ಉಜಿರೆ ಎಸ್.ಡಿ.ಎಂ ಅಂಗಳದಲ್ಲಿ ವಿಶ್ವಪರಿಸರ ದಿನಾಚರಣೆ

ಉಜಿರೆ ಎಸ್.ಡಿ.ಎಂ ಅಂಗಳದಲ್ಲಿ ವಿಶ್ವಪರಿಸರ ದಿನಾಚರಣೆ
Facebook
Twitter
LinkedIn
WhatsApp

ಬೆಳ್ತಂಗಡಿ: ನದಿ, ಹಳ್ಳ-ಕೊಳ್ಳ ಮತ್ತು ಹಸಿರಸಿರಿಯೊಂದಿಗಿನ ಪರಿಸರವನ್ನು ಓದಿಕೊಂಡು ಮನನ‌ ಮಾಡಿಕೊಂಡು ಪ್ರಕೃತಿದತ್ತ ಬದುಕಿನ ಮಾದರಿಗಳನ್ನು ಅನುಸರಿಸಲೇಬೇಕಿದೆ ಎಂದು ಖ್ಯಾತ ಪರಿಸರ ಬರಹಗಾರ ಶಿವಾನಂದ ಕಳವೆ ಅಭಿಪ್ರಾಯಪಟ್ಟರು.ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಸಂಸ್ಥೆಯು ಮಂಗಳೂರಿನ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ಬೆಳ್ತಂಗಡಿಯ ಕಾನೂನು ಸೇವಾ ಸಮಿತಿ, ಸಾರ್ವಜನಿಕ ಶಿಕ್ಷಣ ಇಲಾಖೆಯ ಸಹಯೋಗದೊಂದಿಗೆ ವಿಶ್ವ ಪರಿಸರ ದಿನಾಚರಣೆ ಪ್ರಯುಕ್ತ ಜೂನ್ 17ರಂದು ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನ ಇಂದ್ರಪ್ರಸ್ಥ ಸಭಾಂಗಣದಲ್ಲಿ ಏರ್ಪಡಿಸಿದ್ದ ‘ಪ್ಲಾಸ್ಟಿಕ್ ಮುಕ್ತ ಪರಿಸರ’ ಧ್ಯೇಯವಾಕ್ಯದೊಂದಿಗಿನ ಜಾಗೃತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.ಕಳೆದ ಹಲವು ದಶಕಗಳಿಂದ ನಮ್ಮ ಸುತ್ತಮುತ್ತಲಿನ ನದಿ, ಹಳ್ಳಕೊಳ್ಳಗಳು, ಕಾಡನ್ನು ಓದಿಕೊಳ್ಳುವ ಸಂಯಮ ಇಲ್ಲವಾಗಿದೆ. ಇವುಗಳನ್ನು ಓದಿಕೊಳ್ಳುವುದು ಎಂದರೆ ಇಡೀ ಪ್ರಕೃತಿಯ ಅಂತಃಸತ್ವವನ್ನು ಅರ್ಥಮಾಡಿಕೊಳ್ಳುವುದು ಎಂದರ್ಥ. ಈ ಬಗೆಯಲ್ಲಿ ಅರ್ಥಮಾಡಿಕೊಳ್ಳುವ ಹೆಜ್ಜೆಗಳು ಪರಿಸರಸ್ನೇಹಿ ದಾರಿಗಳ ಕಡೆಗೆ ನಮ್ಮನ್ನು ಕೊಂಡೊಯ್ಯುತ್ತವೆ. ಪರಿಸರಪರವಾದ ದಾರಿಗಳ ಹುಡುಕಾಟವು ನಮ್ಮದೇ ಆದ ಪರಂಪರೆಯ ಬೇರುಗಳ ಮಹತ್ವವನ್ನು ತಿಳಿದುಕೊಳ್ಳಲು ಸಹಾಯಕವಾಗುತ್ತದೆ ಎಂದು ಅವರು ಅಭಿಪ್ರಾಯಿಸಿದರು.