ಬೆಳ್ತಂಗಡಿ: ಗುರುವಾಯನಕೆರೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ 2024-25 ನೇ ಸಾಲಿನ ಮಹಾಸಭೆಯು ಸೆಪ್ಟೆಂಬರ್ 12ರಂದು ಸಂಘದ ಜೇಷ್ಠ ಸಭಾಭವನದಲ್ಲಿ ಸಂಘದ ಅಧ್ಯಕ್ಷ ಮುಗುಳಿ ನಾರಾಯಣ ರಾವ್‌ರ ಅಧ್ಯಕ್ಷತೆಯಲ್ಲಿ ಜರುಗಿತು. ಸಹಕಾರಿ ಸಂಘವು ಪ್ರಾರಂಭಗೊಂಡು 100ವರ್ಷ ಪೂರೈಸಿದ ಹಿನ್ನಲೆ ಶತಮಾನೋತ್ಸವದ ಕಾರ್ಯಕ್ರಮಕ್ಕೆ ಸಂಘದ ಅಧ್ಯಕ್ಷ ನಾರಾಯಣ ರಾವ್ ಎಂ. ಅವರು ದೀಪ ಬೆಳಗಿಸಿ ಉದ್ಘಾಟಿಸಿ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು; ಸಂಘವು 2024-25ರ ಸಾಲಿನಲ್ಲಿ ಒಟ್ಟು 2,602 ಸದಸ್ಯರನ್ನು ಹೊಂದಿದ್ದು ರೂಪಾಯಿ 2,39,34,710/- ಪಾಲು ಬಂಡವಾಳ ಹೊಂದಿದೆ. ಒಟ್ಟು ರೂಪಾಯಿ 31,79,31,476 ಠೇವಣಿ ಸಂಗ್ರಹವಾಗಿರುತ್ತದೆ.ರೂಪಾಯಿ 16,36,91,502ಕೋಟಿ ಸಾಲ ವಿತರಿಸಿ, ರೂಪಾಯಿ 144ಕೋಟಿ ವ್ಯವಹಾರ ನಡೆಸಿ ರೂಪಾಯಿ 59,99,798ಲಕ್ಷ ನಿವ್ವಳ ಲಾಭ ಗಳಿಸಿದ್ದು, ಸದಸ್ಯರಿಗೆ 11%: ಡಿವಿಡೆಂಡ್ ನೀಡುವುದಾಗಿ ಘೋಷಿಸಿದರು. ಸಂಘವು ಶತಮಾನೋತ್ಸವದ ಹೊಸ್ತಿಲಲ್ಲಿ ಇರುವುದರಿಂದ ಸಂಘದ ಬೆಳವಣಿಗೆಗೆ ಸಹಕಾರ ನೀಡಿದ ಹಿರಿಯ ಸದಸ್ಯರನ್ನು ಸಮ್ಮಾನಿಸಲಾಯಿತು. ಕಳೆದ ಶೈಕ್ಷಣಿಕ ಸಾಲಿನಲ್ಲಿ 75%ಕಿಂತ ಹೆಚ್ಚು ಅಂಕ ಪಡೆದ ಎಸ್.ಎಸ್.ಎಲ್.ಸಿ., ಪಿ.ಯು.ಸಿ, ಡಿಗ್ರಿ, ವೃತ್ತಿಪರ ಕೊರ್ಸ್ ವಿದ್ಯಾರ್ಜನೆಗೈಯುತ್ತಿರುವ ಸಂಘದ ಸದಸ್ಯರ ಮಕ್ಕಳಿಗೆ ಪ್ರೋತ್ಸಾಹ ಧನ ನೀಡಲಾಯಿತು.ಮುಖ್ಯ ಕಾರ್ಯನಿರ್ವಹಣಾಧಿಕಾರಿ ರವಿಕಲಾ ಎನ್. ವಾರ್ಷಿಕ ವರದಿ ಮಂಡಿಸಿದರು. ಸಂಘದ ಉಪಾಧ್ಯಕ್ಷ ವಡಿವೇಲು ನಿರ್ದೇಶಕರಾದ ಭಗೀರಥ ಜಿ., ಸುಜಿತಾ ವಿ. ಬಂಗೇರ, ಸಚಿನ್ ಕುಮಾರ್ ನೂಜೋಡಿ, ಅನಂತರಾಜ್ ಜೈನ್, ನಾರಾಯಣ ಪೂಜಾರಿ, ಪುರಂದರ ಶೆಟ್ಟಿ, ಅರುಣ್ ಕುಮಾರ್, ಜಯಂತಿ, ಮೋಹನ್ ನಾಯ್ಕ, ಶಶಿರಾಜ್ ಶೆಟ್ಟಿ, ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಪ್ರತಿನಿಧಿ ಸಿರಾಜುದ್ದೀನ್ ಉಪಸ್ಥಿತರಿದ್ದರು. ಸಂಘದ ಸಿಬ್ಬಂದಿಗಳಾದ ಮಮತಾ, ಚೇತನ ಕೆ., ಭಾಗ್ಯಶ್ರೀ ಡಿ., ಮಧುರಾಜ್ ಎಸ್. ವಿ., ಅಕ್ಷತ್, ಯಶೋಧ ಸಹಕರಿಸಿದರು.







