ಬೆಳ್ತಂಗಡಿ: ಪ್ರಕೃತಿ, ಪ್ರಾಣಿ ಸಹಿತ ಎಲ್ಲ ಚರಾಚರ ವಸ್ತುಗಳಲ್ಲಿ ದೇವರನ್ನು ಕಾಣುವುದು ಭಾರತೀಯ ಸಂಸ್ಕೃತಿ. ದೇವರಿಗೆ ಸಮಾನವಾಗಿ ಕಲೆಯನ್ನು ದೈವತ್ವಕ್ಕೇರಿಸಿ ಆರಾಧಿಸಿಕೊಂಡು ಬರುತ್ತಿರುವುದು ಸ್ಮರಣೀಯ. ಧಾರ್ಮಿಕ ಕ್ಷೇತ್ರಗಳಲ್ಲಿ ಕಲೆಗೆ ಪ್ರೋತ್ಸಾಹ ನಡೆದುಕೊಂಡು ಬಂದಿದೆ. ನೃತ್ಯ, ಸಂಗೀತ, ಯಕ್ಷಗಾನ ಕಲೆಯ ರುಚಿ ಆಸ್ವಾದಿಸಲು ಅವಕಾಶ ದೊರೆಯುತ್ತಿದ್ದು, ಏನೇ ಅಡೆತಡೆಯಿದ್ದರೂ ಅದನ್ನು ಮೀರಿ ಹಿರಿಯರು ಬೆಳೆಸಿದ ಕಲಾಪರಂಪರೆಯನ್ನು ಉಳಿಸುವ ಕಾರ್ಯ ಮಂಗಳೂರಿನ ನಾಟ್ಯಾರಾಧನಾ ಕಲಾ ಕೇಂದ್ರ ಮಾಡುತ್ತಿರುವುದು ಶ್ಲಾಘನೀಯ ಎಂದು ಉಜಿರೆ ಶ್ರೀ ಜನಾರ್ದನ ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರ ಶರತ್‌ಕೃಷ್ಣ ಪಡುವೆಟ್ಣಾಯ ಹೇಳಿದರು.ಅವರು ಸೆಪ್ಟೆಂಬರ್ 14ರಂದು ಉಜಿರೆ ಶ್ರೀ ರಾಮಕೃಷ್ಣ ಸಭಾ ಮಂಟಪದಲ್ಲಿ ನಡೆದ ನಾಟ್ಯಾರಾಧನಾ ತ್ರಿಂಶೋತ್ಸವದ ಸರಣಿ ನೃತ್ಯ ಕಾರ್ಯಕ್ರಮಗಳ ನೃತ್ಯಾಮೃತ ‘ದೃಷ್ಟಿ-ಸೃಷ್ಟಿ’ ಯನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಉಜಿರೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನ ಪ್ರಾಂಶುಪಾಲ ಡಾ. ಬಿ.ಎ. ಕುಮಾರ ಹೆಗ್ಡೆ ಮಾತನಾಡಿ; ಪಾಶ್ಚಿಮಾತ್ಯ ದಾಳಿಯ ನಡುವೆಯೂ ಪರಂಪರೆಯ ಭರತನಾಟ್ಯವನ್ನು ಅನಾದಿಕಾಲದಿಂದಲೂ ಆಸ್ತಿಯಾಗಿ ಸಂರಕ್ಷಿಸಿಕೊಂಡು ಬಂದಿದ್ದೇವೆ. ಯೋಗ, ಧ್ಯಾನ, ಪ್ರತ್ಯಾಹಾರ, ಶರೀರ ಸುಸ್ಥಿತಿಯಿಂದ ಭರತನಾಟ್ಯದ ಅಭಿವ್ಯಕ್ತಿ ಪ್ರಸ್ತುತಿ ಸಾಧ್ಯ. ಕಲಾವಿದರು ತಾಳ, ಲಯಬದ್ಧ ನಾಟ್ಯಾಭಿನಯದಲ್ಲಿ ಪ್ರಬುದ್ಧತೆ ಮೆರೆದಿದ್ದು ಅವರಿಗೆ ಉತ್ತರೋತ್ತರ ಭವಿಷ್ಯವಿದೆ ಎಂದು ಅಭಿಪ್ರಾಯಿಸಿದರು. ಕಲಾನಿಕೇತನ ಕಲ್ಲಡ್ಕ ಇದರ ನಿರ್ದೇಶಕಿ ವಿದುಷಿ ವಿದ್ಯಾ ಮನೋಜ್, ನೀನಾಸಂ ಕಲಾವಿದೆ ಸಂಗೀತಾ ಭಿಡೆ ಶುಭಾಶಂಸನೆಗೈದರು. ಪುರೋಹಿತ ಗಣಪತಿ ಚಿಪಳೂಣಕರ್ ಮತ್ತು ಕಲಾಕೇಂದ್ರದ ಟ್ರಸ್ಟಿ ಬಿ. ರತ್ನಾಕರ ರಾವ್, ಧನಂಜಯ ಭಿಡೆ ಉಪಸ್ಥಿತರಿದ್ದರು.’ದೃಷ್ಟಿ-ಸೃಷ್ಟಿ’ ಕಾರ್ಯಕ್ರಮ ಸಂಯೋಜಕಿ ಚಿತ್ರಾ ಭಿಡೆ ಸ್ವಾಗತಿಸಿ, ಪ್ರಧಾನ ಟ್ರಸ್ಟಿ ವಿದುಷಿ ಸುಮಂಗಲಾ ರತ್ನಾಕರ ರಾವ್ ಪ್ರಸ್ತಾವಿಕವಾಗಿ ಮಾತನಾಡಿದರು.. ಮಲ್ಲಿಕಾ ಜ್ಯೋತಿಗುಡ್ಡೆ ನಿರೂಪಿಸಿದ ಕಾರ್ಯಕ್ರಮದಲ್ಲಿ ಚೈತ್ರ ರಾವ್ ವಂದಿಸಿದರು. ವಿದುಷಿ ಸುಮಂಗಲಾ ರಾವ್, ವಿದ್ವಾನ್ ಶೋಧನ್ ಕುಮಾರ್, ವೃಂದಾ ಜಿ.ರಾವ್, ಧರಿತ್ರಿ ಭಿಡೆ ಮತ್ತು ಹಂಸಿನಿ ಭಿಡೆ ಅವರು ಪುರಂದರದಾಸರ ಕೃತಿ ‘ಪಿಳ್ಳಂಗೋವಿಯ ಚೆಲುವ ಕೃಷ್ಣನ ಎಲ್ಲಿ ನೋಡಿದಿರಿ’ ನಾಟ್ಯಾಭಿನಯದಲ್ಲಿ ಭಾವಪ್ರಧಾನ ನೃತ್ಯಗಳನ್ನು ಪ್ರಸ್ತುತ ಪಡಿಸಿದರು. ವಿದುಷಿ ಸುಮಂಗಲಾ ರತ್ನಾಕರ ರಾವ್ ಅವರ ನೃತ್ಯ ನಿರ್ದೇಶನದಲ್ಲಿ ವಿದುಷಿ ಪ್ರೀತಿಕಲಾ ದೀಪಕ್ ಪುತ್ತೂರು ಅವರು ಹಾಡುಗಾರಿಕೆಯನ್ನು, ವಿದ್ವಾನ್ ಶ್ಯಾಮ ಭಟ್ ಪುತ್ತೂರು ಅವರು ಮೃದಂಗದಲ್ಲಿ, ಮೇಧಾ ಮಂಗಳೂರು ಅವರು ಕೊಳಲಿನಲ್ಲಿ ಸಹಕರಿಸಿದರು.






