ಬೆಳ್ತಂಗಡಿ: ವಿದ್ಯೆಯಿಂದ ಜ್ಞಾನ, ಜ್ಞಾನದಿಂದ ಧನ, ಧನದಿಂದ ಪ್ರಗತಿ ಪ್ರಾಪ್ತಿಯಾಗುತ್ತದೆ. ಅದಕ್ಕೆ ವಿದ್ಯಾದಾನ ಶ್ರೇಷ್ಠ ಎಂದು ಕ್ಯಾನ್‌ಫಿನ್ ಹೋಮ್ಸ್ ಲಿಮಿಟೆಡ್ ಸಂಸ್ಥೆಯ ಡಿಜಿಎಂ ಪ್ರಶಾಂತ್ ಜೋಷಿ ಹೇಳಿದರು.ಅವರು ಬೆಳ್ತಂಗಡಿ ರೋಟರಿ ಕ್ಲಬ್ , ರೋಟರಿ ಸೇವಾ ಟ್ರಸ್ಟ್, ರೋಟರಿ ಬೆಂಗಳೂರು ಇಂದಿರಾನಗರ ವತಿಯಿಂದ ಸೆಪ್ಟೆಂಬರ್ 21ರಂದು ಕಾಶಿಬೆಟ್ಟು ರೋಟರಿ ಸುವರ್ಣ ಸಭಾಭಾವನದಲ್ಲಿ ನಡೆದ ಬೆಳ್ತಂಗಡಿ ತಾಲೂಕಿನ ಖಾಸಗಿ ಕಾಲೇಜಿನ 90% ಕ್ಕಿಂತ ಮೇಲ್ಪಟ್ಟು ಅಂಕ ಗಳಿಸಿದ ಅರ್ಹ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಿಸಿ ಮಾತನಾಡುತ್ತಿದ್ದರು.ಕ್ಯಾನ್‌ಫಿನ್ ವತಿಯಿಂದ ಕಳೆದ ನಾಲ್ಕು ವರ್ಷಗಳಿಂದ ವಿದ್ಯಾರ್ಥಿ ವೇತನ ನೀಡಲಾಗುತ್ತಿದ್ದು, ಈ ವರ್ಷ 1 ಕೋಟಿ ರೂಪಾಯಿ ಮೀಸಲಿರಿಸಲಾಗಿದೆ. ಇದರಲ್ಲಿ 15 ಲಕ್ಷ ರೂಪಾಯಿ ಬೆಳ್ತಂಗಡಿ ತಾಲೂಕು ಒಂದಕ್ಕೆ ನೀಡಿದ್ದು. ಉಳಿದ 85 ಲಕ್ಷ ರೂಪಾಯಿ ಮೊತ್ತದಲ್ಲಿ ರೋಟರಿ ಕ್ಲಬ್ ಇಂದಿರಾನಗರ ರಾಜ್ಯಾದ್ಯಂತ ಇತರ ಶಾಖೆಗೆ ವಿತರಣೆ ಮಾಡಲಾಗುತ್ತಿದೆ ಎಂದು ತಿಳಿಸಿದರು.ಬೆಳ್ತಂಗಡಿ ರೋಟರಿ ಕ್ಲಬ್ ಅಧ್ಯಕ್ಷ ಪೂರಣ್ ವರ್ಮಾ ಸ್ವಾಗತಿಸಿ ಮಾತನಾಡಿ; ವಿದ್ಯೆಗಿಂತ ದೊಡ್ಡ ಉಡುಗೊರೆ ಬೇರೊಂದಿಲ್ಲ. ವಿದ್ಯಾವಂತರಾದರೆ ಮಕ್ಕಳು ಮನೆಗೆ ಆಧಾರ. ಶಿಕ್ಷಣದಲ್ಲಿ ತೊಡಗಿಸಿಕೊಂಡರೆ ಶಿಕ್ಷಣದ ಬಳಿಕ ಅದರ ಫಲ ದೊರೆಯುತ್ತದೆ. ನಿಮ್ಮ ಅಗತ್ಯಕ್ಕೆ ಪೂರಕ ಶೈಕ್ಷಣಿಕ ಬಳಕೆಗೆ ವಿದ್ಯಾರ್ಥಿವೇತನ ಬಳಸಿಕೊಳ್ಳಿ. ಈವರೆಗೆ 1.64 ಕೋಟಿ ರೂಪಾಯಿ ಮೊತ್ತವನ್ನು ಬೆಳ್ತಂಗಡಿ ತಾಲೂಕಿಗೆ ಕ್ಯಾನ್‌ಫಿನ್ ಹೋಮ್ಸ್ ನೀಡಿದೆ ಎಂದು ಹೇಳಿದರು. ರೋಟರಿ ಜಿಲ್ಲಾ ಗವರ್ನರ್ ವಿಕ್ರಮ್ ದತ್ತ, ರೋಟರಿ ಇಂದಿರಾನಗರ ಕ್ಲಬ್ ನ ಸದಸ್ಯರಾದ ಪೀಯುಶ್ ಜೈನ್, ಜಗದೀಶ್ ಮುಗುಳಿ, ರೋಟರಿ ಸೇವಾ ಟ್ರಸ್ಟ್ ಅಧ್ಯಕ್ಷ ಶ್ರೀಕಾಂತ್ ಕಾಮತ್, ಕೋಶಾಧಿಕಾರಿ ಅಬೂಬಕ್ಕರ್ ಮತ್ತಿತರರು ಉಪಸ್ಥಿತರಿದ್ದರು . ಬೆಳ್ತಂಗಡಿ ತಾಲೂಕಿನ 151 ವಿದ್ಯಾರ್ಥಿಗಳಿಗೆ ತಲಾ 10 ಸಾವಿರ ರೂಪಾಯಿಯಂತೆ ರೂಪಾಯಿ 15,10,000/- ವಿತರಿಸಲಾಯಿತು. ಈ ಬಾರಿ ಸರಕಾರಿ ಸಹಿತ ಖಾಸಗಿ ಶಾಲೆ ಸೇರಿ ಒಟ್ಟು 400 ಮಕ್ಕಳಿಗೆ ಒಟ್ಟು 25 ಲಕ್ಷ ರೂಪಾಯಿ ಬೆಳ್ತಂಗಡಿ ತಾಲೂಕಿನ ವಿದ್ಯಾರ್ಥಿಗಳಿಗೆ ನೀಡಲಾಗಿದೆ ಎಂದು ರೋಟರಿ ಇಂದಿರಾ ನಗರದ ಸದಸ್ಯ ಜಗದೀಶ್ ಮುಗುಳಿ ತಿಳಿಸಿದರು. ಕಾರ್ಯದರ್ಶಿ ಸಂದೇಶ್ ರಾವ್ ವಂದಿಸಿದರು. ಸುವೀರ್ ಜೈನ್ ಕಾರ್ಯಕ್ರಮ ನಿರೂಪಿಸಿದರು.






