ತಾಲೂಕು ಮಟ್ಟದ ತುಳು ಸಾಹಿತ್ಯ ರಚನಾ ಕಮ್ಮಟ

ತಾಲೂಕು ಮಟ್ಟದ ತುಳು ಸಾಹಿತ್ಯ ರಚನಾ ಕಮ್ಮಟ
Facebook
Twitter
LinkedIn
WhatsApp

ಬೆಳ್ತಂಗಡಿ: ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಮಂಗಳೂರು ಮತ್ತು ತುಳು ಸಂಘ ವಾಣಿ ಪದವಿಪೂರ್ವ ಕಾಲೇಜು ಬೆಳ್ತಂಗಡಿ ಇದರ ಜಂಟಿ ಆಶ್ರಯದಲ್ಲಿ ತಾಲೂಕು ಮಟ್ಟದ 2 ದಿನಗಳ ತುಳು ಸಾಹಿತ್ಯ ರಚನಾ ಕಮ್ಮಟಕ್ಕೆ ಸೆಪ್ಟೆಂಬರ್ 13ರಂದು ವಾಣಿ ಪದವಿಪೂರ್ವ ಕಾಲೇಜಿನ ಸಭಾಂಗಣದಲ್ಲಿ ಚಾಲನೆ ನೀಡಲಾಯಿತು.ಕಾರ್ಯಕ್ರಮವನ್ನು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ದಕ್ಷಿಣ ಕನ್ನಡ ಜಿಲ್ಲಾ ಅಧ್ಯಕ್ಷ ತಾರಾನಾಥ ಗಟ್ಟಿ ದೀಪ ಬೆಳಗಿಸಿ ಉದ್ಭಾಟಿಸಿ ಮಾತನಾಡಿ; ದ್ರಾವಿಡ ಭಾಷಾ ವರ್ಗದಲ್ಲಿ ತುಳುವಿಗೆ ವಿಶಿಷ್ಟವಾದ ಸ್ಥಾನವಿದೆ. ತುಳುವಿಗೆ ಸತ್ವವಿದೆ, ಭಾಷಾ ಸಂಪತ್ತಿದೆ. 1856ರಷ್ಟು ಹಿಂದೆಯೇ ದ್ರಾವಿಡ ಭಾಷೆಗಳ ತೌಲನಿಕ ವ್ಯಾಕರಣವನ್ನು ಬರೆದ ರಾಬರ್ಟ್ ಕಾಲ್ದವೆಲ್ನು ತುಳು ಚೆನ್ನಾಗಿ ಬೆಳವಣಿಗೆ ಹೊಂದಿದ ಭಾಷೆ ಎಂದು ಕೊಂಡಾಂಡಿದ್ದಾನೆ. ತುಳು ಲಿಪಿಗೆ ಯುನಿಕೋಡ್ ಮಾನ್ಯತೆ ನೀಡಿದ್ದು, ತುಳು ಸಾಹಿತ್ಯ ಅಕಾಡೆಮಿಯ ಹಾಗೂ ಸಮಸ್ತ ತುಳುವರ ಬಹು ವರ್ಷದ ಕನಸು ಈಡೇರಿದೆ ಎಂದು ಹೇಳಿದರು.ತುಳು ಲಿಪಿಗಿರುವ ಇನ್ನೊಂದು ಹೆಸರಿನ ಜೊತೆಗೆ ತುಳು ತಿಗಳಾರಿ ಎಂಬುದಾಗಿ ಯುನಿಕೋಡ್ ಅಂಗೀಕರಿಸಿದೆ. ಈ ಮೂಲಕ ಜಾಗತಿಕವಾಗಿ ತುಳು ಲಿಪಿಯಲ್ಲಿನ ಪಠ್ಯಗಳು ಓದಲು ತೆರೆದುಕೊಳ್ಳುವ ಅವಕಾಶ ಲಭಿಸಿದೆ. ತುಳು ಭಾಷೆಯನ್ನು ಕರ್ನಾಟಕದ ಹೆಚ್ಚುವರಿ ಅಧಿಕೃತ ಭಾಷೆಯಾಗಿ ಘೋಷಣೆ ಮಾಡುವ ನಿಟ್ಟಿನ ಪ್ರಯತ್ನಕ್ಕೆ ಈಗ ಹೆಚ್ಚಿನ ಮಹತ್ವ ಬಂದಿದೆ. ಈಗಾಗಲೇ ಪಾಲ್ತಾಡಿ ರಾಮಕೃಷ್ಣ ಅಚಾರ್ ಅಧ್ಯಕ್ಷರಾಗಿದ್ದ ಅವಧಿಯಲ್ಲಿ ಪ್ರೌಢ ಶಾಲಾಮಟ್ಟದಲ್ಲಿ ಒಂದು ಪಾಠವಾಗಿ ತುಳು ಬಂತು. ಕಳೆದ ಶೈಕ್ಷಣಿಕ ಅವಧಿಯಲ್ಲಿ ಜಿಲ್ಲೆಯಲ್ಲಿ 333 ಮಕ್ಕಳು ತುಳು ಪಾಠದಲ್ಲಿ ನೂರಕ್ಕೆ ನೂರು ಅಂಕ ಗಳಿಸಿದ್ದಾರೆ, ಅವರೆಲ್ಲರನ್ನು ಅಕಾಡೆಮಿ ಪುರಸ್ಕರಿಸಿದೆ ಎಂದು ತಿಳಿಸಿದರು.