ಬೆಳ್ತಂಗಡಿ: ಸ್ಥಳೀಯ ಸಂಸ್ಥೆಗಳಾದ ಗ್ರಾಮ ಪಂಚಾಯತ್, ತಾಲೂಕು ಪಂಚಾಯತ್ ಹಾಗೂ ಜಿಲ್ಲಾ ಪಂಚಾಯತ್ ಚುನಾವಣೆಗಳು ಶಾಲೆಗಳಲ್ಲಿನ ಮಾಸಿಕ ಪರೀಕ್ಷೆ, ತ್ರೈಮಾಸಿಕ ಪರೀಕ್ಷೆ ಹಾಗೂ ಅರ್ಧವಾರ್ಷಿಕ ಪರೀಕ್ಷೆಗಳಂತೆ. ಈ ಚುನಾವಣೆಗಳ ಸಂದರ್ಭಗಳಲ್ಲಿ ಪಕ್ಷದ ಪ್ರಮುಖರೆನಿಸಿಕೊಂಡವರು ಅಸಡ್ಡೆ ಅಥವಾ ನಿರ್ಲ್ಯಕ್ಷ್ಯ ತೋರಿದರೆ ಅದರ ಪರಿಣಾಮ ಮುಂದಿನ ವಿಧಾನಸಭಾ ಮತ್ತು ಲೋಕಸಭಾ ಚುನಾವಣೆಗಳಲ್ಲಿ ಅನುಭವಿಸಬೇಕಾಗುತ್ತದೆ. ತಳಮಟ್ಟದಿಂದ ಪಕ್ಷವನ್ನು ಸದೃಢಗೊಳಿಸಲು ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ನಾವು ಹೆಚ್ಚು ಶ್ರಮವಹಿಸಿ ಕೆಲಸಮಾಡಿ, ನಮ್ಮ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಂಡು ಬರಬೇಕು ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಪಕ್ಷದ ಕಾರ್ಯಾಧ್ಯಕ್ಷ ಹಾಗೂ ವಿಧಾನ ಪರಿಷತ್ ಶಾಸಕ ಡಾ. ಮಂಜುನಾಥ ಭಂಡಾರಿ ಹೇಳಿದರು.ಅವರು ಅಕ್ಟೋಬರ್ 17ರಂದು ಬೆಳ್ತಂಗಡಿಯ ಸಿವಿಸಿ ಹಾಲ್‌ನಲ್ಲಿ ಬೆಳ್ತಂಗಡಿ ನಗರ ಮತ್ತು ಗ್ರಾಮೀಣ ಬ್ಲಾಕ್ ಕಾಂಗ್ರೆಸ್‌ಗಳ ಜಂಟಿ ಆಶ್ರಯದಲ್ಲಿ ಪಕ್ಷದ ವಿವಿಧ ಘಟಕಗಳ ಸಹಭಾಗಿತ್ವದಲ್ಲಿ ನಡೆದ ಪಕ್ಷದ ಸ್ಥಳೀಯ ಸಂಸ್ಥೆಗಳ ಚುನಾಯಿತ ಪ್ರತಿನಿಧಿಗಳ ಮತ್ತು ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ಅಕ್ಟೋಬರ್ 21ರಂದು ನಡೆಯಲಿರುವ ಕರ್ನಾಟಕ ವಿಧಾನ ಪರಿಷತ್ ಉಪಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿಯ ಪರವಾಗಿ ಪ್ರಚಾರ ಭಾಷಣ ಮಾಡುತ್ತಿದ್ದರು. ಚುನಾವಣೆಯಲ್ಲಿ ಸೋಲು ಅಥವಾ ಗೆಲುವಿಗೆ ಹೆಚ್ಚಿನ ಪ್ರಾಮುಖ್ಯತೆ ಕೊಡಬಾರದು. ಬದಲಾಗಿ ಷುನಾವಣೆಗಳನ್ನು ಪಕ್ಷ ಸಂಘಟನೆಗೆ ಅವಕಾಶವಾಗಿ ಬಳಸಿಕೊಳ್ಳಬೇಕು. ಆಗ ಮುಂದೊಂದು ದಿನ ಪಕ್ಷದ ಗೆಲುವಿಗೆ ತಳಪಾಯ ಹಾಕಿದಂತಾಗುತ್ತದೆ ಎಂದು ಅವರು ಕಾರ್ಯಕರ್ತರಿಗೆ ಕಿವಿಮಾತು ಹೇಳಿ ಹುರಿದುಂಬಿಸಿದರು.ಪಕ್ಷದ ಅಭ್ಯರ್ಥಿ ರಾಜು ಪೂಜಾರಿ ಮಾತನಾಡಿ; ತನ್ನ ಪಕ್ಷ ನಿಷ್ಠೆಯನ್ನು ಪ್ರಸ್ತುತಪಡಿಸಿದರಲ್ಲದೇ, ಚುನಾವಣೆಯಲ್ಲಿ ಎಲ್ಲರ ಸಹಕಾರ ಕೋರಿದರು.