ಬೆಳ್ತಂಗಡಿ: ಉಜಿರೆಯ ಬೆನಕ ಆಸ್ಪತ್ರೆಯಲ್ಲಿ ಕೈ ಮತ್ತು ಸೂಕ್ಷ್ಮ ಶಸ್ತ್ರಚಿಕಿತ್ಸೆಯಲ್ಲಿ ಫೆಲೋಶಿಪ್ ಪಡೆದಿರುವ ಮೂಳೆ ಶಸ್ತ್ರಚಿಕಿತ್ಸಕ ಡಾ| ರೋಹಿತ್ ಜಿ. ಭಟ್ ಅವರು ಇತ್ತೀಚೆಗೆ ನಡೆದ ಸರಳ ಸಮಾರಂಭದಲ್ಲಿ ಸೇವೆಗೆ ಸೇರ್ಪಡೆಗೊಂಡರು.ಕೈ ಮತ್ತು ಮಣಿಕಟ್ಟಿನ ಮೈಕ್ರೊಸರ್ಜರಿಯಲ್ಲಿ ಹೆಬ್ಬೆರಳು ಅಥವಾ ಬೆರಳು, ರಕ್ತನಾಳದ ತೀವ್ರವಾದ ಸೀಳುವಿಕೆ ಅಥವಾ ಗಂಭೀರ ಸ್ನಾಯುರಜ್ಜು ಅಥವಾ ನರಗಳ ಗಾಯದಂತಹ ಆಘಾತಕಾರಿ ಗಾಯಗಳಿಗೆ ಚಿಕಿತ್ಸೆ ನೀಡಿ ಗುಣಪಡಿಸಲಾಗುವುದು. ತೀವ್ರವಾಗಿ ಗಾಯಗೊಂಡ ಬೆರಳುಗಳು ಮತ್ತು ಮಣಿಕಟ್ಟುಗಳನ್ನು ರಕ್ಷಿಸುವ ಹಾಗೂ ಕೈ ಮತ್ತು ಬೆರಳಿನ ಪುನರ್ನಿರ್ಮಾಣ ಮಾಡುವ ಸೇವೆಯನ್ನು ಬೆನಕ ಆಸ್ಪತ್ರೆಯಲ್ಲಿ ಒದಗಿಸಲಾಗುವುದು ಎಂದು ಬೆನಕ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ| ಗೋಪಾಲಕೃಷ್ಣ ತಿಳಿಸಿದರು. ಡಾ| ಗೋಪಾಲಕೃಷ್ಣ ಅವರು ಡಾ| ರೋಹಿತ್ ಅವರನ್ನು ಸ್ವಾಗತಿಸುತ್ತಾ ಮಾತನಾಡುತ್ತಿದ್ದರು.ಗ್ರಾಮೀಣ ಪ್ರದೇಶದಲ್ಲಿ ಕೃಷಿ ಮತ್ತು ಕಟ್ಟಡ ಕಾರ್ಮಿಕರಲ್ಲಿ ಜರಗುವ ಅಪಘಾತಗಳಲ್ಲಿ ಕೈಬೆರಳುಗಳು ಜಖಂ ಆಗುವದು ಸರ್ವೇಸಾಮಾನ್ಯ. ಅಂತೆಯೇ ರಸ್ತೆ ಅಫಘಾತಗಳಲ್ಲಿಯೂ ಕೂಡಾ ಈ ರೀತಿಯ ಆಘಾತಗಳಾಗುತ್ತವೆ. ಇಂಥ ಸಂದರ್ಭದಲ್ಲಿ ಕೈಬೆರಳುಗಳ ಚಿಕಿತ್ಸೆ, ಮರುಜೋಡಣೆ, ಪುನರ್ನಿರ್ಮಾಣ ಕ್ಲಪ್ತ ಸಮಯದಲ್ಲಿ ಆಗಬೇಕಾಗುತ್ತದೆ. ಆ ಮೂಲಕ ಕೈ ಮತ್ತು ಬೆರಳುಗಳು ಮುಂಚಿನಂತೆಯೇ ಕಾರ್ಯನಿರ್ವಹಿಸಲು ಅನುಕೂಲವಾಗುತ್ತದೆ ಎಂದು ಡಾ| ಗೋಪಾಲಕೃಷ್ಣ ತಿಳಿಸಿದರು.ಉಜಿರೆಯ ಬೆನಕ ಆಸ್ಪತ್ರೆಯ ಡಾ| ಗೋಪಾಲಕೃಷ್ಣ ಹಾಗೂ ಡಾ| ಭಾರತಿ ದಂಪತಿಗಳ ಪುತ್ರ ಡಾ| ರೋಹಿತ್ ಜಿ. ಭಟ್ ಮೈಸೂರು ವೈದ್ಯಕೀಯ ಕಾಲೇಜಿನಲ್ಲಿ ತಮ್ಮ ಎಂಬಿಬಿಎಸ್ ಪದವಿಯನ್ನು ಪಡೆದು ರಾಜಸ್ಥಾನದ ಕೋಟಾದ ಸರಕಾರಿ ವೈದ್ಯಕೀಯ ಕಾಲೇಜಿನಲ್ಲಿ ಆರ್ಥೋಪೆಡಿಕ್ಸ್‌ನಲ್ಲಿ ಎಂಎಸ್ ಪದವಿಯನ್ನು ಚಿನ್ನದ ಪದಕದೊಂದಿಗೆ ಪಡೆದಿರುವ ಪ್ರತಿಭಾನ್ವಿತ.