‘ ಬೆಳ್ತಂಗಡಿ: ಇಂದಿನ ಶಿಕ್ಷಣ ಪದ್ಧತಿಯಲ್ಲಿ ಮಹತ್ತರ ಬದಲಾವಣೆಯಾಗಬೇಕಾಗಿದೆ. ಪ್ರತಿಯೊಬ್ಬರೂ ವ್ಯಕ್ತಿ ಗೌರವ, ದೇಶಭಕ್ತಿ ಹೊಂದಿ ಪೋಷಕರು ಬ್ರಾಹ್ಮಣ್ಯ ಉಳಿಸುವ ಜೊತೆಗೆ ಮಾದರಿ ಶಾಲೆ ಸ್ಥಾಪಿಸುವ ಹೆಜ್ಜೆಯಿರಿಸಬೇಕಾಗಿದೆ. ವ್ಯವಹಾರ, ಆರ್ಥಿಕತೆಯಲ್ಲಿ ಜಾಗತಿಕ ಹಾಗೂ ರಾಷ್ಟ್ರಮಟ್ಟದ ಅರಿವು ಹೊಂದಿ ಧೈರ್ಯದಿಂದ ಒಗ್ಗಟ್ಟಿನಿಂದ ಮುನ್ನುಗ್ಗಬೇಕಾಗಿದೆ. ತುಳು ಶಿವಳ್ಳಿ ಸಮಾಜವನ್ನು ಬಲಪಡಿಸಲು ಎಲ್ಲರೂ ಸಕ್ರಿಯರಾಗಬೇಕು ಎಂದು ನಿಡ್ಲೆಯ ಅಗ್ರಿಲೀಫ್ ಸಂಸ್ಥೆಯ ಸಂಸ್ಥಾಪಕ ಅವಿನಾಶ್ ರಾವ್ ಹೇಳಿದರು. ಅವರು ಸೆಪ್ಟೆಂಬರ್ 16ರಂದು ಉಜಿರೆ ಶ್ರೀ ರಾಮಕೃಷ್ಣ ಸಭಾಮಂಟಪದಲ್ಲಿ ತುಳು ಶಿವಳ್ಳಿ ಸಭಾ ಉಜಿರೆ ವಲಯದ ವತಿಯಿಂದ ನಡೆದ ಗುರುವಂದನಾ, ಪ್ರತಿಭಾ ಪುರಸ್ಕಾರ, ಸಾಧಕರಿಗೆ ಗೌರವಾರ್ಪಣೆ ಹಾಗೂ ಕಸಿ ಕಟ್ಟುವ ಕಾರ್ಯಾಗಾರದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ; ಸಾಧಕರನ್ನು ಪುರಸ್ಕರಿಸಿ, ಪ್ರ ತಿಭಾನ್ವಿತ ವಿದ್ಯಾರ್ಥಿಗಳನ್ನು ಗೌರವಿಸಿ ಮಾತನಾಡುತ್ತಿದ್ದರು. ನಿಡ್ಲೆಯ ಗ್ರಾಮಾಂತರ ಪ್ರದೇಶದಲ್ಲಿ ಕಳೆದ ಮಾರ್ಚ್ ವರ್ಷಾಂತ್ಯಕ್ಕೆ ರೂಪಾಯಿ 25 ಕೋಟಿ ಆರ್ಥಿಕ ವ್ಯವಹಾರ ನಡೆಸಿ ಜಿಲ್ಲೆಯ ಏಕೈಕ ಸಂಸ್ಥೆಯಾಗಿ ಬೆಳೆದ ಅಗ್ರಿಲೀಫ್ ಹಾಳೆತಟ್ಟೆ ಉತ್ಪಾದನಾ ಘಟಕ ಮುಂದಿನ 2 ವರ್ಷಗಳಲ್ಲಿ ರೂಪಾಯಿ 100 ಕೋಟಿ ಆರ್ಥಿಕ ವ್ಯವಹಾರ ನಡೆಸುವ ಗುರಿ ಹೊಂದಿದೆ ಎಂದು ನುಡಿದು ತಾಲೂಕಿನಲ್ಲಿ ತುಳು ಶಿವಳ್ಳಿ ಸಂಘಟನೆಯ ಸಾಧನೆಯ ಬಗೆಗೆ ಮೆಚ್ಚುಗೆ ವ್ಯಕ್ತಪಡಿಸಿ ಅಭಿನಂದಿಸಿದರು. ಇದೇ ಸಂದರ್ಭದಲ್ಲಿ ಶಿಕ್ಷಕ ವೃತ್ತಿಯಿಂದ ನಿವೃತ್ತರಾದ ಜನಾರ್ದನ ತೋಳ್ಪಡಿತ್ತಾಯ, ಹರ್ಷಕುಮಾರ್ ಕೆದಿಲಾಯ, ಸುಬ್ರಹ್ಮಣ್ಯ ಪಡುವೆಟ್ನಾಯ ಮತ್ತು ಸಹಸ್ರನಾಮ ಆಚಾರ್ ಅವರನ್ನು ಸಮ್ಮಾನಿಸಿ ಗೌರವಿಸಲಾಯಿತು. ಡಾ. ಸುಬ್ರಹ್ಮಣ್ಯ ತೋಳ್ಪಡಿತ್ತಾಯ ಸಮ್ಮಾನಿತರನ್ನು ಪರಿಚಯಿಸಿ, ಅಭಿನಂದಿಸಿದರು. ಸಮ್ಮಾನಿತರ ಪರವಾಗಿ ಜನಾರ್ದನ ತೋಳ್ಪಡಿತ್ತಾಯ ಉತ್ತರಿಸಿ, ಗುರುವಾದವನು ತನ್ನ ನಡೆ, ನುಡಿ, ಚಾರಿತ್ರ್ಯದಲ್ಲಿ ಪರಿಶುದ್ಧವಾಗಿರಬೇಕು. ವಿದ್ಯಾರ್ಥಿಯ ವ್ಯಕ್ತಿತ್ವ ನಿರ್ಮಾಣದಲ್ಲಿ ಶಿಕ್ಷಕನ ಪಾತ್ರ ಮಹತ್ವಪೂರ್ಣವಾದುದು. ಕಠಿಣ ಪರಿಶ್ರಮದಿಂದ ಕೆಲಸ ಮಾಡಿದವರು ಜೀವನದಲ್ಲಿ ಯಶಸ್ವಿಯಾಗುತ್ತಾರೆ ಎಂದರು. ಉಜಿರೆ ವಲಯದಸಮಾಜದ ಪ್ರತಿಭಾನ್ವಿತ ವಿದ್ಯಾರ್ಥಿಗಳು, ಸಿ.ಎ., ಪಿ.ಎಚ್.ಡಿ. ಸಂಶೋಧಕರು, ಶೈಕ್ಷಣಿಕ ಹಾಗು ಇತರ ಕ್ಷೇತ್ರಗಳ ಸಾಧಕರನ್ನು ಸಮ್ಮಾನಿಸಿ ಗೌರವಿಸಲಾಯಿತು. ಸಮಾಜದ ವಿಶೇಷ ಸಾಧಕರಾದ ಡಾ. ಶಶಿಪ್ರಭಾ, ಸಂಪತ್ ರತ್ನ ರಾವ್, ಶ್ರದ್ದಾ ಬಡೆಕಿಲ್ಲಾಯ, ಕೆ.ಜಿ. ಹರಿದಾಸ್ ರಾವ್ ಮತ್ತು ರೋಟರಿ ಆನ್ಸ್ ಕ್ಲಬ್ ಅಧ್ಯಕ್ಷೆ ಗಾಯತ್ರಿ ಶ್ರೀಧರ್ ಅವರನ್ನು ಗೌರವಿಸಲಾಯಿತು. ತುಳು ಶಿವಳ್ಳಿ ತಾಲೂಕು ಅಧ್ಯಕ್ಷ ರಾಘವೇಂದ್ರ ಬೈಪಾಡಿತ್ತಾಯ ಮಾತನಾಡಿ; ಸಮಾಜದಲ್ಲಿ ಅನೇಕರು ವೈದ್ಯಕೀಯ, ಇಂಜಿನಿಯರಿಂಗ್ ಹಾಗೂ ಇತರ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿ ಸಾಧನೆ ಮಾಡುತ್ತಿರುವುದು ಹೆಮ್ಮೆಯ ವಿಚಾರ. ಇನ್ನಷ್ಟು ಪ್ರತಿಭೆಗಳು ವಿಶೇಷ ಸಾಧನೆ ಮೆರೆಯಲಿ ಎಂದು ಶುಭ ಕೋರಿದರು. ಗೌರವಾಧ್ಯಕ್ಷ ಶರತ್ ಕೃಷ್ಣ ಪಡುವೆಟ್ನಾಯ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ; ಗ್ರಾಮೀಣ ಪ್ರದೇಶದಲ್ಲಿ ಉದ್ಯಮ ಸ್ಥಾಪಿಸಿ 250 ಮಂದಿಗೆ ಉದ್ಯೋಗ ಕಲ್ಪಿಸಿ ಉದ್ಯಮ ಕ್ಷೇತ್ರದಲ್ಲಿ ವಿಷೇಷ ಸಾಧನೆಗೈದು ಅವಿನಾಶ್ ರಾವ್ ಅವರು ಮುಂದಿನ ವಿದ್ಯಾರ್ಥಿಗಳಿಗೆ ಪ್ರೇರಣೆಯಾಗಿದ್ದಾರೆ. ವಿದ್ಯಾರ್ಥಿಗಳು ಶಿಕ್ಷಣ, ಕ್ರೀಡೆ, ಸಾಂಸ್ಕೃತಿಕ ಮತ್ತು ಇತರ ಕ್ಷೇತ್ರಗಳಲ್ಲಿ ವಿಶೇಷ ಸಾಧನೆಗೈದು ಸಮಾಜಕ್ಕೆ ಕೀರ್ತಿ ತರುವಂತವರಾಗಬೇಕು ಎಂದು ನುಡಿದರು. ಅಧ್ಯಕ್ಷತೆ ವಹಿಸಿದ್ದ ಉಜಿರೆ ವಲಯಾಧ್ಯಕ್ಷ ಗಿರಿರಾಜ ಬಾರಿತ್ತಾಯ ಮಾತನಾಡಿ; ತುಳು ಶಿವಳ್ಳಿ ತಾಲೂಕಿನಲ್ಲಿ ಉತ್ತಮ ಕಾರ್ಯಕ್ರಮಗಳಿಂದ ಇತರರಿಗೆ ಸ್ಫೂರ್ತಿ ಹಾಗೂ ಪ್ರೇರಣೆಯಾಗಿದೆ ಎಂದು ನುಡಿದು ಮುಂದಿನ ಎಲ್ಲ ಕಾರ್ಯಕ್ರಮಗಳಿಗೆ ಎಲ್ಲರ ಸಹಕಾರ ಕೋರಿದರು. ತಾಲೂಕು ಮಹಿಳಾ ಘಟಕಾಧ್ಯಕ್ಷೆ ಸ್ವರ್ಣ ಶ್ರೀರಂಗ ನೂರಿತ್ತಾಯ ಶುಭಾಶಂಸನೆಗೈದರು. ವೇದಿಕೆಯಲ್ಲಿ ತಾಲೂಕು ಕಾರ್ಯದರ್ಶಿ ರಾಜಪ್ರಸಾದ್ ಪೊಳ್ನಾಯ, ಯುವ ವಿಪ್ರ ವೇದಿಕೆ ಅಧ್ಯಕ್ಷ ಸೂರ್ಯನಾರಾಯಣ ಮುರುಡಿತ್ತಾಯ, ಕಾರ್ಯದರ್ಶಿ ಕಾರ್ತಿಕ್ ಮೊಗೇರಾಯ ಉಪಸ್ಥಿತರಿದ್ದರು. ಮಹಿಳಾ ಘಟಕ ವಲಯಾಧ್ಯಕ್ಷೆ ಜ್ಯೋತಿ ಗುರುರಾಜ್ ಸ್ವಾಗತಿಸಿ, ಕಾರ್ಯದರ್ಶಿ ಶೈಲಜಾ ಪೆಜತ್ತಾಯ ಪ್ರಾರ್ಥಿಸಿ, ತಾಲೂಕು ಕಾರ್ಯದರ್ಶಿ ಗಾಯತ್ರಿ ಶ್ರೀಧರ್ ಮತ್ತು ಉಪಾಧ್ಯಕ್ಷ ಮುರಳಿಕೃಷ್ಣ ಆಚಾರ್ ನಿರೂಪಿಸಿದ ಕಾರ್ಯಕ್ರಮದಲ್ಲಿ ಕಾರ್ಯದರ್ಶಿ ಹರ್ಷಕುಮಾರ್ ಕೆದಿಲಾಯ ವಂದಿಸಿದರು. ಪ್ರಾರಂಭದಲ್ಲಿ ಉಜಿರೆ ಸಿದ್ಧವನ ನರ್ಸರಿಯ ವಾಸು ಅವರು ಕಸಿ ಕಟ್ಟುವ ಕುರಿತು ಪ್ರಾತ್ಯಕ್ಷಿಕೆಯೊಂದಿಗೆ ಕಾರ್ಯಾಗಾರ ನಡೆಸಿಕೊಟ್ಟರು.






