ತಾಲೂಕು ಸಹಕಾರಿ ಅಭಿವೃದ್ಧಿ ಅಧಿಕಾರಿ ಬಿ.ವಿ. ಪ್ರತಿಮಾ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಶುಭ ಹಾರೈಸಿದರು. ಸಭಾಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ರಮೇಶ್ ರಾವ್ ಮಾತನಾಡಿ; ಸಂಂಘದ ಬೆಳವಣಿಗೆಗೆ ಕಾರಣೀಕರ್ತರಾದ ಹಿರಿಯರೆಲ್ಲರನ್ನು ಸ್ಮರಿಸಿದರಲ್ಲದೇ, ಇಂದಿನ ಶತಮಾನೋತ್ಸವ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದ ಸಮಸ್ತರನ್ನು ಕೃತಜ್ಞತೆಯಿಂದ ಸ್ಮರಿಸಿದರು.ಸಂಘದ ಶತಮಾನೋತ್ಸವ ಸವಿನೆನಪಿನ ಸ್ಮರಣಸಂಚಿಕೆ ರಚನಾ ಸಮಿತಿಯ ಗಂಗಾಧರ ಭಂಡಾರಿ ನಿರೂಪಿಸಿದ ಕಾರ್ಯಕ್ರಮಕ್ಕೆ ಕೆದಿಹಿತ್ಲು ಕಾರ್ತಿಕ್ ತಾಮ್ಹಣ್‌ಕರ್ ಪ್ರಾರ್ಥನೆಯ ಮೂಲಕ ವಿದ್ಯುಕ್ತ ಚಾಲನೆ ನೀಡಿದರು. ದಕ್ಷಿಣ ಕನ್ನಡ ಜಿಲ್ಲಾ ಹ್ಯಾಪ್‌ಕಾಮ್ಸ್ ನಿರ್ದೇಶಕ ವಿಷ್ಣು ಮರಾಠೆ ಪ್ರಾಸ್ತಾವಿಕ ನುಡಿಗಳೊಂದಿಗೆ ಸರ್ವರನ್ನೂ ಪ್ರೀತಿ-ಅಭಿಮಾನದಿಂದ ಸ್ವಾಗತಿಸಿದರು. ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪಿ. ಪದ್ಮನಾಭ ಸಂಘ ನಡೆದು ಬಂದ ದಾರಿಯ ನೆನಪು ಮಾಡಿಕೊಟ್ಟರು.

ಶತಮಾನೋತ್ಸವದ ಸವಿನೆನಪಿಗಾಗಿ ಸಂಘದ ವ್ಯಾಪ್ತಿಯ 9ಶಾಲೆಗಳಿಗೆ ರಾಷ್ಟ್ರದ 75ನೇ ಸ್ವಾತಂತ್ರ್ಯೋತ್ಸವದ ಸವಿನೆನಪಿಗಾಗಿ ಕೊಡಮಾಡಿದ ರೂಪಾಯಿ 50,000/- ನಿರಖು ಠೇವಣಿಯ ಠೇವಣಿ ಪತ್ರವನ್ನು ಹಸ್ತಾಂತರಿಸುವ ದೂರದೃಷ್ಟಿಯ ಅರ್ಥಪೂರ್ಣ ಕಾರ್ಯಕ್ರಮ ಸಭಿಕರ ಮತ್ತು ವೇದಿಕೆಯಲ್ಲಿದ್ದ ಗಣ್ಯರ ಮೆಚ್ಚುಗೆಗೆ ಪಾತ್ರವಾಯಿತು. ಸಂಘದ ಶ್ರೇಯೋಭಿವೃದ್ಧಿಗೆ ಅಮೂಲ್ಯ ಕೊಡುಗೆ ನೀಡಿದ ಈ ಹಿಂದಿನ ಎಲ್ಲ ನಿರ್ದೇಶಕರ ಪ್ರತಿನಿಧಿಗಳಾದ ಮಾಜಿ ಅಧ್ಯಕ್ಷರುಗಳನ್ನು ಸಮಾರಂಭದಲ್ಲಿ ಗುರುತಿಸಿ, ಸಮ್ಮಾನಿಸಿ ಗೌರವಿಸಲಾಯಿತು. ಅಂತೆಯೇ ಸಂಘದ ನಿವೃತ್ತ ಸಿಬ್ಬಂದಿಗಳನ್ನು ಗೌರವಪೂರ್ವಕವಾಗಿ ಸಮ್ಮಾನಿಸಿ, ಅವರ ಸೇವೆಯನ್ನು ಗುರುತಿಸಲಾಯಿತು. ಸಂಘದಲ್ಲಿ ಪ್ರಕೃತ ಸೇವೆ ಸಲ್ಲಿಸುತ್ತಿರುವ ಹಾಲಿ ಅಧ್ಯಕ್ಷ-ಉಪಾಧ್ಯಕ್ಷ ಹಾಗೂ ನಿರ್ದೇಶಕರಿಗೆ; ಸಂಘದ ಅಭಿವೃದ್ಧಿಗೆ ಸೇವೆ ಸಲ್ಲಿಸಿದ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನ ವಲಯ ಮೇಲ್ವಿಚಾರಕರಿಗೆ, ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಉಜಿರೆ ಮತ್ತು ಬೆಳ್ತಂಗಡಿ ಶಾಖೆಯ ಮೆನೇಜರ್‌ಗಳಿಗೆ, ನವೋದಯ ಸ್ವ-ಸಹಾಯ ಗುಂಪಿನ ತಾಲೂಕು ಮೇಲ್ವಿಚಾರಕರಿಗೆ, ಸಂಘದ ಮಾಜಿ ಉಪಾಧ್ಯಕ್ಷರುಗಳಿಗೆ, ಮಾಜಿ ನಿರ್ದೇಶಕರುಗಳಿಗೆ, ಬೆಳ್ತಂಗಡಿ ತಾಲೂಕಿನ ಎಲ್ಲ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಅಧ್ಯಕ್ಷರು ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ ಮಾತ್ರವಲ್ಲ; ಸಂಘದ ಹಾಲಿ ಸಿಬ್ಬಂದಿಗಳನ್ನೂ ಗುರುತಿಸಿ, ಸ್ಮರಣಿಕೆ ನೀಡುವ ಮೂಲಕ‌ ಶತಮಾನೋತ್ಸವ ಸಂಭ್ರಮದಲ್ಲಿರುವ ಸಂಘದ ಬೆಳವಣಿಗೆ-ಅಭಿವೃದ್ಧಿಗೆ ಸಹಕರಿಸಿದ ಎಲ್ಲರನ್ನೂ ಗುರುತಿಸಿದ್ದು ಸಮಾರಂಭದ ಹೈಲೈಟ್‌ಗಳಲ್ಲಿ ಒಂದಾಗಿತ್ತು. ಸಂಘದ ನಿರ್ದೇಶಕ ಟಿ.ಎಸ್. ನಿತ್ಯಾನಂದ ರೈ ಎಲ್ಲ ಸಹಕಾರವನ್ನು ಸ್ಮರಿಸಿ, ಆತ್ಮೀಯವಾಗಿ ವಂದಿಸಿದರು.

Latest 5

Related Posts