ಬೆಳ್ತಂಗಡಿ: ಜೀವನದ ಬಂಡಿ ಸಾಗುವಾಗ ಮಹಿಳೆ ಬಂಡಿಯ ಭಾರವನ್ನು ಹೊರುವ ಚಕ್ರವಾಗಿ ಕಾರ್ಯ ನಿರ್ವಹಿಸುತ್ತಾಳೆ. ಆದ್ದರಿಂದ ತನ್ನ ಆರೋಗ್ಯದ ಕಡೆ ಹೆಚ್ಚಿನ ಗಮನ ಹರಿಸಿ ದೈಹಿಕವಾಗಿ, ಮಾನಸಿಕವಾಗಿ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು ಎಂದು ಅಳದಂಗಡಿಯ ವೈದ್ಯೆ ಡಾ| ಸುಷ್ಮಾ ಡೋಂಗ್ರೆ ಅವರು ಹೇಳಿದರು.ಅವರು ಮಾರ್ಚ್ 15ರಂದು ಬೆಳ್ತಂಗಡಿಯ ಮಹಿಳಾ ವೃಂದದಲ್ಲಿ ನಡೆದ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು. ಏನಾದರೂ ಆರೋಗ್ಯದಲ್ಲಿ ಸಮಸ್ಯೆ ಆದರೆ ಗೂಗಲ್ ನೋಡಿ ನಮಗೇನೋ ಆಗಿದೆ ಎಂದು ಗಾಬರಿ ಆಗಬೇಡಿ. ವೈದ್ಯರನ್ನು ಭೇಟಿಯಾಗಿ. 10-12 ವರ್ಷದ ಮಕ್ಕಳಿಗೆ ಕ್ಯಾನ್ಸರ್ ನಿರೋಧಕ ಚುಚ್ಚುಮದ್ದನ್ನು ಕೊಡಿಸಿ ಎಂದು ಸಲಹೆ ನೀಡಿದರು.ನ್ಯಾಚುರೋಪತಿ ವೈದ್ಯೆ ಡಾ| ಭಾಷಿಣಿ ಅವರು ಮಹಿಳೆಯರ ದಿನಚರಿ, ಆರೋಗ್ಯ, ವ್ಯಾಯಾಮದ ಬಗ್ಗೆ ತಿಳಿಸಿದರು.ಕಾರ್ಯಕ್ರಮದಲ್ಲಿ ವಯೋ ನಿವೃತ್ತಿ ಹೊಂದಿದ ಬೆಳ್ತಂಗಡಿ ಕ್ಷೇತ್ರ ಶಿಕ್ಷಣಾಧಿಕಾರಿ ತಾರಕೇಸರಿಯವರನ್ನು ಸಮ್ಮಾನಿಸಲಾಯಿತು. ಮಹಿಳಾ ವೃಂದದ ಹಿರಿಯ ಸದಸ್ಯರಾದ ಗೌರಿ ಪಣಿಕ್ಕರ್, ಮೇದಿನಿ ಡಿ. ಗೌಡ, ಸೆಲಿನಾ, ಸಂಧ್ಯಾ ಪಾಲಂದೆ, ಸುಜಯಾ ಜೈನ್, ಸುಮತಿ ಪ್ರಮೋದ್, ಸುಶೀಲಾ ಹೆಗ್ಡೆ ಯವರನ್ನು ಗೌರವಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷೆ ರಜನಿ ಎ. ವಹಿಸಿದ್ದರು. ಕಾರ್ಯದರ್ಶಿ ಲಾವಣ್ಯ ಹೊಳ್ಳ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಮುಖ್ಯ ಅತಿಥಿಗಳಾದ ಡಾ| ಸುಷ್ಮಾ ಡೋಂಗ್ರೆಯವರನ್ನು ಸಂಧ್ಯಾ ಪಾಳಂದೆ ಹಾಗೂ ಡಾ| ಭಾಷಿಣಿ ಯವರನ್ನು ಸುಮತಿ ಪ್ರಮೋದ್ ಪರಿಚಯಿಸಿದರು. ಆಶಾ ಸತೀಶ್ ಸ್ವಾಗತಿಸಿದರು. ಸಂಧ್ಯಾ ಪಾಲಂದೆ ಪ್ರಾರ್ಥಿಸಿದರು. ದಿವ್ಯಾ ಡೋಂಗ್ರೆ ನಿರೂಪಿಸಿದರು. ಹೇಮಾವತಿ ಕೆ. ನಿವೃತ್ತ ಕ್ಷೇತ್ರ ಶಿಕ್ಷಣಾಧಿಕಾರಿ ತಾರಕೇಸರಿಯರ ಬಗ್ಗೆ ಅಭಿನಂದನಾ ನುಡಿಗಳನ್ನಾಡಿದರು. ಉಮಾ ಆರ್. ರಾವ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಗೌರವಿಸಿದ ಹಿರಿಯ ಸದಸ್ಯೆಯರ ಪರಿಚಯವನ್ನು ನೇತ್ರಾ ಅಶೋಕ್ ಹಾಗೂ ವೀಣಾ ವಿ. ಕುಮಾರ್ ಮಾಡಿದರು. ಮಹಿಳಾ ದಿನಾಚರಣೆ ಪ್ರಯುಕ್ತ ನಡೆಸಿದ ಸ್ಪರ್ಧೆಗಳ ಬಹುಮಾನಿತರ ಪಟ್ಟಿಯನ್ನು ವೀಣಾ ಮಯ್ಯ ವಾಚಿಸಿದರು. ಸುನೀತಾ ಬಿಜು ವಂದಿಸಿದರು.