ವಿಶ್ವದ ಇತರ ಕಡೆಗೆ ಇರುವ ಪರಿಸರದ ಕುರಿತು ತಿಳಿದುಕೊಳ್ಳುವುದಕ್ಕಿಂತ ನಮ್ಮ ಸುತ್ತಮುತ್ತಲಿನ ಪ್ರಕೃತಿ ಪ್ರಪಂಚವನ್ನು ಅರಿತುಕೊಳ್ಳುವುದು ಮುಖ್ಯ. ಈ ತಿಳುವಳಿಕೆಯೊಂದಿಗೇ ಪರಿಸರದ ಉಳಿವಿನ ಹೆಜ್ಜೆಗಳು ಶುರುವಾಗುತ್ತವೆ. ಪ್ರಾಥಮಿಕ ಶಾಲಾ ಹಂತದಲ್ಲಿ ಓದುತ್ತಿರುವ ಮಕ್ಕಳಿಗೆ ನೈಲ್ ನದಿಯ ಬಗ್ಗೆ ಪರಿಚಯವಿರುತ್ತದೆ. ಏಕೆಂದರೆ, ಅದು ಪಠ್ಯದಲ್ಲಿರುತ್ತದೆ. ಆದರೆ, ನಮ್ಮದೇ ನೇತ್ರಾವತಿ, ಶರಾವತಿ, ಸೌಪರ್ಣಿಕ ನದಿಗಳ ಜ್ಞಾನ ಅವರಿಗೆ ಇರುವುದಿಲ್ಲ. ಹೊಸ ತಲೆಮಾರಿಗೆ ನಮ್ಮ ನದಿಗಳು ಮತ್ತು ಪ್ರಾಕೃತಿಕ ಪರಂಪರೆಯ ಬಗ್ಗೆ ತಿಳುವಳಿಕೆ ಮೂಡಿಸುವ ಅಗತ್ಯವಿದೆ ಎಂದು ಪ್ರತಿಪಾದಿಸಿದರು.ಭೂಮಿ ಇದೀಗ ಎಮರ್ಜೆನ್ಸಿ ವಾರ್ಡ್‌ನಲ್ಲಿದ್ದು ನಲುಗುತ್ತಿದೆ. ಮಮಕಾರದ ಆರೈಕೆ ನೀಡುವ ಶುಶ್ರೂಷಕರಾಗಿ ನಾವೆಲ್ಲರೂ ಪರಿವರ್ತನೆಯಾಗಬೇಕಿದೆ. ಎಲ್ಲೆಂದರಲ್ಲಿ ಪ್ಲಾಸ್ಟಿಕ್ ಬೀಸಾಡುವ ಪ್ರವೃತ್ತಿಯನ್ನು ಬಿಡಬೇಕು. ಪ್ಲಾಸ್ಟಿಕ್ ಮುಕ್ತ ಪರಿಸರ ನಿರ್ಮಾಣದ ಮೂಲಕ ಭೂಮಿಯನ್ನು ಮುಂಬರುವ ಕಂಟಕಗಳಿಂದ ವಿಮುಕ್ತಗೊಳಿಸಬೇಕು. ಕಡಿಮೆ ಜನಸಂಖ್ಯೆ ಇದ್ದಾಗ ಭೂಮಿ ನಿರಮ್ಮಳವಾಗಿತ್ತು. ನದಿಯ ನಡಿಗೆ ಸಹಜವಾಗಿತ್ತು. ಮರಗಳು ಸಮೃದ್ಧವಾಗಿದ್ದವು. ಜನಸಂಖ್ಯೆ ಹೆಚ್ಚುತ್ತಾ ಹೋದಂತೆ ಭೂಮಿಯ ಸಂಕಟ ಹೆಚ್ಚುತ್ತಾ ಹೋಯಿತು ಎಂದು ಅವರು ಆತಂಕ ವ್ಯಕ್ತಪಡಿಸಿದರು. ಹಿಂದಿನ ಋಷಿಮುನಿಗಳಿಗೆ ಮರದ ಬುಡದಲ್ಲಿ ಜ್ಞಾನೋದಯವಾಗುತ್ತಿತ್ತು. ಹೊಸ ತಲೆಮಾರಿನ ಯುವಪೀಳಿಗೆ ಪ್ರಕೃತಿ ಪರಂಪರೆಯ ವಿಸ್ತೃತ ಜ್ಞಾನ ಪಡೆಯುವ ಮುನ್ನವೇ ಮರಗಳನ್ನು ಕಡಿಯುವ ವಿಧ್ವಂಸಕ ಪ್ರಯತ್ನಗಳು ವ್ಯಾಪಕವಾಗುತ್ತಿವೆ. ನಮ್ಮ ನಮ್ಮ ಮನೆತನ ಮತ್ತು ವಾಸಸ್ಥಳದ ಸಸ್ಯಪ್ರಬೇಧಗಳನ್ನು ಉಳಿಸುವ ಅಭಿಯಾನ ಆರಂಭವಾಗಬೇಕಿದೆ. ಈ ಅಭಿಯಾನದಿಂದ ಮಾತ್ರ ಸಸ್ಯ ಸಂಕುಲ ಉಳಿಯುತ್ತದೆ. ಜೀವಸಂಕುಲಕ್ಕೆದುರಾಗಬಹುದಾದ ಅಪಾಯಗಳು ತಪ್ಪುತ್ತವೆ ಎಂದರು.