ಬೆಳ್ತಂಗಡಿ: ವೇಶ್ಯಾವಟಿಕೆ ಚಟುವಟಿಕೆ ಶಂಕೆ ಮೇರೆಗೆ ಬೆಳ್ತಂಗಡಿ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಸುಬ್ಬಾಪುರ್ ಮಠ್ ನೇತೃತ್ವದಲ್ಲಿ ಬೆಳ್ತಂಗಡಿ ಮತ್ತು ಉಜಿರೆಯಲ್ಲಿರುವ ಲಾಡ್ಜ್ ಗಳ ಮೇಲೆ ಜೂನ್ 14ರ ರಾತ್ರಿ ಪೊಲೀಸ್ ತಂಡ ದಾಳಿ ಮಾಡಿ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಉಜಿರೆಯ ಶ್ರೀ ದುರ್ಗಾ ಲಾಡ್ಜ್‌ನಲ್ಲಿ ವೇಶ್ಯಾವಟಿಕೆ ನಡೆಸಲು ಯುವತಿಯನ್ನು ಕರೆತಂದಿದ್ದು ಬಯಲಾಗಿದೆ.ಉಜಿರೆ ಬಸ್ ನಿಲ್ದಾಣದ ಬಳಿ ಇರುವ ಶ್ರೀ ದುರ್ಗಾ ಲಾಡ್ಜ್ ನಲ್ಲಿ ವೇಶ್ಯಾವಟಿಕೆಗೆ ಕರೆಸಿದ್ದ ಓರ್ವ ಯುವತಿಯನ್ನು ಪೊಲೀಸರು ರಕ್ಷಣೆ ಮಾಡಿದ್ದು; ಲಾಡ್ಜ್‌ನ ಮ್ಯಾನೇಜರ್ ಬೆಳ್ತಂಗಡಿ ತಾಲೂಕಿನ ಸಾವ್ಯ ಗ್ರಾಮದ ಬಾರೆಗುಡ್ಡೆ ಸತೀಶ್ ಪೂಜಾರಿ (49) ಮತ್ತು ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳ ಗ್ರಾಮದ ಕನ್ಯಾಡಿ ನಿವಾಸಿ ಯೋಗಿಶ್ ಆಚಾರ್ಯ (49) ಎಂಬವರನ್ನು ಬೆಳ್ತಂಗಡಿ ಪೊಲೀಸರು ಬಂಧಿಸಿದ್ದಾರೆ. ಈ ಬಗ್ಗೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಲಾಡ್ಜ್ ಮಾಲೀಕ ಉಜಿರೆಯ ರಮೇಶ್ ಶೆಟ್ಟಿ, ಮ್ಯಾನೇಜರ್ ಸತೀಶ್ ಪೂಜಾರಿ, ಸಿಬ್ಬಂದಿ ಯೋಗೀಶ್ ಆಚಾರ್ಯ ವಿರುದ್ಧ ಪ್ರಕರಣ ದಾಖಲಾಗಿದೆ.ಬೆಳ್ತಂಗಡಿ ಪೊಲೀಸರು ಪ್ರತಿ ವಾರ ಲಾಡ್ಜ್‌ಗಳಿಗೆ ತೆರಳಿ ಲಾಡ್ಜ್ ಲೆಡ್ಜರ್ ಪುಸ್ತಕಗಳನ್ನು ಪರಿಶೀಲನೆ ನಡೆಸುತ್ತಿದ್ದರು. ಜಿಲ್ಲೆಗೆ ಹೊಸ ಪೊಲೀಸ್ ವರಿಷ್ಠಾಧಿಕಾರಿ ಬಂದ ಬಳಿಕ ಇತ್ತೀಚೆಗೆ ಎಲ್ಲ ಲಾಡ್ಜ್ ಮಾಲೀಕರನ್ನು ಠಾಣೆಗೆ ಕರೆಸಿದ ಬೆಳ್ತಂಗಡಿ ಪೊಲೀಸ್ ಅಧಿಕಾರಿಗಳು, ಲಾಡ್ಜ್‌ನಲ್ಲಿ ಸಿಸಿ ಕ್ಯಾಮರ, ಲೆಡ್ಜರ್ ಪುಸ್ತಕ, ಲಾಡ್ಜ್‌ಗೆ ಬರುವ ಗ್ರಾಹಕರ ಐಡಿ ಕಾರ್ಡ್ ಸರಿಯಾಗಿ ನೋಡಿಕೊಳ್ಳಲು ವಾರ್ನಿಂಗ್ ನೀಡಿದ್ದರು. ಆದ್ರೆ ಲಾಡ್ಜ್ ಮಾಲೀಕರು ಮಾತ್ರ ಪೊಲೀಸರಿಗೆ ಚಳ್ಳೆ ಹಣ್ಣು ತಿನ್ನಿಸುತ್ತಿದ್ದರು ಎನ್ನಲಾಗಿದೆ.ಬೆಳ್ತಂಗಡಿ ಪೊಲೀಸ್ ಇನ್ಸ್‌ಪೆಕ್ಟರ್ ಸುಬ್ಬಾಪುರ್ ಮಠ, ಸಬ್ ಇನ್ಸ್‌ಪೆಕ್ಟರ್‌ಗಳಾದ ಮುರುಳಿಧರ್ ನಾಯ್ಕ್ ಹಾಗೂ ಯಲ್ಲಪ್ಪ ಮತ್ತು ಸಿಬ್ಬಂದಿಯವರು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.