ಶ್ರೀ ಕ್ಷೇತ್ರ ಧರ್ಮಸ್ಥಳ ಲಕ್ಷದೀಪೋತ್ಸವ ಪಾದಯಾತ್ರೆ ಪೂರ್ವಭಾವಿ ಸಭೆ

ಶ್ರೀ ಕ್ಷೇತ್ರ ಧರ್ಮಸ್ಥಳ ಲಕ್ಷದೀಪೋತ್ಸವ ಪಾದಯಾತ್ರೆ ಪೂರ್ವಭಾವಿ ಸಭೆ
Facebook
Twitter
LinkedIn
WhatsApp

ಬೆಳ್ತಂಗಡಿ: ಸಮಾನ ಮನಸ್ಕರು, ಸಜ್ಜನರು ಸೇರಿ ಆರಂಭಿಸಿದ ಪಾದಯಾತ್ರೆ ಪರಂಪರೆ ಇಂದು ಸಂಸ್ಕೃತಿಯಾಗಿ ಬೆಳೆದಿದೆ. ಊರಿನ ಸೌಹಾರ್ದತೆ, ಸತ್ಯ, ಧರ್ಮ, ಪ್ರೀತಿ ಎತ್ತಿ ಹಿಡಿಯಲು ಪಾದಯಾತ್ರೆ ಸಹಕಾರಿಯಾಗಿದೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕ ಅನಿಲ್ ಕುಮಾರ್ ಎಸ್.ಎಸ್. ಹೇಳಿದರು. ಅವರು ನವೆಂಬರ್ 10ರಂದು ಉಜಿರೆ ಶ್ರೀ ಜನಾರ್ದನ ದೇವಸ್ಥಾನದ ರಾಮಕೃಷ್ಣ ಸಭಾಭವನದಲ್ಲಿ ಜರಗಿದ ಶ್ರೀ ಕ್ಷೇತ್ರ ಧರ್ಮಸ್ಥಳ ಲಕ್ಷ ದೀಪೋತ್ಸವ ಪಾದಯಾತ್ರೆಯ ಪೂರ್ವಭಾವಿ ಸಭೆಯಲ್ಲಿ ಮಾತನಾಡುತ್ತಿದ್ದರು. ಪ್ರತಿ ವರ್ಷವೂ 10,000 ಕ್ಕಿಂತ ಅಧಿಕ ಮಂದಿ ಪಾದಯಾತ್ರೆಯಲ್ಲಿ ಭಾಗವಹಿಸುತ್ತಿದ್ದು, ಉಜಿರೆ ಹಾಗೂ ಆಸುಪಾಸಿನ ಗ್ರಾಮಸ್ಥರಿಗೆ ಊರವರಿಗೆ ಸರಿಯಾದ ವೇದಿಕೆ ಕಲ್ಪಿಸಿಕೊಟ್ಟಿದೆ. ಪಾದಯಾತ್ರೆಯ ಹಿಂದೆ ದೊಡ್ಡ ಶಕ್ತಿ ಇದೆ. ಎಲ್ಲರ ಸಹಭಾಗಿತ್ವ, ಮುಂದಾಳತ್ವದಲ್ಲಿ ಯಾವುದೇ ಕೊರತೆ ಇಲ್ಲದಂತೆ ಪಾದಯಾತ್ರೆ ಯಶಸ್ವಿಯಾಗಿ ನಡೆಯುತ್ತಾ ಬಂದಿದೆ. ಪಾದಯಾತ್ರೆಯಿಂದ ತೃಪ್ತಿ, ಶಕ್ತಿ , ಸ್ಪೂರ್ತಿ ಸಿಗುತ್ತದೆ ಎಂದು ಅವರು ಅಭಿಪ್ರಾಯಿಸಿದರು. ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಉಜಿರೆ ಶ್ರೀ ಜನಾರ್ದನ ದೇವಸ್ಥಾನದ ಅನುವಂಶಿಕ ಆಡಳಿತ ಮತ್ತು ಶರತ್‌ಕೃಷ್ಣ ಪಡುವೆಟ್ಣಾಯ ಮಾತನಾಡಿ; ಕೀರ್ತಿ ಶೇಷರಾದ ವಿಜಯ ರಾಘವ ಪಡುವೆಟ್ಣಾಯ ಹಾಗೂ ಯಶೋವರ್ಮ ಇವರಿಬ್ಬರು ಹಾಕಿಕೊಟ್ಟ ಪಾದಯಾತ್ರೆಯ ವೇದಿಕೆ ಬೆರಳೆಣಿಕೆ ಸಂಖ್ಯೆಯ ಅಭಿಮಾನಿಗಳಿಂದ ಆರಂಭವಾಗಿದ್ದು, ಇಂದು ನಾಡಿನಲ್ಲಿ ದೊಡ್ಡಮಟ್ಟದಲ್ಲಿ ಸಾಂಸ್ಕೃತಿಕ, ಧಾರ್ಮಿಕ ಪರಂಪರೆಯನ್ನು ಹುಟ್ಟು ಹಾಕಿದೆ. ನಶಿಸಿ ಹೋಗುತ್ತಿದ್ದ ಸಾತ್ವಿಕ ಶಕ್ತಿಗಳನ್ನು