ಬೆಳ್ತಂಗಡಿ: ಸಾಧನೆಯ ಮಹಾಪೂರ ಹೊತ್ತುಕೊಂಡು ‘ನಿಮ್ಮ ಸ್ಫೂರ್ತಿ ನಮ್ಮ ಉತ್ಕೃಷ್ಟ ಸೇವೆ’ ಎಂಬ ಧ್ಯೇಯವಾಕ್ಯದೊಂದಿಗೆ ನಮ್ಮ ಸಹಕಾರ ಸಂಘವು ಅದ್ವಿತೀಯ ಸಾಧನೆ ತೋರಿದೆ. ಸಂಸ್ಥೆಯ ಬೆನ್ನೆಲುಬಾದ ಸದಸ್ಯ ಮಿತ್ರರ ಸಹಕಾರ ಮತ್ತು ಗ್ರಾಹಕ ಸ್ನೇಹಿ ವ್ಯವಹಾರ ನೀಡಿದ್ದರಿಂದ ಸಂಸ್ಥೆಯ ಪ್ರಗತಿಯಲ್ಲಿ ಮಹತ್ತರ ಏಳಿಗೆ ಕಾಣಲು ಸಾಧ್ಯವಾಗಿದೆ ಎಂದು ಶ್ರೀ ಗುರುದೇವ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷ ಎನ್. ಪದ್ಮನಾಭ ಮಾಣಿಂಜ ಹೇಳಿದರು.ಬೆಳ್ತಂಗಡಿ ಶ್ರೀ ನಾರಾಯಣಗುರು ವಾಣಿಜ್ಯ ಸಂಕೀರ್ಣದಲ್ಲಿ ಅಕ್ಟೋಬರ್ 17ರಂದು ನಡೆದ ಶ್ರೀ ಗುರುದೇವ ವಿವಿಧೋದ್ದೇಶ ಸಹಕಾರ ಸಂಘ ಬೆಳ್ತಂಗಡಿ ಇದರ 2020-21ನೇ ಸಾಲಿನ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಕೋವಿಡ್-19 ಕಾಲಘಟ್ಟದಲ್ಲಿ ಸದಸ್ಯರ ಆರ್ಥಿಕ ಸಂಕಷ್ಟಕ್ಕೆ ಸಂಘವು ಸ್ಪಂದನೆ ನೀಡಿದ್ದು, ಕೇವಲ ಬ್ಯಾಂಕಿಂಗ್ ಚಟುವಟಿಕೆ ಮಾತ್ರವಲ್ಲದೇ ಸಾಮಾಜಿಕ ಚಟುವಟಿಕೆಯಲ್ಲೂ ತೊಡಗಿಸಿಕೊಂಡಿದೆ. 4 ಮಂದಿ ವಿದ್ಯಾರ್ಥಿಗಳನ್ನು ದತ್ತು ಪಡೆದು, ಶೈಕ್ಷಣಿಕ ಶುಲ್ಕ ಭರಿಸುತ್ತಿದೆ. ಶ್ರೀ ಗುರುದೇವ ಕಾಲೇಜಿನ 48 ಪದವಿ ವಿದ್ಯಾರ್ಥಿಗಳ ಶೈಕ್ಷಣಿಕ ಶುಲ್ಕ, ನೆರೆ ಪರಿಹಾರವಾಗಿ ರೂಪಾಯಿ 3ಲಕ್ಷಕ್ಕೂ ಅಧಿಕ ಪರಿಹಾರ ನಿಧಿ, ಕೋವಿಡ್ ಸಂದರ್ಭ ಆರೋಗ್ಯ ಕೇಂದ್ರಗಳಿಗೆ 1ಲಕ್ಷ ರೂಪಾಯಿ ಮೊತ್ತದ ಕೋವಿಡ್ ನಿರ್ವಹಣಾ ಸಾಮಗ್ರಿ, ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಸೇರಿದಂತೆ ಹಲವು ಯೋಜನೆ ರೂಪಿಸಿದೆ ಎಂದು ತಿಳಿಸಿದರು.