ಬೆಳ್ತಂಗಡಿ: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜು (ಸ್ವಾಯತ್ತ) ಉಜಿರೆಯ ರಾಷ್ಟ್ರೀಯ ಸೇವಾ ಯೋಜನೆಯ ಸುವರ್ಣ ಸಂಭ್ರಮಾಚಾರಣೆಯ ಹಿನ್ನೆಲೆಯಲ್ಲಿ ಬದುಕು ಕಟ್ಟೋಣ ಬನ್ನಿ ಸೇವಾ ಟ್ರಸ್ಟ್ (ರಿ) ಉಜಿರೆ ಇದರ ನೇತೃತ್ವದಲ್ಲಿ ಉಜಿರೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜು ರಾಷ್ಟ್ರೀಯ ಸೇವಾ ಯೋಜನಾ ಘಟಕಗಳು, ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಸ್ಪೋರ್ಟ್ಸ್ ಕ್ಲಬ್ ಉಜಿರೆ, ರೋಟರಿ ಕ್ಲಬ್ ಬೆಳ್ತಂಗಡಿ, ಬೆಳ್ತಂಗಡಿ ತಾಲೂಕು ಪತ್ರಕರ್ತರ ಸಂಘ, ಅನಂತಪದ್ಮನಾಭ ದೇವಸ್ಥಾನ ಅನಂತೋಡಿ ಇದರ ವ್ಯವಸ್ಥಾಪನ ಸಮಿತಿ ಇವುಗಳ ಸಹಯೋಗದಲ್ಲಿ ಸುಮಾರು 500ಕ್ಕೂ ಮಿಕ್ಕಿ ವಿದ್ಯಾರ್ಥಿಗಳಿಂದ ಏಕ ಕಾಲದಲ್ಲಿ ಯುವ ಸಿರಿ-ರೈತ ಭಾರತದ ಐಸಿರಿ ನೇಜಿ ನಾಟಿ ಕಾರ್ಯಕ್ರಮವು ಬೆಳಾಲು ಅನಂತೋಡಿ ಶ್ರೀ ಅನಂತಪದ್ಮನಾಭ ದೇವಸ್ಥಾನದ ಬಳಿ ಅಕ್ಟೋಬರ್ 20ರಂದು ನಡೆಯಲಿದೆ ಎಂದು ಉಜಿರೆ ಬದುಕು ಕಟ್ಟೋಣ ಬನ್ನಿ ಸೇವಾ ಟ್ರಸ್ಟ್‌ನ ಸಂಚಾಲಕ ಕೆ. ಮೋಹನ್ ಕುಮಾರ್ ತಿಳಿಸಿದರು.ಅವರು ಅಕ್ಟೋಬರ್ 14ರಂದು ಉಜಿರೆಯ ಓಷನ್‌ಪರ್ಲ್ ಹೊಟೇಲ್‌ನ ಸಭಾಂಗಣದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದರು.ನಾಡಿನಲ್ಲಿ ಭತ್ತದ ಕೃಷಿ ಉಳಿಸಬೇಕು, ವಿದ್ಯಾರ್ಥಿಗಳು ಹಾಗೂ ಯುವ ಜನತೆಗೆ ಕೃಷಿಯಲ್ಲಿ ಆಸಕ್ತಿ ಹುಟ್ಟಿಸುವ ನಿಟ್ಟಿನಲ್ಲಿ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಭತ್ತದ ಕೃಷಿ ಪ್ರಾರಂಭದ ಹಂತದಿಂದ ಕಟಾವು ಆಗಿ ಭತ್ತ ಗಿರಾಣಿಗೆ ತಲುಪಿಸಿ ಅಕ್ಕಿ ಆಗುವವರೆಗೆ ವಿದ್ಯಾರ್ಥಿಗಳನ್ನು ಈ ಕಾರ್ಯಕ್ರಮದಲ್ಲಿ ನಿರಂತರವಾಗಿ ಉಪಯೋಗಿಸಿಕೊಳ್ಳಲಾಗುವುದು ಎಂದು ಮೋಹನ್ ಕುಮಾರ್ ತಿಳಿಸಿದರು.