ಬೆಳ್ತಂಗಡಿ: ಕೇವಲ ಏಳು ಹಾಸಿಗೆಗಳು ಮತ್ತು ಇಬ್ಬರು ವೈದ್ಯರು ಹಾಗೂ ಇಬ್ಬರು ದಾದಿಯರಿಂದ ಎರಡು ದಶಕಗಳ ಹಿಂದೆ ಪ್ರಾರಂಭವಾದ ಬೆನಕ ಆಸ್ಪತ್ರೆ ಸ್ಥಳಿಯ ಅಗತ್ಯತೆಗಳಿಗೆ ಅನುಗುಣವಾಗಿ ತನ್ನ ಸೇವೆಯನ್ನು ಹಂತ ಹಂತವಾಗಿ ವಿಸ್ತರಿಸುತ್ತಾ ಇದೀಗ 130 ಹಾಸಿಗೆಗಳ ಮಲ್ಟಿ ಸ್ಪೆಷಾಲಿಟಿ ಆರೋಗ್ಯ ಸೇವೆಗಳನ್ನೊಳಗೊಂಡ ಖ್ಯಾತ ಆಸ್ಪತ್ರೆಯಾಗಿ ಬೆಳೆದು ನಿಂತಿದೆ ಎಂದು ಉಜಿರೆ ಬೆನಕ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ| ಗೋಪಾಲಕೃಷ್ಣ ಕೆ. ಹೇಳಿದರು.ಅವರು ಜನವರಿ 16 ರಂದು ಆಸ್ಪತ್ರೆಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಿದ್ದರು. ರಜತ ಸಂಭ್ರಮದಲ್ಲಿರುವ ಆಸ್ಪತ್ರೆಯು ಗುಣಮಟ್ಟದ ಸೇವೆ ನೀಡುತ್ತಿದೆ. ರೋಗಿಗಳ ಸೇವೆಗೆ ಕೇಂದ್ರೀಕೃತವಾಗಿ ಅತ್ಯುತ್ತಮ ದರ್ಜೆಯ ಆರೋಗ್ಯ ಶುಶ್ರೂಷೆಯನ್ನು ಎಲ್ಲರಿಗೂ ಕೈಗೆಟುಕುವ ದರದಲ್ಲಿ ಹಾಗೂ ಸಮುದಾಯದ ಆಶಯಗಳಿಗೆ ಅನುಗುಣವಾಗಿ ಒದಗಿಸುವ ಆಸ್ಪತ್ರೆಯಾಗಿ ಬೆಳೆಯಬೇಕು ಎಂಬ ಸಂಕಲ್ಪ ನಮ್ಮದಾಗಿದ್ದು; ನಮ್ಮ ಪ್ರತಿಯೊಂದು ಹೆಜ್ಜೆಯ ಆಶಯ ಈ ಪ್ರದೇಶದಲ್ಲೆ ಅತ್ಯುತ್ತಮ ಗುಣಮಟ್ಟದ ಆರೋಗ್ಯ ಸೇವೆಯನ್ನು ರೋಗಿಗಳಿಗೆ ಒದಗಿಸುವ ನಿಟ್ಟಿನಲ್ಲಿ ಹಂತ ಹಂತವಾಗಿ ಹೊಸ ಸೇವೆಯನ್ನು ಆರಂಭಿಸುತ್ತಾ ಬಂದಿದ್ದೇವೆ ಎಂದರು. ಬೆನಕ ಆಸ್ಪತ್ರೆಯ ಪ್ರತಿ ಹೆಜ್ಜೆ ಹಾಗೂ ವಿಸ್ತರಣೆಯ ಹಿಂದೆ ಸಮಾಜ ಹಿತದ ಕಾಳಜಿ, ಗುಣಮಟ್ಟದದ ಸೇವೆ ನೀಡುವ ಹಂಬಲವಿದ್ದು; ಈ ನಿಟ್ಟಿನಲ್ಲಿ ಗುಣಮಟ್ಟ ಮೌಲ್ಯಾಂಕನ ಸಂಸ್ಥೆಗಳಿಂದ ಪ್ರಮಾಣೀಕರಿಸಲ್ಪಟ್ಟ ಆಸ್ಪತ್ರೆಯಾಗಿ ಹೊರಹೊಮ್ಮಿದೆ ಎಂದರು.ಜನವರಿ 18ರಂದು ರಜತ ಸಂಭ್ರಮದ ಉದ್ಘಾಟನೆ ನಡೆಯಲಿದ್ದು; ಕಾರ್ಯಕ್ರಮವನ್ನು ವಿಧಾನಸಭೆ ಸಭಾಪತಿ ಯು.