ಬೆಳ್ತಂಗಡಿ: ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡಿ ನಮ್ಮ ಸಂಸ್ಕೃತಿ ಮತ್ತು ಆಚಾರ-ವಿಚಾರಗಳನ್ನು ಉಳಿಸಬೇಕಾದ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಸಮಾಜದ ವಿದ್ಯಾರ್ಥಿಗಳಲ್ಲಿ ಸಮಾಜ ನಿಮ್ಮ ಜೊತೆಗಿದೆ ಎಂಬ ಭರವಸೆ ಮೂಡಿಸಿ, ಶಿಕ್ಷಣಕ್ಕೆ ಪ್ರೋತ್ಸಾಹಿಸಲು ಇಂದು ಇಲ್ಲಿ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡಲಾಗುತ್ತಿದೆ ಎಂದು ಮಂಗಳೂರು ಬಂಟರ ಯಾನೆ ನಾಡವರ ಮಾತೃ ಸಂಘದ ಅಧ್ಯಕ್ಷ ಅಜಿತ್ ಕುಮಾರ್ ರೈ ಮಾಲಾಡಿ ಹೇಳಿದರು.ಅವರು ಅಕ್ಟೋಬರ್ 13ರಂದು ಗುರುವಾಯನಕೆರೆ ಬಂಟರ ಯಾನೆ ನಾಡವರ ಸಂಘದ ಸಭಾಭವನದಲ್ಲಿ ಬೆಳ್ತಂಗಡಿ ತಾಲೂಕು ಬಂಟರ ಯಾನೆ ನಾಡವರ ಸಂಘದ ಆಶ್ರಯದಲ್ಲಿ ಮಂಗಳೂರು ಜಾಗತಿಕ ಬಂಟರ ಸಂಘಗಳ ಒಕ್ಕೂಟ, ಬಂಟರ ಯಾನೆ ನಾಡವರ ಸಂಘ ಮಾತೃ ಸಂಘ ಮಂಗಳೂರು, ಬಂಟರ ಸಂಘ ಬೆಂಗಳೂರು ಮತ್ತು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಮೂಡುಬಿದಿರೆ ಇವರ ಸಹಭಾಗಿತ್ವದಲ್ಲಿ ನಡೆದ ಸಮಾಜದ ಅರ್ಹ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ವಿತರಣೆ, ಪ್ರತಿಭಾ ಪುರಸ್ಕಾರ ಮತ್ತು ಸಾಧಕರಿಗೆ ಸಮ್ಮಾನ ಸಮಾರಂಭವನ್ನು ದೀಪ ಪ್ರಜ್ವಲಿಸಿ ಉದ್ಘಾಟಿಸಿ ಮಾತನಾಡುತ್ತಿದ್ದರು.ಸಂಘಟನೆಯಿಂದ ಶಿಕ್ಷಣಕ್ಕೆ ಪ್ರೋತ್ಸಾಹ ನೀಡುವ ಮೂಲಕ ಸುಶಿಕ್ಷಿತ ಸಮಾಜ ನಿರ್ಮಾಣ ಸಾಧ್ಯ ಎಂದ ಅಜಿತ್ ಕುಮಾರ್ ರೈ; ಇಲ್ಲಿನ ಸಮಾಜಮುಖಿ ಕಾರ್ಯಕ್ರಮಗಳಿಗೆ ಮಾತೃ ಸಂಘದ ಸಂಪೂರ್ಣ ಸಹಕಾರವಿದೆ ಎಂದರು.ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಸಂಸದ ಬ್ರಿಜೇಶ್ ಚೌಟ ಸಮ್ಮಾನ ಸ್ವೀಕರಿಸಿ ಮಾತನಾಡಿ; ರಾಷ್ಟ್ರದ ಭವಿಷ್ಯ ನಿರ್ಮಿಸುವ ವಿದ್ಯಾರ್ಥಿಗಳಿಗೆ ವಿದ್ಯಾನಿಧಿಯ ಮೂಲಕ ಪ್ರೋತ್ಸಾಹ ನೀಡುವ ಕಾರ್ಯ ಇತರರಿಗೆ ಮಾದರಿ. ವಿದ್ಯಾರ್ಥಿಗಳು ಸಮಾಜಮುಖಿಯಾಗಿ ಚಿಂತಿಸಬೇಕು; ನಾಯಕತ್ವ ಗುಣಗಳನ್ನು ಬೆಳೆಸಿಕೊಳ್ಳಬೇಕು; ಹಾಗೂ ಮಾದರಿ ವ್ಯಕ್ತಿತ್ವ ರೂಪಿಸಿಕೊಳ್ಳಬೇಕು ಎಂದು ಕರೆ ನೀಡಿದರು.