ಮಂಗಳೂರಿನ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಪರಿಸರ ಅಧಿಕಾರಿ ಡಾ.ಎಚ್. ಲಕ್ಷ್ಮಿಕಾಂತ ಪರಿಸರ ಜಾಗೃತಿಯ ನುಡಿಗಳನ್ನು ಪ್ರಸ್ತುತಪಡಿಸಿದರು. ಮನುಷ್ಯನನ್ನೂ ಒಳಗೊಂಡು ಸಮಸ್ತ ಜೀವಸಂಕುಲದ ಸುಸ್ಥಿರ ಆರೋಗ್ಯವು ಪರಿಸರದ ಅಸ್ತಿತ್ವವನ್ನೇ ಅವಲಂಬಿಸಿದೆ. ಭೂಮಿಯ ಜೀವಸಂಕುಲದ ಇರುವಿಕೆಗೆ ಮಣ್ಣಿನ ಗುಣದ ವಿಶೇಷತೆ ಕಾರಣ. ಜೀವಂತಿಕೆಯನ್ನು ಚಿಗುರಿಸುವ ಮಣ್ಣಿನ ಗುಣಲಕ್ಷಣವು ಸಸ್ಯಕಾಶಿಯೊಂದಿಗೆ ನಂಟನ್ನು ಹೊಂದಿದೆ. ಈ ಕಾರಣಕ್ಕಾಗಿಯೇ ಸಸ್ಯಸಂಕುಲವನ್ನು ಉಳಿಸಿಕೊಳ್ಳಬೇಕು ಎಂದು ಹೇಳಿದರು.ಅಧ್ಯಕ್ಷತೆ ವಹಿಸಿದ ಉಜಿರೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರತಾಂತ್ರಿಕ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ. ಅಶೋಕಕುಮಾರ್ ಮಾತನಾಡಿ; ಈ ಕಾರ್ಯಕ್ರಮದೊಂದಿಗೆ 250 ಸಸಿ ವಿತರಣೆ ಮಾಡುವ ಮೂಲಕ ಸಸ್ಯಸಂಕುಲದ ಮಹತ್ವವನ್ನು ಪ್ರಚುರಪಡಿಸುವ ಉದ್ದೇಶವಿದೆ. ಶ್ರೀಕ್ಷೇತ್ರ ಧರ್ಮಸ್ಥಳವು ಪರಿಸರಕ್ಕೆ ಸಂಬಂಧಿಸಿದಂತೆ ಅನೇಕ ಉಪಯುಕ್ತ ಯೋಜನೆಗಳನ್ನು ಹಮ್ಮಿಕೊಂಡು ಯಶಸ್ವಿಯಾಗಿ ನಿರ್ವಹಿಸುತ್ತಾ ಬಂದಿದೆ. ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಸಂಸ್ಥೆಯೂ ಈ ನಿಟ್ಟಿನಲ್ಲಿ ಜಾಗೃತಿ ಮೂಡಿಸುತ್ತಿದೆ. ಅಂಗಡಿಗೆ ಹೋಗುವಾಗ ಮನೆಯಿಂದ ಚೀಲ ತೆಗೆದುಕೊಂಡು ಹೋಗುವುದನ್ನು ರೂಢಿಸಿಕೊಳ್ಳುವ ಮೂಲಕ ನಿಜವಾದ ಪರಿಸರ ಕಾಳಜಿಯನ್ನು ತೋರಬಹುದು ಎಂದು ಹೇಳಿದರು.