ಟಿ. ಖಾದರ್ ನೆರವೇರಿಸಲಿದ್ದಾರೆ. ವಿಸ್ತೃತ ಕಟ್ಟಡದ ಉದ್ಘಾಟನೆಯನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ದಿನೇಶ್ ಗುಂಡೂರಾವ್, ತುರ್ತು ಚಿಕಿತ್ಸಾ ವಿಭಾಗದ ಉದ್ಘಾಟನೆಯನ್ನು ಮಂಗಳೂರು ಲೋಕಸಭಾ ಸದಸ್ಯ ಕ್ಯಾ. ಬ್ರಿಜೇಶ್ ಚೌಟ, ಡೇ-ಕೇರ್ ವಿಭಾಗದ ಉದ್ಘಾಟನೆಯನ್ನು ಬೆಳ್ತಂಗಡಿ ಶಾಸಕ ಹರೀಶ್ ಪೂಂಜ, ಮಕ್ಕಳ ವಾರ್ಡ್ ಉದ್ಘಾಟನೆಯನ್ನು ಅರೆ ವೈದ್ಯಕೀಯ ಮಂಡಳಿ ಅಧ್ಯಕ್ಷ ಡಾ| ಯು.ಟಿ. ಇಫ್ತಿಕರ್ ಅಲಿ ನೆರವೇರಿಸಲಿದ್ದು, ಮುಖ್ಯ ಅತಿಥಿಗಳಾಗಿ ವಿಧಾನ ಪರಿಷತ್ ಸದಸ್ಯ ಕೆ. ಪ್ರತಾಪ್‌ಸಿಂಹ ನಾಯಕ್, ಬೆಸ್ಟ್ ಫೌಂಡೇಶನ್ ಅಧ್ಯಕ್ಷ ರಕ್ಷಿತ್ ಶಿವರಾಂ, ಉಜಿರೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಉಷಾಕಿರಣ್ ಕಾರಂತ, ಉಪಾಧ್ಯಕ್ಷ ರವಿಕುಮಾರ್ ಬರೆಮೇಲು ಭಾಗವಹಿಸಲಿದ್ದಾರೆ. ಸೀತಾರಾಮ ಭಟ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ಕಾರ್ಯಕ್ರಮದ ವಿವರ ನೀಡಿದರು.ಬೆನಕ ಹೆಲ್ತ್ ಕೇರ್ ಸೇವೆ, ಬೆನಕ ಸಭಾಭವನ, ಅತ್ಯಾಧುನಿಕ ಗ್ಯಾಸ್ಟ್ರೋಎಂಡೋಸ್ಕೋಪಿಕ್ ಉಪಕರಣ, ಆಧುನಿಕ ಆಲ್ಟ್ರಾ ಸೌಂಡ್ ಮತ್ತು ಡಿಜಿಟಲ್ ಎಕ್ಸ್ ರೇ, ಸಿ.ಟಿ. ಸ್ಕ್ಯಾನ್, ತುರ್ತು ಚಿಕಿತ್ಸಾ ವಿಭಾಗ, ಅತ್ಯಾಧುನಿಕ ಅಪರೇಷನ್ ಥಿಯೇಟರ್, ತೀವ್ರ ನಿಗಾ ಘಟಕ, ಮೈಕ್ರೋ ಸರ್ಜರಿ ಸೇವೆ, ಕೀ ಹೋಲ್ ಶಸ್ತ್ರಚಿಕಿತ್ಸೆ, ಕಣ್ಣಿನ ಶಸ್ತ್ರಚಿಕಿತ್ಸೆ, ಸಮಕಾಲೀನ ಚಿಕಿತ್ಸೆಯ ಬದ್ದತೆ, ಸ್ಪೆಷಾಲಿಟಿ (ತಜ್ಞ ವೈದ್ಯರ) ಸೇವೆಗಳು, ವಿಮಾ ಸೌಲಭ್ಯ, ಆರೋಗ್ಯ ಶಿಬಿರಗಳು, ಸುಸಜ್ಜಿತ ತುರ್ತು ಚಿಕಿತ್ಸಾ ಘಟಕ, ಮಕ್ಕಳ ಸ್ನೇಹಿ ವಾರ್ಡ್, ವಿಶಾಲವಾದ ಕ್ಯಾಂಟೀನ್, ಮನೋಲ್ಲಾಸ ನೀಡುವ ವಿನ್ಯಾಸವನ್ನು ಹೊಂದಿದೆ ಎಂದು ತಿಳಿಸಿದರು.ಪತ್ರಿಕಾಗೋಷ್ಠಿಯಲ್ಲಿ ಡಾ| ಭಾರತಿ ಜಿ.ಕೆ., ಡಾ| ಆದಿತ್ಯ ರಾವ್, ಡಾ| ಅಂಕಿತಾ ಜಿ. ಭಟ್, ಡಾ| ರೋಹಿತ್ ಜಿ. ಭಟ್ ಉಪಸ್ಥಿತರಿದ್ದರು. ಆಸ್ಪತ್ರೆಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಎಸ್.ಜಿ. ಭಟ್ ಸ್ವಾಗತಿಸಿ ಕೊನೆಯಲ್ಲಿ ವಂದಿಸಿದರು.