ಬೆಳ್ತಂಗಡಿ: ಕರ್ನಾಟಕ ರಾಜ್ಯ ಸರಕಾರಿ ನಿವೃತ್ತ ನೌಕರರ ಸಂಘ (ರಿ) ಬೆಂಗಳೂರು ಕೇಂದ್ರ ಸಂಘದ ಮೈಸೂರು ವಿಭಾಗ ಮಟ್ಟದ ಸಂಘಟನಾ ಕಾರ್ಯದರ್ಶಿಯಾಗಿ ಕೆ. ಜಯಕೀರ್ತಿ ಜೈನ್ ಧರ್ಮಸ್ಥಳ ಇವರನ್ನು ಸಂಘದ ರಾಜ್ಯ ಅಧ್ಯಕ್ಷರಾದ ಡಾ. ಎಲ್. ಭಯರಪ್ಪರವರು ನೇಮಕ ಮಾಡಿರುತ್ತಾರೆ.ಜಯಕೀರ್ತಿ ಜೈನ್‌ರವರು ಸುದೀರ್ಘ 25ವರ್ಷಗಳ ಕಾಲ ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ಬೆಳ್ತಂಗಡಿ ತಾಲೂಕು ಶಾಖೆಯ ಅಧ್ಯಕ್ಷರಾಗಿ ಸಂಘಕ್ಕೆ ಯಶಸ್ವಿ ನಾಯಕತ್ವ ಒದಗಿಸಿದ್ದರು. ಅಂತೆಯೇ 35 ವರ್ಷಗಳ ಸುದೀರ್ಘ ಅವಧಿಗೆ ದಕ್ಷಿಣ ಕನ್ನಡ ಜಿಲ್ಲಾ ಪಶು ವೈದ್ಯ ಪರಿವೀಕ್ಷಕ ಸಂಘದ ಅಧ್ಯಕ್ಷರಾಗಿ, ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ರಾಜ್ಯ ಕಾರ್ಯದರ್ಶಿಯಾಗಿ ಹಾಗೂ ರಾಜ್ಯ ಸಂಘಟನಾ ಕಾರ್ಯದರ್ಶಿಯಾಗಿ ಯಶಸ್ವಿ ಸಂಘಟಕರಾಗಿ ಗುರುತಿಸಿಕೊಂಡಿದ್ದರು. ವೇಣೂರಿನ ಐತಿಹಾಸಿಕ ಬಾಹುಬಲಿ ಮಹಾಮಸ್ತಕಾಭಿಷೇಕದ ಸಂದರ್ಭ ರಾಜ್ಯ ಸರಕಾರದಿಂದ ಸಮನ್ವಯ ಅಧಿಕಾರಿಯಾಗಿ ಯಶಸ್ವಿಯಾಗಿ ಕೆಲಸ ನಿರ್ವಹಿಸಿದ್ದಾರೆ. ಪ್ರಸ್ತುತ ರಾಜ್ಯ ಸರಕಾರಿ ನೌಕರರ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷರಾಗಿ ಹಾಗೂ ಮಹಾವೀರ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ ನಿರ್ದೇಶಕರಾಗಿ ಸಹಕಾರಿ ಕ್ಷೇತ್ರದಲ್ಲಿ ಸಕ್ರಿಯರಾಗಿರುವ ಜಯಕೀರ್ತಿ ಜೈನ್; ವಿವಿಧ ಸಾಮಾಜಿಕ ಸಂಘಟನೆಗಳಲ್ಲಿ ತೊಡಗಿಸಿಕೊಂಡಿದ್ದಾರಲ್ಲದೇ, ಶಿಶಿಲದ ಶ್ರೀ ಕ್ಷೇತ್ರ ಚಂದ್ರಪುರದ ಅಡಳಿತ ಮಂಡಳಿಯ ಸಂಚಾಲಕರಾಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ.






