Lಬೆಳ್ತಂಗಡಿ: ಸಂಘದ ಶಿಸ್ತು ಹಾಗೂ ಬದ್ಧತೆ ಅಳವಡಿಸಿಕೊಳ್ಳದ ಯಾವುದೇ ವ್ಯಕ್ತಿ ಸಂಘದ ಸ್ವಯಂಸೇವಕನೇ ಅಲ್ಲ. ಅಂತಹ ವ್ಯಕ್ತಿಗಳು ತಮ್ಮ ಸ್ವಾರ್ಥಕ್ಕೆ ರಾಷ್ಟ್ರೀಯ ಸ್ವಯಂಸೇವಕ ಸಂಘವನ್ನು ಮತ್ತು ಸಂಘದ ಪ್ರಮುಖರನ್ನು ಸಾರ್ವಜನಿಕವಾಗಿ ನಿಂದಿಸುತ್ತಿದ್ದಾರೆ ಎಂದು ಬೆಳ್ತಂಗಡಿಯ ಶಾಸಕ ಹರೀಶ್ ಪೂಂಜ ಟೀಕಿಸಿದರು.ಅವರು ಆಗಸ್ಟ್ 17ರಂದು ಗುರುವಾಯನಕೆರೆಯ ನವಶಕ್ತಿ ಸಭಾಂಗಣದಲ್ಲಿ ಕರೆಯಲಾಗಿದ್ದ ತುರ್ತು ಪತ್ರಿಕಾಗೋಷ್ಠಿಯಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಮುಖ ಹಾಗೂ ಬಿಜೆಪಿಯ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಬಗ್ಗೆ ತೀರಾ ಅವಹೇಳನಕಾರಿಯಾಗಿ ಮಾತನಾಡಿದ ಹಿಂದು ಸಂಘಟನೆಯ ಮುಖವಾಡದ ಎಡಪಂಥೀಯ ನಗರ ನಕ್ಸಲರ ಮನೋಸ್ಥಿತಿಯನ್ನು ಖಂಡಿಸಿ ಮಾತನಾಡುತ್ತಿದ್ದರು. ಧರ್ಮಸ್ಥಳದ ಸೌಜನ್ಯಾ ಪ್ರಕರಣದ ಮರುತನಿಖೆಯನ್ನು ಮಾಡಿ ನ್ಯಾಯ ಕೊಡಿಸಬೇಕೆಂದು ನಾವು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಬಿಜೆಪಿ ಶಾಸಕರು ಮತ್ತು ಸಂಸದರು ಈ ಹಿಂದೆಯೂ ಸರಕಾರವನ್ನು ಒತ್ತಾಯಿಸುತ್ತಾ ಬಂದಿದ್ದೇವೆ. ನಮ್ಮ ನಿಲುವು ಇಂದಿಗೂ ಅದೇ; ಸೌಜನ್ಯಾ ಪ್ರಕರಣದ ಮರುತನಿಖೆಯಾಗಿ ಆರೋಪಿಗೆ ಶಿಕ್ಷೆಯಾಗಲೇ ಬೇಕು. ಆದರೆ ಇದನ್ನೇ ನೆಪವಾಗಿಸಿ ಹಿಂದುಗಳ ಶ್ರದ್ಧಾಕೇಂದ್ರಗಳ ಮೇಲೆ ಮತ್ತು ಧಾರ್ಮಿಕ ಭಾವನೆಗಳ ಬಗ್ಗೆ ಅವಹೇಳನಕಾರಿಯಾಗಿ ಮನಬಂದಂತೆ ಮಾತನಾಡಿದರೆ ಅದನ್ನು ಸಹಿಸಿ ಸುಮ್ಮನಿರಲು ಸಾಧ್ಯವಿಲ್ಲ ಎಂದು ಎಚ್ಚರಿಸಿದರು.ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಮುಖರಾದ ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್‌ರ ಬಗ್ಗೆ ತೀರಾ ಕೀಳುಮಟ್ಟದ ಭಾಷೆ ಪ್ರಯೋಗಿಸಿ ಅವಮಾನಿಸಿದ್ದು ಇಡೀ ರಾಷ್ಟ್ರೀಯ ಸ್ವಯಂಸೇವಕ ಸಂಘಕ್ಕೆ ಮಾಡಿದ ಅವಮಾನ. ಹಿಂದುಗಳ ಮಧ್ಯೆ ಕಂದಕ ಸೃಷ್ಟಿಸಿ ಹಿಂದು ಧಾರ್ಮಿಕ ಶ್ರದ್ಧಾಕೇಂದ್ರಗಳನ್ನು ಅವಹೇಳನ ಮಾಡುವ ಮೂಲಕ ಹಿಂದುಗಳ ಧಾರ್ಮಿಕ ಭಾವನೆಗಳಿಗೆ ಘಾಸಿ ಉಂಟು ಮಾಡುವ ಈ ವಿಕೃತ ಮನೋಭಾವದ ವ್ಯಕ್ತಿಗಳ ಕುಕೃತ್ಯವನ್ನು ಶಾಸಕನಾಗಿ ಮಾತ್ರವಲ್ಲ; ನಾನೊಬ್ಬ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸ್ವಯಂಸೇವಕನಾಗಿ ಉಗ್ರವಾಗಿ ಖಂಡಿಸುತ್ತೇನೆ ಎಂದು ಶಾಸಕ ಹರೀಶ್ ಪೂಂಜ ಆಕ್ರೋಶ ಹೊರಹಾಕಿದರು.ಧರ್ಮಸ್ಥಳದ ಪ್ರಕರಣವನ್ನು ಎಸ್‌ಐಟಿ ತನಿಖೆ ಮಾಡಿಸುವುದನ್ನು ನಾವು ಸ್ವಾಗತಿಸುತ್ತೇವೆ. ಆದರೆ ಇದನ್ನೇ ಗುರಾಣಿಯಾಗಿಸಿ ಯೂಟ್ಯೂಬ್ ಸಹಿತ ಸಾಮಾಜಿಕ ಜಾಲತಾಣಗಳಲ್ಲಿ ಧರ್ಮಸ್ಥಳ ಕ್ಷೇತ್ರದ ಬಗ್ಗೆ ಅಲ್ಲಿನ ಧರ್ಮಾಧಿಕಾರಿಗಳ ಬಗ್ಗೆ ಅಸಂವಿಧಾಮಿಕ ಪದಬಳಸಿ ಅವಹೇಳನಕಾರಿಯಾಗಿ ಹಿಂದು ಸಮಾಜದ ತೇಜೋವಧೆ ಮಾಡುತ್ತಿರುವ ಜಿಹಾದಿ ಮನೋಸ್ಥಿತಿಯ ನಗರ ನಕ್ಸಲರ ಮೇಲೆ ಸರಕಾರ ಸುಮಟೋ ಪ್ರಕರಣ ದಾಖಲಿಸುವ ಮೂಲಕ ಸಮಾಜದ ಸ್ವಾಸ್ಥ್ಯ ಕಾಪಾಡಬೇಕು ಎಂದು ಪೊಲೀಸ್ ಇಲಾಖೆಯನ್ನು ಮತ್ತು ಸರಕಾರವನ್ನು ಶಾಸಕ ಹರೀಶ್ ಪೂಂಜ ಒತ್ತಾಯಿಸಿದರು.ಪತ್ರಿಕಾಗೋಷ್ಠಿಯಲ್ಲಿ ಬೆಳ್ತಂಗಡಿ ಮಂಡಲ ಬಿಜೆಪಿ ಅಧ್ಯಕ್ಷ ಶ್ರೀನಿವಾಸ ರಾವ್, ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಜಯಂತ್ ಕೋಟ್ಯಾನ್ ಉಪಸ್ಥಿತರಿದ್ದರು.