ಬೆಳ್ತಂಗಡಿ: ಕೆಲ ದಿನಗಳ ಹಿಂದೆಯಷ್ಟೇ ಖಿರ್ಗಿಸ್ತಾನ್ನಲ್ಲಿ ನಡೆದ ಏಷ್ಯನ್ ಪವರ್ಲಿಫ್ಟಿಂಗ್ ಚಾಂಪಿಯನ್ಶಿಪ್ನಲ್ಲಿ ಭಾರತವನ್ನು ಪ್ರತಿನಿಧಿಸಿದ ಕರಾವಳಿ ಕರ್ನಾಟಕದ ಬಂಟ್ವಾಳ ತಾಲೂಕಿನ ಅಳಿಕೆ ಮೂಲದ ಅದ್ಭುತ ಪ್ರತಿಭೆ, ಬೆಳ್ತಂಗಡಿಯ ಮಾಜಿ ಶಾಸಕ ವಸಂತ ಬಂಗೇರರು ಕರ್ನಾಟಕ ಸರಕಾರದ ಮುಖ್ಯ ಸಚೇತಕರಾಗಿದ್ದಾಗ ಅವರ ಆಪ್ತ ಸಹಾಯಕರಾಗಿ ತಾಲೂಕಿನ ಅಭಿವೃದ್ಧಿಗೆ ಸಹಕರಿಸಿದ ನೆಕ್ಕಿತಪುಣಿ ಎನ್. ಗೋಪಾಲಕೃಷ್ಣ-ಮೀರಾಕೃಷ್ಣ ದಂಪತಿಗಳ ಮುದ್ದಿನ ಮೊಮ್ಮಗಳು ದಿಶಾಮೋಹನ್ ಇದೀಗ ದಕ್ಷಿಣ ಆಫ್ರಿಕಾದ ಜೋಹಾನ್ಸ್ಬರ್ಗ್ನಲ್ಲಿ ನಡೆದ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಭಾರತವನ್ನು ಪ್ರತಿನಿಧಿಸಿ ಅದ್ಭುತ ಸಾಧನೆಯ ಮೂಲಕ ಪವರ್ಲಿಫ್ಟಿಂಗ್ನಲ್ಲಿ ನೂತನ ಇತಿಹಾಸ ಸೃಷ್ಟಿಸಿದ್ದಾರೆ.ದಕ್ಷಿಣ ಆಫ್ರಿಕಾದ ಜೊಹಾನ್ಸ್ಬರ್ಗ್ನಲ್ಲಿ ನಡೆದ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಎಕ್ವಿಪ್ಡ್ ಸಬ್ಜೂನಿಯರ್ 57ಕೆಜಿ ವಿಭಾಗದಲ್ಲಿ 78ಕೆಜಿ ಬೆಂಚ್ಪ್ರೆಸ್ ಯಶಸ್ವಿಯಾಗಿ ಎತ್ತುವ ಮೂಲಕ ನೂತನ ದಾಖಲೆ ನಿರ್ಮಿಸಿದ್ದಾರೆ. ಈ ಅಪರೂಪದ ಅದ್ಭುತ ಪ್ರತಿಭೆ ಪ್ರಕೃತ ಬೆಂಗಳೂರಿನ ಜೈನ್ ಜೂನಿಯರ್ ಕಾಲೇಜ್ನಲ್ಲಿ ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿದ್ದಾರೆ.






