ಬೆಳ್ತಂಗಡಿ: ಶ್ರೀ ಕ್ಷೇತ್ರ ಗೆಜ್ಜೆಗಿರಿಯ ದೇಯಿ ಬೈದ್ಯೆತಿ ಕೋಟಿ ಚೆನ್ನಯ ಮೂಲಸ್ಥಾನ ಅಭಿವೃದ್ಧಿ ಚಾರಿಟೇಬಲ್ ಟ್ರಸ್ಟ್ನ ನೂತನ ಅಧ್ಯಕ್ಷರಾಗಿ ಬಿರ್ವ ಸೆಂಟರ್ ಇದರ ಮಾಲಕರಾದ ಕೆ. ಸಂಜೀವ ಪೂಜಾರಿ ಇವರನ್ನು ಕಂಕನಾಡಿ ಬ್ರಹ್ಮ ಬೈದರ್ಕಳ ಗರಡಿಯ ಸಭಾಂಗಣದಲ್ಲಿ ಜರಗಿದ ಸಭೆಯಲ್ಲಿ ಸರ್ವಾನುಮತದಿಂದ ಆರಿಸಲಾಯಿತು.ಸಭೆಯ ಅಧ್ಯಕ್ಷತೆಯನ್ನು ಟ್ರಸ್ಟ್ನ ನಿಕಟ ಪೂರ್ವ ಅಧ್ಯಕ್ಷರಾದ ರಾಜಶೇಖರ ಕೋಟ್ಯಾನ್ ವಹಿಸಿದ್ದರು. ಸಭೆಯಲ್ಲಿ ಶ್ರೀ ಕ್ಷೇತ್ರ ಗೆಜ್ಜೆಗಿರಿಯ ಅಭಿವೃದ್ಧಿಗಾಗಿ ಖರೀದಿಸಿದ ಜಾಗದಲ್ಲಿ ಬಿಲ್ಲವ ಸಮಾಜದ ಅಭಿವೃದ್ಧಿಗೆ ಪೂರಕವಾಗಿ ವಿವಿಧ ಅಭಿವೃದ್ಧಿ ಚಟುವಟಿಕೆಗಳನ್ನು ಹಮ್ಮಿಕೊಂಡು ಶ್ರೀ ಕ್ಷೇತ್ರಕ್ಕೆ ಆಗಮಿಸುವ ಭಕ್ತಾದಿಗಳಿಗೆ ಮೂಲ ಸೌಕರ್ಯಗಳನ್ನು ಅಭಿವೃದ್ಧಿ ಪಡಿಸಲು ನಿರ್ಣಯಿಸಲಾಯಿತು.ಸಭೆಯಲ್ಲಿ ಟ್ರಸ್ಟಿಗಳಾದ ಚಿತ್ತರಂಜನ್ ಕಂಕನಾಡಿ, ಪೀತಾಂಬರ ಹೆರಾಜೆ, ಜಯಂತ್ ನಡುಬೈಲ್, ರವಿಪೂಜಾರಿ ಚಿಲಿಂಬಿ, ಉಲ್ಲಾಸ್ ಕೋಟ್ಯಾನ್, ದೀಪಕ್ ಕೋಟ್ಯಾನ್, ಶೈಲೇಂದ್ರ ವೈ. ಸುವರ್ಣ, ಕ್ಷೇತ್ರಾಡಳಿತ ಸಮಿತಿಯ ಪ್ರಮುಖರಾದ ಡಾ| ರಾಜಾರಾಮ್, ಪ್ರಮಲ್ ಕುಮಾರ್, ಜಯವಿಕ್ರಂ, ರಾಜೇಂದ್ರ ಚಿಲಿಂಬಿ, ಹರೀಶ್ ಕೆ. ಪೂಜಾರಿ, ಸಂತೋಷ್ ಕುಮಾರ್, ಜಯರಾಮ ಬಂಗೇರ, ಉಮೇಶ್ ಬಂಗೇರ, ರಾಘವೇಂದ್ರ ಮತ್ತಿತರರು ಉಪಸ್ಥಿತರಿದ್ದರು.