ಬೆಳ್ತಂಗಡಿ: ನಮ್ಮ ಸಂಘವು 2023-24ನೇ ಸಾಲಿನಲ್ಲಿ ಒಟ್ಟು 358 ಕೋಟಿ ರೂಪಾಯಿಗಳ ವ್ಯವಹಾರ ನಡೆಸಿ, 99 ಲಕ್ಷ ರೂಪಾಯಿ ನಿವ್ವಳ ಲಾಭ ಗಳಿಸಿದೆ. ಆಡಳಿತ ಮಂಡಳಿಯ ತೀರ್ಮಾನದಂತೆ ಸದಸ್ಯರಿಗೆ 21% ಡಿವಿಡೆಂಡ್ ನೀಡಲಾಗುವುದು ಎಂದು ಪೆರಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಸತೀಶ್ ಕೆ. ಕಾಶಿಪಟ್ಣ ಹೇಳಿದರು.ಅವರು ಸೆಪ್ಟೆಂಬರ್ 15ರಂದು ಪೆರಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಪ್ರಧಾನ ಕಛೇರಿಯ ವಠಾರದಲ್ಲಿ ನಡೆದ ಸಂಘದ 2023-24ನೇ ಸಾಲಿನ ವಾರ್ಷಿಕ ಮಹಾಸಭೆಯನ್ನು ಉದ್ಧೇಶಿಸಿ ಮಾತನಾಡುತ್ತಾ, ಈ ಮಾಹಿತಿ ನೀಡಿದರು. ಪ್ರಕೃತ ಸಂಘದಲ್ಲಿ 3,182 ‘ಎ’ ತರಗತಿಯ ಸದಸ್ಯರಿದ್ದು, ರೂಪಾಯಿ 86,26,91,191ರಷ್ಟು ದುಡಿಯುವ ಬಂಡವಾಳ ಹೊಂದಿದೆ. ವರದಿ ಸಾಲಿನಲ್ಲಿ ರೂಪಾಯಿ 54 ಕೋಟಿ ಠೇವಣಿ ಸಂಗ್ರಹವಾಗಿದೆ ಎಂದ ಸತೀಶ್ ಕಾಶಿಪಟ್ಣ; ಪ್ರಸಕ್ತ ಆಡಳಿತ ಮಂಡಳಿಗೆ ಇದು ಕೊನೆಯ ಮಹಾಸಭೆಯಾಗಿದ್ದು, ನೂತನ ಆಡಳಿತ ಮಂಡಳಿಗೆ ಡಿಸೆಂಬರ್‌ನಲ್ಲಿ ಚುನಾವಣೆ ನಡೆಯಲಿದೆ. ನಮ್ಮ ಆಡಳಿತಾವಧಿಯಲ್ಲಿ ರೈತರ ಮತ್ತು ಸದಸ್ಯರ ನಿರೀಕ್ಷೆಯಂತೆ ಸಮರ್ಪಕ ಕೆಲಸ ನಿರ್ವಹಿಸಿದ ತೃಪ್ತಿ ಇದೆ ಎಂದರಲ್ಲದೇ; ಗುರುತು ಚೀಟಿ ಪಡೆದುಕೊಳ್ಳದೇ ಇರುವ ಸದಸ್ಯರು ತಕ್ಷಣ ಗುರುತುಚೀಟಿ ಪಡೆದು ಸಹಕರಿಸಿ ಎಂದು ವಿನಂತಿಸಿದರು.