ಬೆಳ್ತಂಗಡಿ ಕ್ಷೇತ್ರ ಶಿಕ್ಷಣಾಧಿಕಾರಿ ವೆಂಕಟೇಶ್ ತುಳಪುಳೆ ಉಪಸ್ಥಿತರಿದ್ದರು. ಉಜಿರೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನ ಪ್ರಾಂಶುಪಾಲರಾದ ಡಾ. ವಿಶ್ವನಾಥ ಪಿ. ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡುತ್ತಾ; ಪ್ಲಾಸ್ಟಿಕ್ ಮುಕ್ತ ಪರಿಸರದ ಧ್ಯೇಯೋದ್ದೇಶದ ಮಹತ್ವ ಬಿಂಬಿಸಿದರು. ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನ ಆಡಳಿತಾಂಗ ಕುಲಸಚಿವ ಡಾ. ಶ್ರೀಧರ ಭಟ್ ಕಾರ್ಯಕ್ರಮ ನಿರೂಪಿಸಿದರು. ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿಪೂರ್ವ ಮಹಾವಿದ್ಯಾಲಯದ ಪ್ರಾಂಶುಪಾಲ ಪ್ರಮೋದ ಕುಮಾರ್ ವಂದಿಸಿದರು. ಈ ಕಾರ್ಯಕ್ರಮಕ್ಕೂ ಮುಂಚೆ ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಸ್ನಾತಕೋತ್ತರ ಕೇಂದ್ರದಿಂದ ಉಜಿರೆ ವೃತ್ತದ ಮೂಲಕ ಹಾದು ಇಂದ್ರಪ್ರಸ್ಥ ಸಭಾಂಗಣದವರೆಗೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಸಂಸ್ಥೆಗಳ ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳು, ಅಧ್ಯಾಪಕರು, ಅಧ್ಯಾಪಕೇತರ ಸಿಬ್ಬಂದಿಯ ಬೃಹತ್ ಸಮೂಹವು ಪರಿಸರ ಜಾಥಾ ನಡೆಸಿತು. ಬೆಳ್ತಂಗಡಿ ವಕೀಲರ ಸಂಘದ ಅಧ್ಯಕ್ಷರಾದ ವಸಂತ ಮರಕಡ ಅವರು ಪರಿಸರ ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿದರು. ಕಾರ್ಯಕ್ರಮದ ನಂತರ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಲಾಕೇಂದ್ರದ ವಿದ್ಯಾರ್ಥಿಗಳು ಪರಿಸರದ ಕುರಿತು ಜಾಗೃತಿ ಮೂಡಿಸುವ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು. ವಿದ್ಯಾರ್ಥಿ, ಅಧ್ಯಾಪಕ, ಅಧ್ಯಾಪಕೇತರ ಸಿಬ್ಬಂದಿಗೆ 250 ಸಸಿಗಳನ್ನು ವಿತರಿಸಲಾಯಿತು.

Latest 5

Related Posts