ದೇವಸ್ಥಾನದ 4.5 ಎಕ್ರೆ ಗದ್ದೆಯಲ್ಲಿ ಉಳುಮೆ, ಸಸಿ ಎಲ್ಲವೂ ಈಗಾಗಲೆ ಸಿದ್ದವಾಗಿದೆ. ಇದರಲ್ಲಿ ಉತ್ಪಾದನೆ ಆದ ಅಕ್ಕಿಯನ್ನು ದೇವಸ್ಥಾನದ ನೈವೇದ್ಯಕ್ಕೆ ಹಾಗೂ ಬೈ ಹುಲ್ಲನ್ನು ನಂದಗೋಕುಲ ಗೋಶಾಲೆಗೆ ನೀಡಲಾಗುವುದು. ಇದರೊಂದಿಗೆ ವಿದ್ಯಾರ್ಥಿಗಳಿಗೆ ಪ್ರತಿ ಹಂತದಲ್ಲೂ ಕೃಷಿಯ ಬಗ್ಗೆ ತಜ್ಞರಿಂದ ಮಾಹಿತಿಯನ್ನು ನೀಡಲಾಗುತ್ತದೆ ಎಂದರು.ಸೋನಿಯಾ ಯಶೋವರ್ಮ ಕಾರ್ಯಕ್ರಮ ಉದ್ಘಾಟಿಸಲಿದ್ದು, ಮುಖ್ಯ ಅತಿಥಿಗಳಾಗಿ ಉಜಿರೆ ಶ್ರೀ ಜನಾರ್ದನ ಸ್ವಾಮಿ ದೇವಸ್ಥಾನ ಆಡಳಿತ ಮೊಕ್ತೇಸರ ಶರತ್‌ಕೃಷ್ಣ ಪಡುವೆಟ್ಣಾಯ, ಉಜಿರೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ. ಸತೀಶ್ಚಂದ್ರ ಎಸ್., ಉಜಿರೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನ ಪ್ರಾಂಶುಪಾಲ ಡಾ. ಬಿ.ಎ. ಕುಮಾರ ಹೆಗ್ಡೆ, ಸಿರಿ ಗ್ರಾಮೋದ್ಯೋಗ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಕೆ.ಎನ್. ಜನಾರ್ದನ್, ಉಜಿರೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಇಂಜಿನಿಯರಿಂಗ್ ಕಾಲೇಜಿನ ಸಿವಿಲ್ ಡಿಪಾರ್ಟ್‌ಮೆಂಟ್ ವಿಭಾಗ ಮುಖ್ಯಸ್ಥ ರವೀಶ್ ಪಡುಮಲೆ, ಬೆಳ್ತಂಗಡಿ ರೋಟರಿ ಕ್ಲಬ್ ಅಧ್ಯಕ್ಷ ರೊ. ಪೂರಣ್ ವರ್ಮ, ಬೆಳ್ತಂಗಡಿ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಚೈತ್ರೇಶ್ ಇಳಂತಿಲ, ಉಜಿರೆ ಬದುಕು ಕಟ್ಟೋಣ ಬನ್ನಿ ಸೇವಾ ಟ್ರಸ್ಟ್‌ನ ಅಧ್ಯಕ್ಷ ಬಿ.ಕೆ. ಧನಂಜಯ ರಾವ್, ಬೆಳಾಲು ಅನಂತೋಡಿ ಅನಂತಪದ್ಮನಾಭ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಶ್ರೀನಿವಾಸ್ ಗೌಡ, ರುಡ್‌ಸೆಟ್ ಸಂಸ್ಥೆಯ ಹಿರಿಯ ಉಪನ್ಯಾಸಕ ಜೇಮ್ಸ್ ಅಬ್ರಹಾಂ, ಧರ್ಮಸ್ಥಳ ಕೃಷಿ ವಿಭಾಗದ ಬಾಲಕೃಷ್ಣ ಪೂಜಾರಿ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಇದೇ ಸಂದರ್ಭದಲ್ಲಿ ಕೃಷಿ ಸಾಧಕ ಬಿ.ಕೆ. ದೇವರಾವ್ ಅವರನ್ನು ಗೌರವಿಸುವ ಕಾರ್ಯ ನಡೆಯಲಿದೆ.ಪತ್ರಿಕಾಗೋಷ್ಟಿಯಲ್ಲಿ ರಾಜೇಶ್ ಪೈ, ಚೈತ್ರೇಶ್ ಇಳಂತಿಲ, ಡಾ. ಮಹೇಶ್ ಕುಮಾರ್ ಶೆಟ್ಟಿ ಹೆಚ್., ಸಂದೇಶ್ ಕುಮಾರ್, ಶ್ರೀಧರ ಕೆ.ವಿ. ಉಪಸ್ಥಿತರಿದ್ದರು.