ಬೆಳ್ತಂಗಡಿ: ಬೆಳ್ತಂಗಡಿ ಲಯನ್ಸ್ ಕ್ಲಬ್ ವತಿಯಿಂದ ರಾಷ್ಟ್ರೀಯ ಪೌಷ್ಟಿಕ ಆಹಾರ ಸಪ್ತಾಹದಂಗವಾಗಿ ಸೆಪ್ಟೆಂಬರ್ 11ರಂದು ಉಜಿರೆಯ ಸಾನಿಧ್ಯ ಕೌಶಲ್ಯ ತರಬೇತಿ ಕೇಂದ್ರದಲ್ಲಿ ಓಣಂ ಸಂಭ್ರಮಾಚರಣೆ ನಡೆಸಲಾಯಿತು. ಬೆಳ್ತಂಗಡಿ ಲಯನ್ಸ್ ಕ್ಲಬ್ ಅಧ್ಯಕ್ಷ ದೇವದಾಸ್ ಶೆಟ್ಟಿ ಓಣಂ ಸಂಭ್ರಮಾಚರಣೆಯನ್ನು ಉದ್ಘಾಟಿಸಿ ಮಾತನಾಡಿ; ಓಣಂ ಕೇರಳದ ಪ್ರಮುಖ ಧಾರ್ಮಿಕ ಹಬ್ಬವಾದರೂ ದೇಶದೆಲ್ಲೆಡೆ ಕೇರಳೀಯರು ನೆಲೆಸಿರುವ ಪ್ರದೇಶಗಳಲ್ಲಿ ಹಬ್ಬವನ್ನು ವಿಶೇಷ ಸಂತಸ ಸಡಗರದಿಂದ ಆಚರಿಸುತ್ತಾರೆ. ಬಲಿಚಕ್ರವರ್ತಿಯ ಆಶೀರ್ವಾದ ಪಡೆದು ಉತ್ತಮ ಅರೋಗ್ಯ ಸಂಪದಗಳಿಗಾಗಿ ಪ್ರಾರ್ಥಿಸಿ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಸಂಭ್ರಮಾಚರಿಸುತ್ತಾರೆ. ಎಲ್ಲರಿಗೂ ಓಣಂ ಹಬ್ಬದ ಹಾರ್ದಿಕ ಶುಭಾಶಯಗಳು ಎಂದು ಶುಭ ಹಾರೈಸಿದರು. ಉಜಿರೆ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಪ್ರಕಾಶ್ ಶೆಟ್ಟಿ ನೊಚ್ಚ ಮಾತನಾಡಿ; ನಾವೆಲ್ಲರೂ ಒಟ್ಟಾಗಿ ಕೂಡು ಕುಟುಂಬದಲ್ಲಿ ಒಂದೇ ತಾಯಿಯ ಮಕ್ಕಳಂತೆ ಸೌಹಾರ್ದತೆಯಿಂದ ಸಮಾಜದಲ್ಲಿ ಬಾಳಿ ಬದುಕುವ ಸಂದೇಶ ಸಾರುವ ಓಣಂ ಹಬ್ಬವನ್ನು ಕೇರಳೀಯರು ನೆಲೆಸಿರುವ ಎಲ್ಲ ಕಾಲೇಜು, ಆಸ್ಪತ್ರೆಗಳಲ್ಲಿ ಹಬ್ಬದ ವಾತಾವರಣದಲ್ಲಿ ಆಚರಿಸುವರು. ಕೇರಳದಲ್ಲಿ ಒಂದೇ ಬಾಳೆಎಲೆಯಲ್ಲಿ ಬಡಿಸಿಕೊಂಡು ಒಟ್ಟಾಗಿ ಕುಳಿತು ತಿನ್ನುವ ಸಂಪ್ರದಾಯ ನಡೆದುಬಂದಿದೆ. ದೇವರ ಮಕ್ಕಳಾದ ವಿಶೇಷ ಚೇತನ ಮಕ್ಕಳು ಹಬ್ಬವನ್ನು ಇತರರಂತೆ ಸಂತೋಷದಿಂದ ಆಚರಿಸಲೆಂದು ಆಶಿಸಿ ಶುಭ ಕೋರಿದರು. ಲಯನ್ಸ್ ಕ್ಲಬ್ ವಲಯಾಧ್ಯಕ್ಷ ಉಮೇಶ್ ಶೆಟ್ಟಿ ಮತ್ತು ಮಾಜಿ ವಲಯಾಧ್ಯಕ್ಷ ವಸಂತ ಶೆಟ್ಟಿ ಶ್ರದ್ಧಾ ಶುಭಾಶಂಸನೆಗೈದರು. ಉಜಿರೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಉಷಾಕಿರಣ್ ಕಾರಂತ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ; ಸಾನಿಧ್ಯ ಕೇಂದ್ರದ ವಿಶೇಷ ಚೇತನ ಮಕ್ಕಳಿಗೆ ಶುಭಾಶಯ ಕೋರಿದರು. ಉಪಾಧ್ಯಕ್ಷ ರವಿಕುಮಾರ್ ಬರಮೇಲು, ಉಜಿರೆ ರಬ್ಬರ್ ಸೊಸೈಟಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಜು ಶೆಟ್ಟಿ, ಮಾಜಿ ಯೋಧ ಜಗನ್ನಾಥ ಶೆಟ್ಟಿ, ನಾಣ್ಯಪ್ಪ ನಾಯ್ಕ್, ಸುಂದರಿ, ಸಾನಿಧ್ಯ ಕೇಂದ್ರದ ಗೌರವ ಸಲಹೆಗಾರ ಪ್ರೇಮರಾಜ್, ರೋಷನ್ ಸಿಕ್ವೇರಾ ಉಪಸ್ಥಿತರಿದ್ದರು. ಶಿಕ್ಷಕ ದಿನಾಚರಣೆ ಪ್ರಯುಕ್ತ ಲಯನ್ಸ್ ಕ್ಲಬ್ ವತಿಯಿಂದ ಸಾನಿಧ್ಯದ 6ಮಂದಿ ಶಿಕ್ಷಕಿಯರನ್ನು ವಿಶೇಷವಾಗಿ ಸಮ್ಮಾನಿಸಿ, ಗೌರವಿಸಲಾಯಿತು. ಸಾನಿಧ್ಯ ಕೇಂದ್ರದ ಮಕ್ಕಳು ಹಾಗು ಶಿಕ್ಷಕಿಯರಿಂದ ನೃತ್ಯ ಕಾರ್ಯಕ್ರಮ ನಡೆಯಿತು. ಕೇಂದ್ರದ ಮೇಲ್ವಿಚಾರಕಿ ಮಲ್ಲಿಕಾ ಸ್ವಾಗತಿಸಿ, ಪ್ರಸ್ತಾವಿಕವಾಗಿ ಮಾತನಾಡಿದರು. ಫಿಸಿಯೋಥೆರಪಿಸ್ಟ್ ಅಬೂಬಕ್ಕರ್ ಸಿದ್ದಿಕ್ ಕಾರ್ಯಕ್ರಮ ನಿರೂಪಿಸಿ, ಲಯನ್ಸ್ ಕ್ಲಬ್ ಕಾರ್ಯದರ್ಶಿ ಕಿರಣ್ ಕುಮಾರ್ ಶೆಟ್ಟಿ ವಂದಿಸಿದರು. ಕೇಂದ್ರದ ಮಕ್ಕಳು ಹಾಗಿ ಶಿಕ್ಷಕಿಯರಿಗೆ ಲಯನ್ಸ್ ಕ್ಲಬ್ ಪ್ರಾಯೋಜಕತ್ವದಲ್ಲಿ ಮದ್ಯಾಹ್ನದ ಸವಿಭೋಜನ ಒದಗಿಸಲಾಯಿತು.