ಪ್ರಾಸ್ತಾವಿಕವಾಗಿ ಮಾತನಾಡಿದ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ; ತಾಲೂಕಿನ ಅಭಿವೃದ್ಧಿಗೆ ಕಾಂಗ್ರೆಸ್ ಪಕ್ಷ ಸಂಕಲ್ಪಿಸಿದ್ದು, ಮುಂದಿನ ದಿನಗಳಲ್ಲಿ ಮಚ್ಚಿನದ ಪ್ರಾಥಮಿಕ ಆರೋಗ್ಯ ಕೇಂದ್ರದ ಕಟ್ಟಡ ಕಾಮಗಾರಿ ಸಹಿತ ಸಾಕಷ್ಟು ಕಾಮಗಾರಿಗಳಿಗೆ ಚಾಲನೆ ನೀಡಲಿದ್ದೇವೆ. ತಾಲೂಕಿನ ಬಡ ಜನತೆಯ ಬಹುಕಾಲದ ಬೇಡಿಕೆಯಾದ ಇಂದಿರಾ ಕ್ಯಾಂಟೀನ್ ಕಾಮಗಾರಿ ಪ್ರಗತಿಯಲ್ಲಿದ್ದು ಅದನ್ನೂ ಆದಷ್ಟು ಶೀಘ್ರ ಲೋಕಾರ್ಪಣೆಗೊಳಿಸಲಿದ್ದೇವೆ ಎಂದರು.ಪುಂಜಾಲಕಟ್ಟೆ-ಚಾರ್ಮಾಡಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಅನುಷ್ಠಾನದಲ್ಲಾದ ಗೊಂದಲದ ಬಗ್ಗೆ ಪ್ರಸ್ತಾಪಿಸಿದ ರಕ್ಷಿತ್ ಶಿವರಾಂ, ಆದಷ್ಟು ಬೇಗ ಎಲ್ಲ ನಾಟಕ ಹಾಗೂ ಗೊಂದಲಗಳಿಗೆ ತೆರೆ ಎಳೆದು ಜನರ ಸಮಸ್ಯೆಗೆ ಕಾಂಗ್ರೆಸ್ ಪಕ್ಷ ಸ್ಪಂದಿಸಲಿದೆ ಎಂದರು.ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಹರೀಶ್ ಕುಮಾರ್‌ರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಪಕ್ಷದ ಪ್ರಮುಖರಾದ ಆರ್. ಪದ್ಮರಾಜ್, ಎಂ.ಎಸ್. ಮೊಹಮ್ಮದ್, ಲೋಕೇಶ್ವರಿ ವಿನಯಚಂದ್ರ, ಸಂತೋಷ್ ಕುಮಾರ್, ಸುಭಾಶ್ಚಂದ್ರ ಪಡ್ಯೋಡಿಗುತ್ತು, ಜೋಸೆಫ್ ಯಾನೆ ರಾಯ್ ಪುದುವೆಟ್ಟು, ನಮಿತಾ ಪೂಜಾರಿ, ಪ್ರಶಾಂತ್ ವೇಗಸ್, ಪದ್ಮನಾಭ ಸಾಲಿಯಾನ್, ಧರಣೇಂದ್ರ ಕುಮಾರ್, ಪ್ರದೀಪ್ ಕೆ.ಸಿ. ವೇದಿಕೆಯಲ್ಲಿ ಉಪಸ್ಥಿತರಿದ್ದರು.ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಕೆ.ಕೆ. ಶಾಹುಲ್ ಹಮೀದ್ ನಿರೂಪಿಸಿದ ಕಾರ್ಯಕ್ರಮಕ್ಕೆ ಕೆ.ಸಿ. ಪ್ರದೀಪ್ ‘ವಂದೇ ಮಾತರಂ’ ಗೀತೆಯ ಮೂಲಕ ಚಾಲನೆ ನೀಡಿದರು. ನಗರ ಬ್ಲಾಕ್ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಸತೀಶ್ ಕಾಶಿಪಟ್ಣ ಸ್ವಾಗತಿಸಿದರು. ಸಭೆಯಲ್ಲಿ ಮೊದಲಿಗೆ ಮಹರ್ಷಿ ವಾಲ್ಮೀಕಿ ಜನ್ಮದಿನಾಚರಣೆ ಪ್ರಯುಕ್ತ ಮಹರ್ಷಿ ವಾಲ್ಮೀಕಿಯು ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಲಾಯಿತು. ಇತ್ತೀಚೆಗೆ ವಿಧಿವಶರಾದ ತಾಲೂಕು ಕಾಂಗ್ರೆಸ್ ಪಕ್ಷದ ಪ್ರಮುಖರಾದ ಉಜಿರೆಯ ಇಚ್ಚಿಲ ಸುಂದರ ಗೌಡ, ಬೆಳ್ತಂಗಡಿಯ ಶಂಕರ ಹೆಗ್ಡೆ ಹಾಗೂ ಲಾಯ್ಲದ ರೋಹಿತ್ ರಾಯನ್ ಡಿ’ಸೋಜಾರಿಗೆ ಶ್ರದ್ಧಾಂಜಲಿ ಸಲ್ಲಿಸಿ ಒಂದು ನಿಮಿಷದ ಮೌನ ಪ್ರಾರ್ಥನೆ ಸಲ್ಲಿಸಲಾಯಿತು. ಬೆಳ್ತಂಗಡಿ ಗ್ರಾಮೀಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನಾಗೇಶ್ ಕುಮಾರ್ ಗೌಡ ವಂದಿಸಿದರು.






