ಬೆಳ್ತಂಗಡಿ: ಶರನ್ನವರಾತ್ರಿ ಪ್ರಯುಕ್ತ ಮಲೆಬೆಟ್ಟು ಶ್ರೀ ವನದುರ್ಗ ದೇವಸ್ಥಾನದಲ್ಲಿ ಬೆಳ್ತಂಗಡಿ ತಾಲೂಕು ಗಮಕ ಕಲಾ ಪರಿಷತ್ ವತಿಯಿಂದ ಪರಿಷತ್‌ನ ಸದಸ್ಯರು ಗಮಕ-ನೃತ್ಯ ರೂಪಕವನ್ನು ಪ್ರದರ್ಶಿಸಿದರು. ನಿತ್ಯಾತ್ಮಯೋಗಿ ಕವಿಯು ಬರೆದ ಶ್ರೀ ಕರ್ನಾಟಕ ಭಾಗವತದಿಂದ ಆಯ್ದ ಕಾವ್ಯಭಾಗಗಳನ್ನು ಆಧರಿಸಿ ‘ಶ್ರೀ ಕೃಷ್ಣ ಲೀಲಾಮೃತಂ’ ಎಂಬ ನೃತ್ಯರೂಪಕ ಕಾರ್ಯಕ್ಮವನ್ನು ನಡೆಸಿಕೊಟ್ಟರು. ಕಾವ್ಯ ವಾಚನದಲ್ಲಿ ತಾಲೂಕು ಗಮಕ ಕಲಾ ಪರಿಷತ್ ಕಾರ್ಯದರ್ಶಿ ಗಮಕಿ ಮೇಧಾ ಅಶೋಕ ಭಟ್ ಮತ್ತು ಗಮಕ ವಿದ್ಯಾರ್ಥಿನಿ ಶ್ರೀವಿದ್ಯಾ ಐತಾಳ್ ಪ್ರಸ್ತುತ ಪಡಿಸಿದರು. ನಿರೂಪಣಾ ವ್ಯಾಖ್ಯಾನವನ್ನು ಗಮಕ ಕಲಾ ಪರಿಷತ್ ತಾಲೂಕು ಅಧ್ಯಕ್ಷ ರಾಮಕೃಷ್ಣ ಭಟ್ ಉಜಿರೆ ನಿರ್ವಹಿಸಿದರು. ನೃತ್ಯ ರೂಪಕದಲ್ಲಿ ಯುವ ಭರತನಾಟ್ಯ ಪಟುಗಳಾದ ಧರಿತ್ರಿ ಭಿಡೆ ಮತ್ತು ಹಂಸಿನಿ ಭಿಡೆ ಸಹೋದರಿಯರು ಮನೋಜ್ಞವಾಗಿ ಅಭಿವ್ಯಕ್ತಗೊಳಿಸಿ ಕಲಾಭಿಮಾನಿಗಳನ್ನು ರಂಜಿಸಿದರು. ದೇವಸ್ಥಾನದ ಆಡಳಿತ ಮಂಡಳಿ ಸದಸ್ಯರಾದ ರವೀಂದ್ರನಾಥ ಸ್ವಾಗತಿಸಿ, ಬಾಸಮೆ ನಾರಾಯಣ ಭಟ್ ಕಾರ್ಯಕ್ರಮ ಸಂಯೋಜಿಸಿ, ವಂದಿಸಿದರು. ದೇವಸ್ಥಾನದ ಮೊಕ್ತೇಸರ ಗಣೇಶ್ ಭಟ್, ಮುಂಡಾಜೆಯ ಧನಂಜಯ ಭಿಡೆ ಮತ್ತು ಊರಪರವೂರ ಭಕ್ತರು ಹಾಗೂ ಕಲಾಭಿಮಾನಿಗಳು ಉಪಸ್ಥಿತರಿದ್ದರು.