ಪ್ರಸಕ್ತ ವರ್ಷದಲ್ಲಿ ಸಂಘವು 426 ಕೋಟಿ ರೂಪಾಯಿ ವ್ಯವಹಾರ ನಡೆಸಿದ್ದು, 1.14 ಕೋಟಿ ರೂಪಾಯಿ ನಿವ್ವಳ ಲಾಭ ಹೊಂದಿದೆ. ಸಂಘದಲ್ಲಿ ಪ್ರಕೃತ 78.50 ಕೋಟಿ ರೂಪಾಯಿ ಠೇವಣಿಯಿದ್ದು, 96% ಸಾಲ ವಸೂಲಾತಿ ಮಾಡಿದೆ. ಸಂಘವು ಪ್ರಸಕ್ತ ವರ್ಷ ಸದಸ್ಯರಿಗೆ ಶೇ.15 ಲಾಭಾಂಶ ಹಂಚಿಕೆ ಮಾಡಲು ತೀರ್ಮಾನಿಸಿದೆ. ಸಂಘಕ್ಕೆ ಸ್ವಂತ ಕಟ್ಟಡ ಹೊಂದುವ ಮಹತ್ವಾಕಾಂಕ್ಷೆ ಹೊಂದಿದ್ದು, ಈ ನಿಟ್ಟಿನಲ್ಲಿ ಈಗಾಗಲೇ ಬೆಳ್ತಂಗಡಿಯಲ್ಲಿ ನಿವೇಶನ ಖರೀದಿಸಲಾಗಿದೆ. 3ಕೋಟಿ ರೂಪಾಯಿ ವೆಚ್ಚದಲ್ಲಿ ಕಟ್ಟಡ ನಿರ್ಮಾಣ ಮಾಡಲು ಯೋಜನೆ ರೂಪಿಸಲಾಗಿದೆ ಎಂದು ತಿಳಿಸಿದರು.ಸಂಘದ ವಿಶೇಷ ಅಧಿಕಾರಿ ಎಂ. ಮೋನಪ್ಪ ಪೂಜಾರಿ ಪ್ರಾಸ್ತಾವಿಕವಾಗಿ ಮಾತನಾಡಿ, ಸಹಕಾರಿ ತತ್ವದಡಿ ಸಂಘದ ವಿಶ್ವಾಸಾರ್ಹ ವ್ಯವಹಾರದಿಂದ ಪ್ರಸ್ತುತ ಒಟ್ಟು 26,187 ಸದಸ್ಯರಿದ್ದು, ಪ್ರಸಕ್ತ ಸಾಲಿನಲ್ಲಿ 15% ಸದಸ್ಯತನ ಹೆಚ್ಚುವರಿಯಾಗಿದೆ. ಸಂಘದ ಹೂಡಿಕೆಯಲ್ಲಿ 80% ಪ್ರಗತಿ ಕಂಡಿದೆ. ಈಗಾಗಲೆ 14 ಶಾಖೆಗಳಿದ್ದು, ಮುಂದಿನ ದಿನಗಳಲ್ಲಿ ಹೆಚ್ಚುವರಿ ನಾಲ್ಕು ಶಾಖೆಗಳನ್ನು ತೆರೆಯುವ ಮಹದಾಸೆ ಹೊಂದಿದ್ದೇವೆ. 2021-22ನೇ ಸಾಲಿನಲ್ಲಿ 2 ಶಾಖೆ ತೆರೆಯುವ ಉದ್ದೇಶವಿದ್ದು, ಅರಸಿನಮಕ್ಕಿಯಲ್ಲಿ 15ನೇ ಶಾಖೆ ತೆರೆಯಲು ಅಗತ್ಯ ಸಿದ್ಧತೆ ನಡೆಸಲಾಗುತ್ತಿದೆ ಎಂದು ತಿಳಿಸಿದರು.