ಡಾ| ರೋಹಿತ್ ಬೆಂಗಳೂರಿನ ಅಪೋಲೋ ಹಾಸ್ಪಿಟಲ್‌ನಲ್ಲಿ ಹೆಸರಾಂತ ಕೈ ಮತ್ತು ಮೈಕ್ರೋಸರ್ಜನ್ ಡಾ| ದರ್ಶನ್ ಕುಮಾರ್ ಜೈನ್ ಅವರ ಮಾರ್ಗದರ್ಶನದಲ್ಲಿ ಇತ್ತೀಚೆಗೆ ಹ್ಯಾಂಡ್ ಮತ್ತು ಮೈಕ್ರೋ ಸರ್ಜರಿಯಲ್ಲಿ ಫೆಲೋಶಿಪ್ ಅನ್ನು ಯಶಸ್ವಿಯಾಗಿ ಪೂರೈಸಿರುತ್ತಾರೆ.ಕೈ ಮತ್ತು ಮೈಕ್ರೊಸರ್ಜರಿಯಲ್ಲಿ ಫೆಲೋಶಿಪ್ ಎನ್ನುವುದು ಕೈ ಮತ್ತು ಕೈಬೆರಳಿನ ತುದಿಗಳ ರೋಗನಿರ್ಣಯ, ಚಿಕಿತ್ಸೆ ಮತ್ತು ಆರೈಕೆಯಲ್ಲಿ ವಿಶೇಷ ತರಬೇತಿಯನ್ನು ಪಡೆಯುವುದಾಗಿರುತ್ತದೆ. ಈ ಅವಧಿಯಲ್ಲಿ ವೈದ್ಯರು ಮೈಕ್ರೋಸರ್ಜರಿ, ನರಗಳ ರಿಪೇರಿ ಮತ್ತು ಕೈ ಪುನರ್ನಿರ್ಮಾಣ ಸೇರಿದಂತೆ ಹಲವಾರು ಶಸ್ತ್ರಚಿಕಿತ್ಸಾ ತಂತ್ರಗಳನ್ನು ಕಲಿಯುತ್ತಾರೆ. ಕೈಯ ಶಸ್ತ್ರಚಿಕಿತ್ಸೆ ನಮ್ಮ ದೇಶದಲ್ಲಿ ಹೊಸ ವಿಶೇಷತೆಯಾಗಿದೆ. ನಾನು ಹುಟ್ಟಿ ಬೆಳೆದ ಪರಿಸರದಲ್ಲಿ ವೈದ್ಯಕೀಯ ಸೇವೆ ಮಾಡುವುದು ನನಗೆ ದೊರೆತ ಭಾಗ್ಯ ಎಂದು ಭಾವಿಸುತ್ತೇನೆ ಎಂದು ಡಾ| ರೋಹಿತ್ ತಮ್ಮ ಮನದಾಳದ ಸಂತಸವನ್ನು ವ್ಯಕ್ತಪಡಿಸಿದರು.ಗ್ರಾಮೀಣ ಪ್ರದೇಶದಲ್ಲಿ ವಿಶೇಷ ಪರಿಣತಿ ಪಡೆದ ವೈದ್ಯರ ಸೇವೆ ಅತೀ ಅಗತ್ಯ. ಡಾ| ರೋಹಿತ್ ಅವರು ಗ್ರಾಮೀಣ ಪ್ರದೇಶದಲ್ಲಿ ಸೇವೆ ನೀಡಲು ನಿರ್ಧರಿಸಿದ್ದು ಬಹಳ ಅಭಿನಂದನೀಯ ಎಂದು ಮೂಳೆ ಶಸ್ತ್ರಚಿಕಿತ್ಸಕ ಡಾ|ಶಶಿಕಾಂತ ಡೋಂಗ್ರೆ ಅವರು ಶ್ಲಾಘಿಸಿದರು. ಬೆನಕ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ| ಗೋಪಾಲಕೃಷ್ಣ ಸ್ವಾಗತಿಸಿ, ಡಾ| ಭಾರತಿ ಅವರು ವಂದಿಸಿದರು. ತುರ್ತು ಚಿಕಿತ್ಸಾ ವೈದ್ಯರಾದ ಡಾ| ಆದಿತ್ಯ ರಾವ್, ಮಕ್ಕಳ ತಜ್ಞ ಡಾ|ಗೋವಿಂದ ಕಿಶೋರ್, ಸ್ತ್ರೀ ರೋಗ ತಜ್ಞೆ ಡಾ| ಅಂಕಿತಾ ಜಿ. ಭಟ್, ಆಸ್ಪತ್ರೆಯ ಮ್ಯಾನೇಜರ್ ದೇವಸ್ಯ, ಸಾರ್ವಜನಿಕ ಸಂಪರ್ಕಾಧಿಕಾರಿ ಎಸ್.ಜಿ. ಭಟ್ ಹಾಗೂ ಸಿಬ್ಬಂಧಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.