ಬೆಳ್ತಂಗಡಿ: ಕಳಪೆ ಕಾಮಗಾರಿ ಮತ್ತು ಜನಪ್ರತಿನಿಧಿ ಹಾಗೂ ಅಧಿಕಾರಿಗಳ ಪರ್ಸಂಟೇಜ್ ಪೈಪೋಟಿಯಿಂದ ನಾಗರಿಕರ ನಾಲಗೆಗೆ ಆಹಾರವಾಗಿರುವ ಪುಂಜಾಲಕಟ್ಟೆ-ಚಾರ್ಮಾಡಿ ರಾಷ್ಟ್ರೀಯ ಹೆದ್ದಾರಿಯ ಕಳಪೆ ಕಾಮಗಾರಿಯ ನಗ್ನನರ್ತನ ರಾಷ್ಟ್ರೀಯ ಹೆದ್ದಾರಿಯ ಉಜಿರೆಯ ಎಂ.ಜಿ. ಟ್ರೇಡರ್ಸ್ ಬಳಿ ಅಕ್ಟೋಬರ್ 8ರ ಬೆಳಿಗ್ಗೆ ಸಂಭವಿಸಿದೆ.ಅವೈಜ್ಞಾನಿಕ ಕಾಮಗಾರಿಗೆ ಪ್ರತ್ಯಕ್ಷ ಉದಾಹರಣೆಯಾಗಿರುವ ಪುಂಜಾಲಕಟ್ಟೆ-ಚಾರ್ಮಾಡಿ ರಾಷ್ಟ್ರೀಯ ಹೆದ್ದಾರಿಯ ಕೆಲವೆಡೆ ಇಕ್ಕೆಲಗಳಲ್ಲಿ ನಿರ್ಮಿಸಲಾದ ಬೃಹತ್ ಗಾತ್ರದ ಒಳಚರಂಂಡಿ ವ್ಯವಸ್ಥೆ ಯಾಕೆ ಎಂಬುವುದು ಒಗಟಾಗಿಯೇ ಉಳಿದಿದೆ. (ಸುದೈವವಶಾತ್!) ಈ ಒಳಚರಂಡಿ ಕಾಮಗಾರಿ ಎಷ್ಟು ಕಳಪೆಯಾಗಿದೆ ಎಂದರೆ ಈ ಸಿಮೆಂಟ್ ಕಾಮಗಾರಿಗೆ ಒಂದು ದಿನವೂ ನೀರು ಹಾಕಿ ಕ್ಯೂರಿಂಗ್ ಕೆಲಸ ಮಾಡಲಿಲ್ಲ. ಈ ಎಡವಟ್ಟಿನ ಬಗ್ಗೆ ಪತ್ರಿಕೆಗಳು ವರದಿ ಮಾಡಿದರೂ ಗುತ್ತಿಗೆದಾರರಿಂದ ಎಂಜಲು ಕಾಸು ಪಡೆದು ತಮ್ಮನ್ನು ತಾವು ಮಾರಿಕೊಂಡ ರಾಷ್ಟ್ರೀಯ ಹೆದ್ದಾರಿ ವಿಭಾಗದ ಅಧಿಕಾರಿಗಳಾಗಲೀ, ಜವಾಬ್ದಾರಿಯುತ ಜನಪ್ರತಿನಿಧಿಗಳಾಗಲೀ ಈ ಕಳಪೆ ಕಾಮಗಾರಿಯ ಬಗ್ಗೆ ತುಟಿ ಪಿಟಿಕ್ ಅನ್ನಲಿಲ್ಲ. ಇದೀಗ ರಾಷ್ಟ್ರೀಯ ಹೆದ್ದಾರಿ ಬದಿಯ ಕಳಪೆ ಚರಂಡಿ ಕುಸಿದು ಸಿಮೆಂಟ್ ತುಂಬಿದ ಲಾರಿಯೊಂದು ಚರಂಡಿಗೆ ಬಿದ್ದ ಘಟನೆ ಅಕ್ಟೋಬರ್ 8ರ ಬೆಳಿಗ್ಗೆ ಉಜಿರೆಯ ಎಂ.ಜಿ. ಟ್ರೇಡರ್ಸ್ ಬಳಿ ನಡೆದಿದೆ. ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿ ಅಲ್ಲಲ್ಲಿ ನಿರ್ಮಿಸಿರುವ ಕಳಪೆ ಚರಂಡಿಗಳನ್ನು ಬೇರು ಸಹಿತ ಕಿತ್ತೊಗೆಯದಿದ್ದರೆ ಮುಂದಿನ ದಿನಗಳಲ್ಲಿ ಈ ರಾಷ್ಟ್ರೀಯ ಹೆದ್ದಾರಿಯಲ್ಲಿ ಇನ್ನಷ್ಟು ಅವಘಡ ಸಂಭವಿಸುವುದು ಗ್ಯಾರಂಟಿ. ಒಟ್ಟಿನಲ್ಲಿ ಪುಂಜಾಲಕಟ್ಟೆ-ಚಾರ್ಮಾಡಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗೆ ಸಂಪೂರ್ಣ ಗ್ರಹಣ ಬಡಿದಿರುವುದು ಸ್ಪಷ್ಟ. ಈ ಗ್ರಹಣದಿಂದ ಮುಕ್ತಿ ಎಂದು ಎಂಬುವುದೇ ನಾಗರಿಕರ ಮುಂದಿರುವ ಯಕ್ಷಪ್ರಶ್ನೆ.