ಸಂಘದ ಮುಂದಿನ ಯೋಜನೆಗಳ ಬಗ್ಗೆ ತಿಳಿಸಿದ ಸತೀಶ್ ಕಾಶಿಪಟ್ಣ; ಸಂಘಕ್ಕೆ ಸ್ವಂತ ಸುಸಜ್ಜಿತ ನೂತನ ಕಟ್ಟಡ ನಿರ್ಮಾಣ ಮತ್ತು ಸ್ಥಳೀಯ ನಾಗರಿಕರ ಅನುಕೂಲಕ್ಕಾಗಿ ಹಾಗೂ ಇನ್ನಷ್ಟು ಆರ್ಥಿಕ ಸದೃಢತೆಗಾಗಿ ಪೆಟ್ರೋಲ್ ಬಂಕ್ ತೆರೆಯುವ ಯೋಜನೆ ಇದೆ ಎಂದು ಪ್ರಕಟಿಸಿದರು. ಸರಕಾರದ ಯಶಸ್ವಿನಿ ಯೋಜನೆಯಡಿ ಈಗಾಗಲೇ 1,355 ಸದಸ್ಯರು ತಮ್ಮ ಹೆಸರನ್ನು ನೋಂದಾಯಿಸಿದ್ದು, ಸದಸ್ಯರೆಲ್ಲರೂ ಸರಕಾರದ ಸೌಲಭ್ಯಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.ಸಂಘದ ವ್ಯಾಪ್ತಿಯ ಐದು ಗ್ರಾಮಗಳಲ್ಲಿ ಕಳೆದ ಶೈಕ್ಷಣಿಕ ವರ್ಷ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಮತ್ತು 100% ಫಲಿತಾಂಶ ದಾಖಲಿಸಿದ ಶಾಲೆಗಳನ್ನು ಗುರುತಿಸಿ ಗೌರವಿಸಲಾಯಿತು. ಸಂಘದ ವ್ಯಾಪ್ತಿಯ 128 ವಿಶೇಷ ಚೇತನರಿಗೆ ಮತ್ತು ಮೃತಪಟ್ಟ ಸಂಘದ ಸದಸ್ಯರ ಕುಟುಂಬಿಕರಿಗೆ ಆರ್ಥಿಕ ನೆರವು ನೀಡಲಾಯಿತು. ಸಂಘದ ಉಪಾಧ್ಯಕ್ಷೆ ದೇವಕಿ ಶೆಟ್ಟಿ, ನಿರ್ದೇಶಕರಾದ ಎನ್. ಆರ್. ಸೀತಾರಾಮ ರೈ, ಹರಿಪ್ರಸಾದ್ ಪಿ., ಪ್ರವೀಣ್ ಗಿಲ್ಬರ್ಟ್ ಪಿಂಟೊ, ಶ್ರೀಪತಿ ಉಪಾಧ್ಯಾಯ, ಪುತ್ತು ನಾಯ್ಕ, ಧರ್ಣಪ್ಪ ಪೂಜಾರಿ, ರಾಜೇಶ್ ಶೆಟ್ಟಿ, ಕೃಷ್ಣಪ್ಪ, ಡಿ.ಸಿ.ಸಿ. ಬ್ಯಾಂಕ್ ಪ್ರತಿನಿಧಿ ಸುದರ್ಶನ್ ಉಪಸ್ಥಿತರಿದ್ದರು.ಕಾಶಿಪಟ್ಣ ಸರಕಾರಿ ಪ್ರೌಢಶಾಲಾ ಶಿಕ್ಷಕ ದೇವುದಾಸ್ ನಾಯಕ್ ನಿರೂಪಿಸಿದ ಕಾರ್ಯಕ್ರಮದಲ್ಲಿ ನಿರ್ದೇಶಕ ಹರಿಪ್ರಸಾದ್ ಪಿ. ಸ್ವಾಗತಿಸಿದರು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶೇಖ್ ಲತೀಫ್ ವಾರ್ಷಿಕ ಸಮಗ್ರ ವರದಿ ಮಂಡಿಸಿ ಮಹಾಸಭೆಯ ಅನುಮೋದನೆ ಪಡೆದರು. ನಿರ್ದೇಶಕ ಎನ್.ಆರ್. ಸೀತಾರಾಮ ರೈ ವಂದಿಸಿದರು.