ಅಧ್ಯಕ್ಷತೆ ವಹಿಸಿದ ಬೆಳ್ತಂಗಡಿ ವಾಣಿ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಪಿ. ಕುಶಾಲಪ್ಪ ಗೌಡ ಮಾತನಾಡಿ; ಇಂದು ನಾವು ನಮ್ಮ ಭಾಷೆ, ಸಂಸ್ಕೃತಿಯನ್ನು ಮರೆಯುತ್ತಿದ್ದೇವೆ. ನಮ್ಮ ಸಂಸ್ಕೃತಿ ಉಳಿಯಲು ಭಾಷೆ ಮುಖ್ಯ. ತುಳುವಿನ ಬಗ್ಗೆ ಆನೇಕ ಸಂಶೋಧನೆಗಳು ಆಗಬೇಕು. ತುಳು ಭಾಷೆ ಸಂವಿಧಾನದ 8ನೇ ಪರಿಚ್ಛೇಧಕ್ಕೆ ಸೇರಿಸುವ ಪ್ರಯತ್ನ ನಮ್ಮದಾಗಬೇಕು ಎಂದು ಅಭಿಪ್ರಾಯಿಸಿದರು. ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಮಂಗಳೂರು ಸದಸ್ಯ ಶೈಲೇಶ್ ಕುಮಾರ್ ಮಾತನಾಡಿ; ತುಳು ಭಾಷೆ ಮತ್ತು ಸಂಸ್ಕೃತಿಯ ಮೇಲೆ ನಮಗೆ ಅಭಿಮಾನ ಬೇಕು. ತುಳು ಸೇರಿದಂತೆ ಆನೇಕ ಭಾಷೆಗಳು ಇಂದು ನಶಿಸುವ ಹಂತಕ್ಕೆ ಬರುತ್ತಿದೆ. ಕೊರಗ ಸಮುದಾಯದವರು ಮಾತನಾಡುವ ಒಂದು ಭಾಷೆ ಇದೆ. ಆದರೆ ಇಂದಿನ ಯುವಕರಲ್ಲಿ ಕೇಳಿದರೆ ಅವರಿಗೆ ಗೊತ್ತಿಲ್ಲ. ಇದಕ್ಕಾಗಿ ಎಷ್ಟೇ ಪರಿವರ್ತನೆಗಳಾದರೂ ಮೂಲ ಪರಂಪರೆಯನ್ನು ಮರೆಯಬಾರದು‌ ಭಾಷೆಯನ್ನು ಉಳಿಸಿ, ಬೆಳೆಸುವ ನಿಟ್ಟಿನಲ್ಲಿ ಆಕಾಡೆಮಿ ಹಲವು ಕಾರ್ಯಕ್ರಮಗಳನ್ನು ಮಾಡುತ್ತಿದೆ ಎಂದು ತಿಳಿಸಿದರು. ಉಜಿರೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನ ಕನ್ನಡ ಪ್ರಾದ್ಯಾಪಕ ಡಾ. ದಿವಾ ಕೊಕ್ಕಡ ಉಪಸ್ಥಿತರಿದ್ದರು. ತುಳು ಕಲಿಕಾ ಶಿಕ್ಷಕಿ ಸಂಧ್ಯಾ ಸೇರಿದಂತೆ ತಾಲೂಕಿನ ವಿವಿಧ ಪದವಿಪೂರ್ವ ಕಾಲೇಜಿನ 55 ಮಂದಿ ವಿದ್ಯಾರ್ಥಿಗಳು ಕಮ್ಮಟದಲ್ಲಿ ಭಾಗವಹಿಸಿದರು. ಸಿಂಚನಾ, ಜಯಶ್ರೀ ಹಾಗೂ ಕೀರ್ತಿ ಪ್ರಾರ್ಥಿಸಿದರು. ಬೆಳ್ತಂಗಡಿ ವಾಣಿ ಪದವಿಪೂರ್ವ ಕಾಲೇಜು ಪ್ರಾಂಶುಪಾಲ ಯದುಪತಿ ಗೌಡ ಸ್ವಾಗತಿಸಿದರು. ಕಾಲೇಜಿನ ತುಳು ಸಂಘದ ಸಂಯೋಜಕ ಹಾಗೂ ಉಪನ್ಯಾಸಕ ಮಹಾಬಲ ಗೌಡ ಕಾರ್ಯಕ್ರಮ ನಿರೂಪಿಸಿದರು. ಉಪನ್ಯಾಸಕಿ ಮೀನಾಕ್ಷಿ ವಂದಿಸಿದರು.

Latest 5

Related Posts