ಮೂಡುಬಿದಿರೆ ಆಳ್ವಾಸ್ ಶಿಕ್ಷಣ ಸಂಸ್ಥೆಯ ಟ್ರಸ್ಟಿ ವಿವೇಕ್ ಆಳ್ವ ದಿಕ್ಸೂಚಿ ಭಾಷಣ ಮಾಡಿ ವಿದ್ಯಾರ್ಥಿಗಳಿಗೆ ಸೂಕ್ತ ಮಾರ್ಗದರ್ಶನ ನೀಡಿದರು. ಬೆಂಗಳೂರು ಬಂಟರ ಸಂಘದ ವಿದ್ಯಾರ್ಥಿ ನಿಧಿ ಸಂಚಾಲಕ ಉಮೇಶ್ ಶೆಟ್ಟಿ ಶುಭ ಹಾರೈಸಿದರು. ಬೆಳ್ತಂಗಡಿ ತಾಲೂಕು ಬಂಟರ ಯಾನೆ ನಾಡವರ ಸಂಘದ ಅಧ್ಯಕ್ಷ ಭಂಡಾರಿಗುಡ್ಡೆ ಜಯಂತ್ ಶೆಟ್ಟರ ಅಧ್ಯಕ್ಷತೆಯಲ್ಲಿ ನಡೆದ ಈ ಅರ್ಥಪೂರ್ಣ ಕಾರ್ಯಕ್ರಮದ ವೇದಿಕೆಯಲ್ಲಿ ಬೆಂಗಳೂರು ಬಂಟರ ಸಂಘದ ವಿದ್ಯಾರ್ಥಿ ನಿಧಿಯ ಸಂಚಾಲಕ ಉಮೇಶ್ ಶೆಟ್ಟಿ, ತಾಲೂಕು ವಿದ್ಯಾರ್ಥಿ ನಿಧಿ ಸಂಚಾಲಕ ಅಜಿತ್ ಶೆಟ್ಟಿ ಕೋರ್ಯಾರು, ಮಂಗಳೂರು ಬಂಟರ ಯಾನೆ ನಾಡವರ ಮಾತೃ ಸಂಘದ ಬೆಳ್ತಂಗಡಿ ತಾಲೂಕು ಸಮಿತಿಯ ಸಂಚಾಲಕ ಎಂ. ಜಯರಾಮ ಶೆಟ್ಟಿ ಧರ್ಮಸ್ಥಳ, ಮಂಗಳೂರು ಜಾಗತಿಕ ಬಂಟರ ಸಂಘಗಳ ಒಕ್ಕೂಟದ ನಿರ್ದೇಶಕ ಮುಂಡಾಡಿಗುತ್ತು ಜಯರಾಮ ಶೆಟ್ಟಿ, ಬೆಳ್ತಂಗಡಿ ತಾಲೂಕು ಬಂಟರ ಯಾನೆ ನಾಡವರ ಸಂಘದ ಉಪಾಧ್ಯಕ್ಷರಾದ ಉಮೇಶ್ ಶೆಟ್ಟಿ ಉಜಿರೆ ಹಾಗೂ ಕರಂಬಾರುಬೀಡು ನವೀನ್ ಸಾಮಾನಿ, ಕಾರ್ಯದರ್ಶಿ ಸುರೇಶ್ ಶೆಟ್ಟಿ ಲಾಯ್ಲ, ಕೋಶಾಧಿಕಾರಿ ವಸಂತ ಶೆಟ್ಟಿ, ಜೊತೆ ಕಾರ್ಯದರ್ಶಿ ಕಿರಣ್ ಕುಮಾರ್ ಶೆಟ್ಟಿ ಜೈನ್‌ಪೇಟೆ, ಮಹಿಳಾ ವಿಭಾಗದ ಅಧ್ಯಕ್ಷೆ ಕರಂಬಾರುಬೀಡು ಜಯಲಕ್ಷ್ಮಿ ಎನ್. ಸಾಮಾನಿ, ಯುವ ವಿಭಾಗದ ಅಧ್ಯಕ್ಷ ಪ್ರತೀಕ್ ಶೆಟ್ಟಿ ನೊಚ್ಚ ವೇದಿಕೆಯಲ್ಲಿ ಉಪಸ್ಥಿತರಿದ್ದರು.ಪ್ರಕಾಶ್ ಶೆಟ್ಟಿ ನೊಚ್ಚ ನಿರೂಪಿಸಿದ ಕಾರ್ಯಕ್ರಮಕ್ಕೆ ಕಾರ್ಯಾಣ ಬಾಸ್ಕರ ಶೆಟ್ಟಿ ಮತ್ತು ತಂಡ ಪ್ರಾರ್ಥನೆಯ ಮೂಲಕ ಚಾಲನೆ ನೀಡಿದರು. ವಿದ್ಯಾರ್ಥಿ ನಿಧಿಯ ಸಂಚಾಲಕ ಅಜಿತ್ ಶೆಟ್ಟಿ ಕೋರ್ಯಾರು ಸ್ವಾಗತಿಸಿದರು. ಕಾರ್ಯಕ್ರಮದಲ್ಲಿ ತಾಲೂಕು ಬಂಟರ ಯಾನೆ ನಾಡವರ ಸಂಘದ ನೂತನ ಪದಾಧಿಕಾರಿಗಳನ್ನು, ಯುವ ವಿಭಾಗದ ನೂತನ ಪದಾರ್ಥಗಳನ್ನು ಹಾಗೂ ಮಹಿಳಾ ವಿಭಾಗದ ಪದಾಧಿಕಾರಿಗಳನ್ನು ಗೌರವಿಸಲಾಯಿತು. ಬೆಂಗಳೂರಿನ ಎಂ.