ಬೆಳ್ತಂಗಡಿ: ಉಜಿರೆ ಶ್ರೀ ಅರಿಪ್ಪಾಡಿ ವಾಣಿಜ್ಯ ಸಂಕೀರ್ಣದಲ್ಲಿ ಪ್ರಧಾನ ಕಚೇರಿ ಹೊಂದಿರುವ ಬೆಳ್ತಂಗಡಿ ತಾಲೂಕು ಮಹಿಳಾ ಸಹಕಾರಿ ಸಂಘ(ರಿ)ದ 2ನೇ ವರ್ಷದ ವಾರ್ಷಿಕ ಮಹಾಸಭೆಯು ಇತ್ತೀಚಿಗೆ ಉಜಿರೆ ಶ್ರೀ ಅರಿಪ್ಪಾಡಿ ಸಭಾಭವನದಲ್ಲಿ ಸಂಘದ ಅಧ್ಯಕ್ಷೆ ಸಾವಿತ್ರಿ ರೈ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಅಧ್ಯಕ್ಷೆ ಸಾವಿತ್ರಿ ರೈ ಮಾತನಾಡಿ; ತಾಲೂಕಿನ ಎಲ್ಲ ಸದಸ್ಯರ ಪೂರ್ಣ ಸಹಕಾರ, ಮಾರ್ಗದರ್ಶನದಲ್ಲಿ ಸಂಘವು ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸಿ ಆರ್ಥಿಕ ನೆರವಿನ ಅವಶ್ಯವುಳ್ಳವರಿಗೆ ಕ್ಷಿಪ್ರ ಸಾಲ ಸೌಲಭ್ಯ ನೀಡಲು ಬದ್ಧವಿದೆ. ಸಂಘದ ಬೆಳವಣಿಗೆಗೆ ನಿರ್ದೇಶಕರು ಹಾಗೂ ಸರ್ವಸದಸ್ಯರ ಸಹಕಾರಕ್ಕೆ ಕೃತಜ್ಞತೆ ಸಲ್ಲಿಸಿ ಮುಂದೆಯೂ ಎಲ್ಲರ ಸಹಕಾರವಿರಲಿ ಎಂದು ಆಶಿಸಿದರು. ದಿಶಾ ರಾವ್ ಪ್ರಾರ್ಥಿಸಿ, ಸಂಘದ ಉಪಾಧ್ಯಕ್ಷೆ ರಾಜಶ್ರೀ ಎಸ್. ಹೆಗ್ಡೆ ಸ್ವಾಗತಿಸಿ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸ್ವರ್ಣಗೌರಿ ಕಾರ್ಯಕ್ರಮ ನಿರೂಪಿಸಿ, ವಾರ್ಷಿಕ ವರದಿ ಮಂಡಿಸಿ ಅನುಮೋದಿಸಲಾಯಿತು. ಸಂಘದ ನಿರ್ದೇಶಕರಾದ ಹೇಮಲತಾ, ಸುಧೀರ, ಭಾರತಿ, ಸೀತಾಲಕ್ಷ್ಮಿ, ಉಷಾ ಮತ್ತು ಚೇತನಾ ವೇದಿಕೆಯಲ್ಲಿ ಉಪಸ್ಥಿತರಿದ್ದರು. ನಿರ್ದೇಶಕಿ ಉಷಾ ವಂದಿಸಿದರು.