ಎತ್ತಿ ಹಿಡಿದಿದೆ ಎಂದರು. ಪಾದಯಾತ್ರೆಯ ಮಾರ್ಗದರ್ಶಕ ಪೂರಣ್ ವರ್ಮ ಮಾತನಾಡಿ; ಭಕ್ತಿ , ಶ್ರದ್ಧೆ, ಗೌರವ, ಪ್ರೀತಿಯ ಹೆಜ್ಜೆಯೊಂದಿಗೆ ಆರಂಭವಾದ ಪಾದಯಾತ್ರೆ ಯಶಸ್ವಿಯಾಗಿ ನಡೆದಿದೆ. ಪಾದಯಾತ್ರೆಯಿಂದ ಶ್ರೀಕ್ಷೇತ್ರಕ್ಕೆ ಭಕ್ತರು ಇನ್ನಷ್ಟು ಹತ್ತಿರವಾಗಿದ್ದಾರೆ. ಈ ಬಾರಿಯ ಪಾದಯಾತ್ರೆಗೆ ಬಿಳಿಯ ವಸ್ತ್ರ ಧರಿಸಿ ಬಂದರೆ ಉತ್ತಮ. ಪಾದಯಾತ್ರೆಯು ದೇವರ ನಾಮಸ್ಮರಣೆಯೊಂದಿಗೆ ನಿಧಾನವಾಗಿ ಸಾಗಬೇಕು. ಈ ಸಂದರ್ಭ ಅಲ್ಲಲ್ಲಿ ನೀರು ಮತ್ತು ಬೆಲ್ಲದ ವ್ಯವಸ್ಥೆ ಇರಲಿದೆ ಎಂದು ಹೇಳಿದರು.ಯೋಜನೆಯ ಪ್ರಾದೇಶಿಕ ನಿರ್ದೇಶಕ ದುಗ್ಗೇಗೌಡ ಮಾತನಾಡಿ ಪೂರಕ ಮಾಹಿತಿ ನೀಡಿದರು.ಬೆಳ್ತಂಗಡಿ ತಾಲೂಕು ಜನಜಾಗೃತಿ ವೇದಿಕೆ ಅಧ್ಯಕ್ಷ ಕಾಸಿಂ ಮಲ್ಲಿಗೆ ಮನೆ, ತಾಲೂಕು ಒಕ್ಕೂಟದ ಅಧ್ಯಕ್ಷ ಸೀತಾರಾಮ್ ಆರ್. ಬೆಳ್ತಂಗಡಿ, ಉಜಿರೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನ ಪ್ರಿನ್ಸಿಪಾಲ್ ಡಾ. ಬಿ.ಎ. ಕುಮಾರ್ ಹೆಗ್ಡೆ ಮತ್ತಿತರರು ಉಪಸ್ಥಿತರಿದ್ದರು. ಯೋಜನೆಯ ಕೃಷಿ ನಿರ್ದೇಶಕ ರಾಮ್ ಕುಮಾರ್ ಕಾರ್ಯಕ್ರಮ ನಿರೂಪಿಸಿದರು. ಜಿಲ್ಲಾ ನಿರ್ದೇಶಕ ಮಹಾಬಲ ಕುಲಾಲ್ ಸ್ವಾಗತಿಸಿದರು. ಯೋಜನಾಧಿಕಾರಿ ಸುರೇಂದ್ರ ವಂದಿಸಿದರು. ಕಳೆದ ವರ್ಷದ ಪಾದಯಾತ್ರೆ ಆಯ-ವ್ಯಯ ಮಂಡಿಸಲಾಯಿತು. ಹಾಗೂ ಈ ಬಾರಿಯ ಪಾದಯಾತ್ರೆಯ ಆಹ್ವಾನ ಪತ್ರಿಕೆ ಬಿಡುಗಡೆಗೊಳಿಸಲಾಯಿತು. ಈ ಬಾರಿಯ ಶ್ರೀ ಕ್ಷೇತ್ರ ಧರ್ಮಸ್ಥಳ ಲಕ್ಷದೀಪೋತ್ಸವದ ಪಾದಯಾತ್ರೆ ನವೆಂಬರ್ 26ರಂದು ಮಧ್ಯಾಹ್ನ 3 ಗಂಟೆಗೆ ಉಜಿರೆ ಶ್ರೀ ಜನಾರ್ದನ ಸ್ವಾಮಿ ದೇವಸ್ಥಾನದಿಂದ ಶ್ರೀ ಕ್ಷೇತ್ರ ಧರ್ಮಸ್ಥಳದವರೆಗೆ ನಡೆಯಲಿದೆ. ಇದು 12ನೇ ವರ್ಷದ ಪಾದಯಾತ್ರೆಯಾಗಿದ್ದು ಇದರಲ್ಲಿ ಗಣ್ಯರ ಸಹಿತ ಅನೇಕ ಭಜನಾ ತಂಡಗಳು, ಭಕ್ತ ಬಾಂಧವರು ಭಾಗವಹಿಸಲಿದ್ದಾರೆ. ಶಿಸ್ತು ಹಾಗೂ ಸ್ವಚ್ಛತೆಗೆ ಆದ್ಯತೆ ನೀಡುವ ಈ ಪಾದಯಾತ್ರೆ ಲಕ್ಷದೀಪೋತ್ಸವದ ಪ್ರಾರಂಭದ ದಿನ ನಡೆಯುತ್ತಾ ಬಂದಿದೆ.

Latest 5

Related Posts