‘ಡಾ. ಯಶೋವರ್ಮ, ಕರ್ತೃತ್ವ ಶಕ್ತಿಯ ಶಿಕ್ಷಣತಜ್ಞ-ಸಂಘಟಕ -ಯಕ್ಷಪ್ರೇಮಿ’

‘ಡಾ. ಯಶೋವರ್ಮ, ಕರ್ತೃತ್ವ ಶಕ್ತಿಯ ಶಿಕ್ಷಣತಜ್ಞ-ಸಂಘಟಕ -ಯಕ್ಷಪ್ರೇಮಿ’
Facebook
Twitter
LinkedIn
WhatsApp

ಉಜಿರೆ: ಡಾ. ಬಿ. ಯಶೋವರ್ಮ ಅವರು ಶಿಸ್ತು, ದಕ್ಷತೆಯಿಂದ ಯಕ್ಷರಂಗಕ್ಕೆ ವಿದ್ಯಾರ್ಥಿಗಳನ್ನು ಸಿದ್ಧಪಡಿಸಿದ ಅಪೂರ್ವ ಯಕ್ಷಪ್ರೇಮಿ. ಸಸ್ಯ ಶಾಸ್ತ್ರ ಉಪನ್ಯಾಸಕರಾಗಿಮಾಂತ್ರಿಕ ಸ್ಪರ್ಶದಿಂದ ಸಂಶೋಧನೆಗಾಗಿಯೇ ಸೃಷ್ಟಿಸಿದ ಆರ್ಬೊರೇಟಮ್ ‘ಯಶೋವನ’ ವಾಗಿ ತೆರೆದುಕೊಂಡಿದೆ. ಸ್ವಚ್ಛ ಸುಂದರ ಉಜಿರೆಯ ಪರಿಕಲ್ಪನೆಯಲ್ಲಿ ಸಂಘಟಕರಾಗಿ, ಮಾರ್ಗದರ್ಶಕರಾಗಿ ಧರ್ಮಸ್ಥಳದೊಂದಿಗೆ ಅನುಬಂಧ ಹೊಂದಿ ಶಿಸ್ತುಬದ್ಧ ಪಾದಯಾತ್ರೆಗೆ ನಾಂದಿಹಾಡಿದವರು. ತಾಂತ್ರಿಕತೆಯ ಶೈಕ್ಷಣಿಕ ಕ್ರಾಂತಿಯಿಂದ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಸಂಸ್ಥೆ ರಾಷ್ಟ್ರಮಟ್ಟದಲ್ಲಿ ಗುರುತಿಸುವಂತೆ ಮಾಡಿದವರು. ರೋಟರಿ ಸಂಸ್ಥೆಗೆ ಹೊಸ ಚೈತನ್ಯ ನೀಡಿ ಬೆಳೆಸಿದವರು. ಅವರ ಆದರ್ಶ ನಾಯಕತ್ವ, ಮಾರ್ಗದರ್ಶನ, ಕರ್ತೃತ್ವಶಕ್ತಿ, ಸಂಘಟನಾ ಚತುರತೆಯನ್ನು ನೆನಪಿಸಿ ಸ್ಮರಿಸುವುದು ಅತ್ಯವಶ್ಯವೆಂದು ಬೆಳ್ತಂಗಡಿಯ ಹಿರಿಯ ನ್ಯಾಯವಾದಿ ಬಿ.ಕೆ. ಧನಂಜಯ ರಾವ್ ಅಭಿಪ್ರಾಯಿಸಿದರು. ಅವರು ಸೆಪ್ಟೆಂಬರ್ 30ರಂದು ಬೆಳ್ತಂಗಡಿ ಲಾಯ್ಲ ಶ್ರೀ ಸುಬ್ರಹ್ಮಣ್ಯ ಸಭಾಭವನದಲ್ಲಿ ಕುರಿಯ ವಿಠಲ ಶಾಸ್ತ್ರೀ ಸಾಂಸ್ಕೃತಿಕ ಪ್ರತಿಷ್ಠಾನ(ರಿ ) ಉಜಿರೆ, ಶ್ರೀ ಸುಬ್ರಹ್ಮಣ್ಯ ಸ್ಥಾನಿಕ ಬ್ರಾಹ್ಮಣ ಸಭಾ ಬೆಳ್ತಂಗಡಿ ಮತ್ತು ರೋಟರಿ ಕ್ಲಬ್ ಬೆಳ್ತಂಗಡಿಯ ಸಂಯುಕ್ತ ಆಶ್ರಯದಲ್ಲಿ ನಡೆದ ಯಕ್ಷಗಾನ ಮಹೋಪಾಧ್ಯಾಯ ನೆಡ್ಲೆ ನರಸಿಂಹ ಭಟ್ ಸಂಸ್ಮರಣೆ-ಯಕ್ಷಸಾಂಗತ್ಯ ತಾಳಮದ್ದಳೆ ಸಪ್ತಾಹ -ಯಕ್ಷಾವತರಣ -5, ‘ಯಶೋ’-ಯಕ್ಷನಮನ-ಗಾನ-ನೃತ್ಯ-ಚಿತ್ರ ಕಾರ್ಯಕ್ರಮದಲ್ಲಿ ಅಗಲಿದ ಶಿಕ್ಷಣ ತಜ್ಞ ಡಾ. ಬಿ. ಯಶೋವರ್ಮ ಅವರಿಗೆ ನುಡಿನಮನ ಸಲ್ಲಿಸಿ ಮಾತನಾಡುತ್ತಿದ್ದರು. ಮುಖ್ಯ ಅತಿಥಿ ಉಜಿರೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜು ಪ್ರಾಂಶುಪಾಲ ಡಾ. ಬಿ.ಎ. ಕುಮಾರ ಹೆಗ್ಡೆ ಮಾತನಾಡಿ; ಪಾಶ್ಚಾತ್ಯ ಸಂಸ್ಕೃತಿಯ ನಡುವೆ ನೆಲದ ಸತ್ವ, ಶಕ್ತಿ ಸಾಂಸ್ಕೃತಿಕ ಮೌಲ್ಯಗಳನ್ನು ವಿದ್ಯಾರ್ಥಿಗಳಲ್ಲಿ ಮೂಡಿಸಿ ಕೃಷಿ ಹಾಗೂ ಶಿಕ್ಷಣತಜ್ಞರಾಗಿ ಡಾ. ಯಶೋವರ್ಮ ಸಂಸ್ಮರಣೀಯರು.ಅಂತರಂಗದ ವಿಕಸನಕ್ಕೆ ಪೂರಕ ವಾದ ಯಕ್ಷಗಾನ ನಾಡಿನೆಲ್ಲೆಡೆ ಪಸರಿಸುತ್ತಿರುವ ಕುರಿಯ ವಿಠಲ ಶಾಸ್ತ್ರೀ ಸಾಂಸ್ಕೃತಿಕ ಪ್ರತಿಷ್ಠಾನದ ಕಾರ್ಯ ಅಭಿನಂದನೀಯ ಎಂದರು. ಕನ್ನಡ ಸಾಹಿತ್ಯ ಪರಿಷತ್ತಿನ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ಡಾ. ಶ್ರೀನಾಥ್ ಎಂ.ಪಿ. ಮಾತನಾಡಿ; ಸಾಹಿತ್ಯ ಕ್ಷೇತ್ರದಲ್ಲಿ ಗುಣಮಟ್ಟದ ಕಾರ್ಯಕ್ರಮಗಳ ಸಂಘಟನೆಗೆ ಡಾ. ಯಶೋವರ್ಮ ಅವರ ಕೊಡುಗೆ ಅಪಾರವಾದುದು. ಸಾಹಿತ್ಯ ಪರಿಷತ್ ಅಧ್ಯಕ್ಷ ಸ್ಥಾನದ ಚುನಾವಣೆಗೆ ಸ್ಪರ್ದಿಸಲು ಪ್ರೇರಣೆ ನೀಡಿದ್ದಲ್ಲದೆ ವಿಶ್ವ ತುಳು ಸಮ್ಮೇಳನದಲ್ಲಿ ಸೇವೆ ಸಲ್ಲಿಸಲು ಅವಕಾಶ ಕಲ್ಪಿಸಿ ಸಾಹಿತ್ಯಿಕ ಕೃತಿಗಳ ರಚನೆಗೆ ಸ್ಫೂರ್ತಿ ನೀಡಿದವರು ಎಂದು ಸ್ಮರಿಸಿಕೊಂಡರು. ಕೇಯೂರವರ್ಮ ಕಾರ್ಯಕ್ರಮ ಉದ್ಘಾಟಿಸಿದರು. ಪೂರಣ್ ವರ್ಮ ಸ್ವಾಗತಿಸಿ, ಪ್ರಸ್ತಾವಿಕವಾಗಿ ಮಾತನಾಡಿದರು. ವೇದಿಕೆಯಲ್ಲಿ ಶ್ರೀ ಸುಬ್ರಹ್ಮಣ್ಯ ಸ್ಥಾನಿಕ ಬ್ರಾಹ್ಮಣ ಸಭಾ ಅಧ್ಯಕ್ಷ ಶಿವಾನಂದ ರಾವ್ ಕಕ್ಕೇನೇಜಿ ಉಪಸ್ಥಿತರಿದ್ದರು. ಕುರಿಯ ವಿಠಲ ಶಾಸ್ತ್ರಿ ಪ್ರತಿಷ್ಠಾನದ ಸಂಚಾಲಕ ಉಜಿರೆ ಅಶೋಕ ಭಟ್ ನಿರೂಪಿಸಿದ ಕಾರ್ಯಕ್ರಮದಲ್ಲಿ ರೋಟರಿ ಕ್ಲಬ್ ಕಾರ್ಯದರ್ಶಿ ಸಂದೇಶ ರಾವ್ ವಂದಿಸಿದರು. ಇದೇ ಸಂದರ್ಭದಲ್ಲಿ ಝೀ ಕನ್ನಡ ವಾಹಿನಿಯ ಡ್ರಾಮಾ ಜೂನಿಯರ್ ಸರಣಿ 5 ರ ಸಾಂಸ್ಕೃತಿಕ ಸಾಧಕಿ ಕುಮಾರಿ ರಿಷಿಕಾ ಕುಂದೇಶ್ವರ್‌ಅವರಿಗೆ ಕುರಿಯ ವಿಠಲ ಶಾಸ್ತ್ರಿ ಪ್ರತಿಭಾ ಪುರಸ್ಕಾರ ನೀಡಿ ಸಮ್ಮಾನಿಸಲಾಯಿತು.ರಿಷಿಕಾ ಕುಂದೇಶ್ವರ್ ಅವರ ತಂದೆ ಪತ್ರಕರ್ತ ಜಿತೇಂದ್ರ ಕುಂದೇಶ್ವರ್ ದಂಪತಿ ಉಪಸ್ಥಿತರಿದ್ದರು. ರಿಷಿಕಾ ಕುಂದೇಶ್ವರ್ ಸಮ್ಮಾನಕ್ಕೆ ಕೃತಜ್ಞತೆ ಸಲ್ಲಿಸಿದರು. ಉತ್ತಮ ಶಿಕ್ಷಕ ಪ್ರಶಸ್ತಿ ವಿಜೇತ ಶಿಕ್ಷಕ ಕಲಾವಿದ ವಿ.ಕೆ. ವಿಟ್ಲ, ನಾಟಕಕಾರ ಸದಾನಂದ ಮುಂಡಾಜೆ ಮತ್ತು ಯು ಪ್ಲಸ್ ವಾಹಿನಿಯ ದಿನೇಶ್ ಅವರನ್ನು ಪುರಸ್ಕರಿಸಲಾಯಿತು. ಖ್ಯಾತ ಭಾಗವತರಾದ ರವಿಚಂದ್ರ ಕನ್ನಡಿಕಟ್ಟೆ ಮತ್ತು ಕಾವ್ಯಶ್ರೀ ನಾಯಕ್ ಅಜೇರು ಅವರ ಯಕ್ಷಗಾನ ಹಾಡುಗಳಿಗೆ ಸಂತೋಷಕುಮಾರ್ ಹಿಲಿಯಾನ ಮತ್ತು ರಕ್ಷಿತ್ ಶೆಟ್ಟಿ ಪಡ್ರೆ ಅವರ ಯಕ್ಷಗಾನ ನಾಟ್ಯ ವೈಭವಕ್ಕೆ ಚಿತ್ರ ಕಲಾವಿದ ವಿ. ಕೆ. ವಿಟ್ಲ ಚಿತ್ರ ಕಲೆ ಮೂಡಿಸಿ ರಂಜಿಸಿದರು. ಹಿಮ್ಮೇಳದಲ್ಲಿ ದೇಲಂತಮಜಲು ಸುಬ್ರಹ್ಮಣ್ಯ ಭಟ್, ಚೈತನ್ಯಕೃಷ್ಣ ಪದ್ಯಾಣ ಮತ್ತು ಮುರಾರಿ ಭಟ್ ಪಂಜಿ ಗದ್ದೆ ಸಹಕರಿಸಿದರು.

Latest 5

Related Posts