ಬೆಳ್ತಂಗಡಿ: ಬೆಳ್ತಂಗಡಿ ತಾಲೂಕಿನಲ್ಲಿ 8ಗ್ರಾಮಗಳ ವಿಶಾಲ ಕಾರ್ಯವ್ಯಾಪ್ತಿ ಹೊಂದಿರುವ ನಮ್ಮ ಸಹಕಾರಿ ಸಂಘವು ಸದಸ್ಯರ ಹಾಗೂ ಕೃಷಿಕರ ಅವಶ್ಯಕತೆಗಳಿಗೆ ತುರ್ತು ಸ್ಪಂದನೆ ನೀಡುವ ಮೂಲಕ ಅಗತ್ಯ ಸಾಲದ ವ್ಯವಸ್ಥೆಯನ್ನು ಕಲ್ಪಿಸಲಾಗಿತ್ತಿದೆ. ರಾಷ್ಟ್ರೀಕೃತ ಬ್ಯಾಂಕ್‌ಗಳಿಗಿಂತ ತ್ವರಿತವಾಗಿ ಗ್ರಾಹಕರಿಗೆ ಸೇವೆಯನ್ನು ನೀಡುತ್ತಿರುವ ನಮ್ಮ ಸಂಘ ಗ್ರಾಮದ ಜನತೆ ಆರ್ಥಿಕವಾಗಿ ಸಬಲರಾಗಲು ಕೊಡುಗೆ ನೀಡುತ್ತಿದೆ ಎಂದು ವೇಣೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಸುಂದರ ಹೆಗ್ಡೆ ಬಿ.ಇ. ಹೇಳಿದರು.ಅವರು ವೇಣೂರು ಶ್ರೀ ಬಾಹುಬಲಿ ಸಭಾಭವನದಲ್ಲಿ ನಡೆದ ವೇಣೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.ನಮ್ಮ ಸಂಘವು ಕೃಷಿಕ ಸದಸ್ಯರ ಸರ್ವ ರೀತಿಯ ಸಹಕಾರದೊಂದಿಗೆ ಸಂಘದ ಆಡಳಿತ ಮತ್ತು ಸದಸ್ಯರು, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮತ್ತು ಸಿಬ್ಬಂದಿವರ್ಗದ ಪರಿಶ್ರಮದಿಂದ ಕಳೆದ 7ವರ್ಷಗಳಿಂದ ನಿರಂತರವಾಗಿ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನೀಡುವ ‘ಅತ್ಯುತ್ತಮ ಸಹಕಾರಿ ಸಂಘ’ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದೆ. ಪ್ರತೀ ವರ್ಷ ವಾರ್ಷಿಕ ಮಹಾಸಭೆಯಲ್ಲಿ ಸಾಧಕರಿಗೆ ಸಮ್ಮಾನ, ವಿದ್ಯಾರ್ಥಿ ವೇತನ ವಿತರಣೆ ಮಾತ್ರವಲ್ಲ; ವಿವಿಧ ಸಂಘಸಂಸ್ಥೆಗಳ ಸಹಭಾಗಿತ್ವದಲ್ಲಿ ಸಮಾಜಮುಖಿ ಕಾರ್ಯಗಳನ್ನು ಮಾಡುತ್ತಿದೆ ಎಂದು ಸುಂದರ ಹೆಗ್ಡೆ ಸಂಘದ ಕಾರ್ಯಚಟುವಟಿಕೆಗಳನ್ನು ವಿವರಿಸಿದರು. ಕಳೆದ ಹತ್ತು ವರ್ಷಗಳಲ್ಲಿ ಸಂಘವು ಉತ್ತಮ ವ್ಯವಹಾರದ ಮೂಲಕ ಅಭಿವೃದ್ಧಿ ಪಥದಲ್ಲಿ ದಾಪುಗಾಲು ಇಡುತ್ತಿದೆ ಎಂಬುವುದನ್ನು ಅಂಕಿ-ಅಂಶಗಳ ಸಹಿತ ಸಭೆಯ ಮುಂದಿಟ್ಟ ಅಧ್ಯಕ್ಷ ಸುಂದರ ಹೆಗ್ಡೆ; 2014-15ರಲ್ಲಿ ರೂಪಾಯಿ 21.50ಕೋಟಿ ವ್ಯವಹಾರ ನಡೆಸಿದ್ದ ನಮ್ಮ ಸಂಸ್ಥೆ ವರದಿ ವರ್ಷದಲ್ಲಿ 328ಕೋಟಿ ರೂಪಾಯಿ ವ್ಯವಹಾರ ನಡೆಸಿದೆ. ವರದಿ ವರ್ಷ ಸಂಘವು 1.59ಕೋಟಿ ರೂಪಾಯಿ ನಿವ್ವಳ ಲಾಭ ಗಳಿಸಿದ್ದು, ಸದಸ್ಯರಿಗೆ 20% ಡಿವಿಡೆಂಡ್ ನೀಡಲಾಗುವುದು ಎಂದು ಘೋಷಿಸಿದರು.ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಯಂತ ಪೂಜಾರಿ ಮಾತನಾಡಿ; ಸದಸ್ಯರ ಸಹಕಾರ ಹಾಗೂ ಆಡಳಿತ ಮಂಡಳಿಯ ಪ್ರೋತ್ಸಾಹದಿಂದ ಸಂಘವು ಸತತವಾಗಿ ಲಾಭ ಗಳಿಸುತ್ತಿದ್ದು, ಸಹಕರಿಸಿದ ಸದಸ್ಯರಿಗೆ ಮತ್ತು ಗ್ರಾಮಹಕರಿಗೆ ಮನದಂತರಾಳದ ಕೃತಜ್ಞತೆಗಳು ಎಂದರು.ವಿವಿಧ ಕ್ಷೇತ್ರಗಳಲ್ಲಿ ವಿಶೇಷ ಸಾಧನೆಗೈದ ಗುಣಪಾಲ ಅತಿಕಾರಿ, ಲಿಂಗು ಮೇರ, ಹರೀಶ್, ಡೊಮೈನಿಕ್ ಪಾಯ್ಸ್, ಅಕ್ಕಮ್ಮ, ಜಾನಕಿ, ನಾರ್ಣಪ್ಪ ಪೂಜಾರಿ, ಸುಬ್ಬಣ್ಣ ಶೆಟ್ಟಿ, ಗೋಪಾಲಕೃಷ್ಣ ನಾಯಕ್, ಶೀನ ಕನಡ, ಗುಣಪಾಲ ಆರಿಗ, ಸೋಮಪ್ಪ ಮೂಲ್ಯ, ಅಬೂಬಕ್ಕರ್‌ರನ್ನು ಸಮ್ಮಾನಿಸಲಾಯಿತು.ಸಂಘದ ಉಪಾಧ್ಯಕ್ಷ ಸುಂದರ ಪೂಜಾರಿ, ಆಡಳಿತ ಮಂಡಳಿಯ ಸದಸ್ಯರಾದ ರಾಮ್‌ದಾಸ್ ನಾಯಕ್, ಆಶಾ, ಸಂದೀಪ್ ಹೆಗ್ಡೆ, ವೀಣಾ, ನಾಗಪ್ಪ, ರತ್ನಾಕರ ಬಿ., ಎಂ.ಆರ್. ಸಂತೋಷ್, ದೋಗು ನಾಯ್ಕ, ಗಣಪತಿ ಪ್ರಸನ್ನ ಬಿ., ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನ ವಲಯ ಮೇಲ್ವಿಚಾರಕ ಸಿರಾಜುದ್ದೀನ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.






