ಬೆಳ್ತಂಗಡಿ: ವರದಿ ವರ್ಷದಲ್ಲಿ ಸಂಘವು 623 ಕೋಟಿ ರೂಪಾಯಿಗಿಂತ ಅಧಿಕ ವ್ಯವಹಾರ ನಡೆಸಿದ್ದು 2 ಕೋಟಿ ರೂಪಾಯಿಗಿಂತ ಅಧಿಕ ಲಾಭಗಳಿಸಿದೆ. ಸದಸ್ಯರಿಗೆ 15%ದಂತೆ ಡಿವಿಡೆಂಡ್ ನೀಡಲು ನಿರ್ಣಯಿಸಲಾಗಿದೆ ಎಂದು ಮುಂಡಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ನೂಜಿ ಜನಾರ್ದನ ಗೌಡ ಹೇಳಿದರು. ಮುಂಡಾಜೆಯ ಸನ್ಯಾಸಿಕಟ್ಟೆ ಶ್ರೀ ಪರಶುರಾಮ ದೇವಸ್ಥಾನದ ಭಾರ್ಗವ ಸಭಾಭವನದಲ್ಲಿ ಸೆಪ್ಟೆಂಬರ್ 14ರಂದು ಜರಗಿದ ಸಂಘದ ಮಹಾಸಭೆಯಲ್ಲಿ ಮಾತನಾಡಿದ ಅವರು ವರದಿ ವರ್ಷದಲ್ಲಿ 6,023 ಎ ತರಗತಿ ಸದಸ್ಯರು, 8,321 ಸಿ ಮತ್ತು ಡಿ ವರ್ಗದ ಸದಸ್ಯರಿದ್ದು 7.21ಕೋಟಿ ರೂಪಾಯಿ ಪಾಲು ಬಂಡವಾಳ ಹೊಂದಿದೆ. 72 ಕೋಟಿ ರೂಪಾಯಿಗಿಂತ ಅಧಿಕ ಠೇವಣಿ ಸಂಗ್ರಹವಿದ್ದು, 100 ಕೋಟಿ ರೂಪಾಯಿಗಿಂತ ಅಧಿಕ ಸಾಲವನ್ನು ಸದಸ್ಯರಿಗೆ ವಿತರಿಸಲಾಗಿದೆ. ಕಳೆದ ಹಲವಾರು ವರ್ಷಗಳಿಂದ ಸಂಘವು 100% ಸಾಲ ವಸೂಲಿ ಮಾಡುತ್ತಿದ್ದು, ಜಿಲ್ಲಾ ಸಹಕಾರಿ ಬ್ಯಾಂಕ್ನ ಪ್ರಶಸ್ತಿಗೆ ಪಾತ್ರವಾಗಿದೆ ಎಂದು ಹೇಳಿದರು. ಸಂಘವು ಯಂತ್ರೋಪಕರಣ ಮಳಿಗೆ ಆರಂಭಿಸಿದ್ದು ಸದಸ್ಯರಿಗೆ ಪ್ರಯೋಜನ ನೀಡಿದೆ. ಸಾರ್ವಜನಿಕರ ಉಪಯೋಗಕ್ಕಾಗಿ ನೂತನ ವಾಸ್ತವ್ಯದ ಮನೆ ಹಾಗೂ ಮಿನಿಹಾಲ್ ನಿರ್ಮಿಸಿದೆ ಎಂದು ಹೇಳಿದರು. ಮಹಾಸಭೆ ನೋಟಿಸಿನಲ್ಲಿ ಸವಿವರವಾದ ಲೆಕ್ಕಪತ್ರ ನೀಡದ ಕುರಿತು ಸದಸ್ಯರಾದ ವೆಂಕಟೇಶ್ವರ ಭಟ್, ನಾಮದೇವ ರಾವ್, ರೆಹಮಾನ್, ಬಾಬು ಪೂಜಾರಿ ಮತ್ತಿತರರು ಆಕ್ಷೇಪ ವ್ಯಕ್ತಪಡಿಸಿದರು. ನೋಟಿಸಿನ ಖರ್ಚು ವೆಚ್ಚ ಅಧಿಕವಾಗುವ ಕಾರಣ ಇದನ್ನು ನೀಡಿಲ್ಲ; ಅಗತ್ಯ ಇರುವ ಸದಸ್ಯರು ಸಂಘದಿಂದ ಪಡೆದುಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಮುಂದಿನ ವರ್ಷದಿಂದ ನೋಟಿಸಿನ ಜೊತೆ ನೀಡಲು ಕ್ರಮ ಕೈಗೊಳ್ಳುವುದಾಗಿ ನಿರ್ಣಯಿಸಲಾಯಿತು. ಉಪಾಧ್ಯಕ್ಷ ಪ್ರಕಾಶ ನಾರಾಯಣ ಸ್ವಾಗತಿಸಿದರು. ಶಾಖಾ ಪ್ರಬಂಧಕ ಪ್ರಸನ್ನ ಪರಾಂಜಪೆ, ಆಂತರಿಕ ಲೆಕ್ಕಪರಿಶೋಧಕ ನಾರಾಯಣ ಫಡಕೆ ಕಾರ್ಯಕ್ರಮ ನಿರೂಪಿಸಿದರು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಚಂದ್ರಕಾಂತ ಪ್ರಭು, ಸಂಘದ ನಿರ್ದೇಶಕರು ಹಾಗೂ ಸದಸ್ಯರು ಉಪಸ್ಥಿತರಿದ್ದರು.