ಸಿ.ಆರ್. ಶೆಟ್ಟಿ ಇವರ ಪ್ರಾಯೋಜಕತ್ವದಲ್ಲಿ ಬಂಟರ ಯಾನೆ ನಾಡವರ ಸಂಘದ ವತಿಯಿಂದ ವಿದ್ಯಾರ್ಥಿಗಳಾದ ತೇಜಸ್ ಹಾಗೂ ಶೈಲಶ್ರೀಯವರನ್ನು ದತ್ತು ಸ್ವೀಕರಿಸಲಾಯಿತು. ಕಳೆದ ಶೈಕ್ಷಣಿಕ ವರ್ಷ ವಿಶೇಷ ಸಾಧನೆಗೈದ ಸಮಾಜದ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು. ಬೆಳ್ತಂಗಡಿಯ ಸ್ಪಂದನ ಸೇವಾ ಸಂಘದ ಸೇವಾ ಚಟುವಟಿಕೆಗಳ ಭಾಗವಾಗಿ ಮೂರು ಮಂದಿ ಪ್ರತಿಭಾವಂತ ವಿದ್ಯಾರ್ಥಿಗಳನ್ನು ವಿದ್ಯಾರ್ಥಿ ನಿಧಿ ನೀಡಿ ಪುರಸ್ಕರಿಸಲಾಯಿತು. ತಾಲೂಕಿನ ವಿವಿಧ ಸೇವಾ ಸಹಕಾರಿ ಸಂಘಗಳಲ್ಲಿ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿರುವ ಸಮಾಜದ ಸಹಕಾರಿ ಬಂಧುಗಳಾದ ಕರಂಬಾರುಬೀಡು ನವೀನ್ ಸಾಮಾನಿ, ಬಾರ್ಯ ಪ್ರವೀಣ್ ರೈ ಮತ್ತು ಕಣಿಯೂರು ರಕ್ಷಿತ್ ಶೆಟ್ಟಿ ಪಣೆಕ್ಕರರನ್ನು ಗೌರವಿಸಲಾಯಿತು. ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಾದ ಲಯನ್ ದೇವದಾಸ್ ಶೆಟ್ಟಿ ಹಿಬರೋಡಿ, ಮೇಘೇಶ್ ಶೆಟ್ಟಿ ಹಿಬರೋಡಿ, ಅದ್ವಿತ್ ಸಿ. ಶೆಟ್ಟಿ ಓಡಿಲ್ನಾಳ ಮತ್ತು ಶ್ರುತಾ ಜೆ. ಶೆಟ್ಟಿ ಮಾಲಾಡಿಯವರನ್ನು ಗುರುತಿಸಿ ಸಮ್ಮಾನಿಸಲಾಯಿತು. ವಿದ್ಯಾರ್ಥಿ ನಿಧಿಗೆ ಠೇವಣಿ ಇರಿಸಿ ಸಹಕರಿಸಿದ ದಾನಿಗಳನ್ನು ಗುರುತಿಸಲಾಯಿತು. ಕಾರ್ಯಕ್ರಮದ ಯಶಸ್ಸಿಗೆ ರಾಜು ಶೆಟ್ಟಿ ಬೇಂಗೆತ್ಯಾರು, ಸುರೇಶ್ ಶೆಟ್ಟಿ ಲಾಯ್ಲ, ಕಿರಣ್ ಕುಮಾರ್ ಶೆಟ್ಟಿ ಜೈನ್‌ಪೇಟೆ, ಸುಭಾಶ್ಚಂದ್ರ ರೈ ಅಳದಂಗಡಿ, ಟಿ.ಆರ್. ಅಡ್ಯಂತಾಯ, ರಘುರಾಮ ಗಾಂಭೀರ, ರಘುರಾಮ ಶೆಟ್ಟಿ ಸಾಧನಾ ಸಹಕರಿಸಿದರು. ಉಪಾಧ್ಯಕ್ಷ ಕರಂಬಾರುಬೀಡು ನವೀನ್ ಸಾಮಾನಿ ವಂದಿಸಿದರು.






