ಬೆಳ್ತಂಗಡಿ: ಜಗತ್ತಿನ ಮಹಾನ್ ಮಾರ್ಕ್ಸ್‌ವಾದಿ ಚಿಂತಕ, ರಾಜಕೀಯ ತಜ್ಞ, ಭಾರತವನ್ನು ಸರಿಯಾಗಿ ಅರ್ಥ ಮಾಡಿಕೊಂಡ ಕಮ್ಯೂನಿಸ್ಟ್ ನೇತಾರ, ಸಿಪಿಐಎಂ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಕಾಮ್ರೇಡ್ ಸೀತಾರಾಮ ಯೆಚೂರಿ ಅವರನ್ನು ಕಳಕೊಂಡದ್ದು ದೇಶದ ದುಡಿಯುವ ಜನತೆಗೆ, ಜಾತ್ಯಾತೀತತೆಗೆ, ಪ್ರಜಾಪ್ರಭುತ್ವ ದೇಶಕ್ಕೆ ತುಂಬಲಾರದ ನಷ್ಟ ಆಗಿದೆ ಎಂದು ಸಿಪಿಐಎಂ ನಾಯಕ ಬಿ.ಎಂ. ಭಟ್ ಹೇಳಿದರು. ಅವರು ಬೆಳ್ತಂಗಡಿ ಅಂಬೇಡ್ಕರ್ ಭವನದಲ್ಲಿ ನಡೆದ ಕಾಮ್ರೇಡ್ ಸೀತಾರಾಮ ಯೆಚೂರಿ ಅವರ ಶ್ರದ್ದಾಂಜಲಿ ಕಾರ್ಯಕವ್ರಮವನ್ನು ಉದ್ದೇಶಿಸಿ ಮಾತಾಡುತ್ತಿದ್ದರು. ಕಾರ್ಮಿಕರ ಪರವಾದ ಧ್ವನಿಯಾಗಿದ್ದ ಯೆಚೂರಿ ಅವರು 2005 ರಿಂದ 2017ರವರೆಗೆ ಪಶ್ಚಿಮ ಬಂಗಾಲದಿಂದ ಸಂಸದರಾಗಿದ್ದರು. ಖ್ಯಾತ ಸಂಸದೀಯ ಪಟು ಆಗಿದ್ದ ಅವರು ಲೋಕಸಭೆಯಲ್ಲಿ ದೇಶದ ರೈತ, ಕಾರ್ಮಿಕರ ಪರವಾಗಿ ನಿರಂತರ ವಾದ ನಡೆಸಿ ಆಳುವ ವರ್ಗದ ಸರ್ವಾದಿಕಾರಕ್ಕೆ ಕಡಿವಾಣ ಹಾಕಲು, ಮತ್ತು ಜನರ ಬದುಕಿಗೆ ರಕ್ಷಣೆ ನೀಡುತ್ತಿದ್ದರು. ಕೆಲವೊಂದು ತಿದ್ದುಪಡಿಗಳು ಅಗತ್ಯವಿದ್ದರೂ ಅರಣ್ಯ ಹಕ್ಕು ಕಾಯ್ದೆ, ಗ್ರಾಮೀಣ ಉದ್ಯೋಗ ಖಾತರಿ ಯೋಜನೆ, ಮಾಹಿತಿ ಹಕ್ಕು ಕಾಯ್ದೆ ಇತ್ಯಾದಿ ಕಾರ್ಮಿಕರ ಪರವಾದ ಹಲವು ಕಾನೂನುಗಳು ಜಾರಿಗೆ ತರುವಲ್ಲಿ ಅವರ ಪ್ರಯತ್ನವನ್ನು ಭಾರತೀಯರು ಎಂದೂ ಮರೆಯಲಾರರು ಎಂದರು. ಸಭೆಯ ಅದ್ಯಕ್ಷತೆಯನ್ನು ಹಿರಿಯ ಸಿಪಿಐಎಂ ನಾಯಕ ಲಕ್ಷ್ಮಣ ಗೌಡ ಪಾಂಗಳ ವಹಿಸಿದ್ದರು. ಎಂ. ಜೋಸೆಫ್ ವೇಣೂರು, ಸಲಿಮೋನ್ ಪುದುವೆಟ್ಟು, ಕಾಮ್ರೇಡ್ ಯೆಚೂರಿ ಬಗ್ಗೆ ಮಾತಾಡಿದರು. ಸಿಪಿಐ(ಎಂ) ತಾಲೂಕು ಸಮಿತಿ ಸದಸ್ಯ ಜಯರಾಮ ಮಯ್ಯ ಶ್ರದ್ದಾಂಜಲಿ ನಿರ್ಣಯ ಮಂಡಿಸಿದರು. ತಾಲೂಕು ಸಮಿತಿ ಸದಸ್ಯರುಗಳಾದ ಈಶ್ವರಿ, ಧನಂಜಯ ಗೌಡ, ಸಿಐಟಿಯು ಪ್ರಮುಖರಾದ ಜಯಶ್ರೀ, ಅಶ್ವಿತ, ವಸಂತ ಟೈಲರ್, ಮತ್ತಿತರರು ಉಪಸ್ಥಿತರಿದ್ದರು. ಕಾಮ್ರೇಡ್ ಸೀತಾರಾಮ ಯೆಚೂರಿ ಅವರ ಭಾವ ಚಿತ್ರಕ್ಕೆ ಪುಷ್ಪಾರ್ಚನೆ ಗೈದು ಒಂದು ನಿಮಿಷ ಮೌನ ಪ್ರಾರ್ಥನೆ ಸಲ್ಲಿಸಲಾಯಿತು. ಕೊನೆಗೆ ಸಿಪಿಐಎಂ ತಾಲೂಕು ಸಮಿತಿ ಸದಸ್ಯ ಶ್ಯಾಮರಾಜ್ ವಂದಿಸಿದರು.