ಪ್ರಸಕ್ತ ವರ್ಷ ಆರ್ಥಿಕ ದುರ್ಬಲ ಕುಟುಂಬದ 43 ಮಕ್ಕಳ ಶಿಕ್ಷಣಕ್ಕೆ 3.99 ಲಕ್ಷ ರೂಪಾಯಿ ನೆರವು ನೀಡಿದ್ದು, ಕೋವಿಡ್ ಸಂದರ್ಭ ಸರ್ಕಾರಕ್ಕೆ 50 ಸಾವಿರ ರೂಪಾಯಿ ನೀಡಲಾಗಿದೆ. ಸಂಘದಲ್ಲಿ 62 ಸ್ವಸಹಾಯ ಗುಂಪುಗಳಿದ್ದು, ಅವರಿಗೆ ವಿಮಾ ಯೋಜನೆ ಒದಗಿಸುವ ಕುರಿತು ಉತ್ತಮ ಯೋಜನೆ ಹಾಕಲಾಗಿದೆ. ಜೊತೆಗೆ ಸ್ವಾಭಾವಿಕವಾಗಿ ಮೃತಪಟ್ಟಲ್ಲಿ ವಿಮಾಯೋಜನೆಯಿಂದ ಅವರ ಸಾಲವನ್ನು ಜಮೆ ಮಾಡಿ ಋಣಮುಕ್ತಗೊಳಿಸುವ ವಿಶೇಷ ಯೋಜನೆ ರೂಪಿಸಲಾಗಿದೆ. ಇದರೊಂದಿಗೆ ಸಂಘದ 36 ಪಿಗ್ಮಿ ಸಂಗ್ರಹಕಾರರಿಗೆ ಉತ್ತೇಜನ ನೀಡುವ ಸಲುವಾಗಿ ಅವರು ಸಂಗ್ರಹಿಸಿದ ಠೇವಣಿಯಲ್ಲಿ 0.1%ರಂತೆ 1.40 ಲಕ್ಷ ರೂಪಾಯಿ ವಿತರಿಸಲಾಗುವುದು ಎಂದು ತಿಳಿಸಿದರು.ಇದೇ ವೇಳೆ ಉತ್ತಮ ಶಾಖೆ ಎಂದು ಕಕ್ಕಿಂಜೆ ಶಾಖೆಯ ವ್ಯವಸ್ಥಾಪಕರು ಮತ್ತು ಸಿಬ್ಬಂದಿ ವರ್ಗವನ್ನು, ಅತ್ಯುತ್ತಮ ಸಂಘಟಕರೆಂದು ಶಾಖಾ ವ್ಯವಸ್ಥಾಪಕರುಗಳಾದ ಪ್ರವೀಣ್ ಪೂಜಾರಿ, ಅಶೋಕ್ ಕುಮಾರ್, ಜಯಾನಂದ್ ಹಾಗೂ ದ್ವಿತೀಯ ದರ್ಜೆ ಸಹಾಯಕ ಸೂರಜ್ರನ್ನು, ವಾರ್ಷಿಕವಾಗಿ ರೂಪಾಯಿ 1.50ಕೋಟಿಗೂ ಅಧಿಕ ದೈನಿಕ ಠೇವಣಿ ಸಂಗ್ರಹಕರಾದ ಮುಡಿಪು ಶಾಖೆಯ ನಾರಾಯಣ ಭಟ್, ಶಿರ್ತಾಡಿ ಶಾಖೆಯ ಶಶಿಧರ ಇವರನ್ನು ಗೌರವಿಸಲಾಯಿತು.ಸಂಘದ ಉಪಾದ್ಯಕ್ಷ ದಾಮೋದರ್ ಸಾಲ್ಯಾನ್, ನಿರ್ದೇಶಕರಾದ ಭಗೀರಥ ಜಿ., ಸುಜಿತಾ ವಿ.ಬಂಗೇರ, ತನುಜಾ ಶೇಖರ್, ಸಂಜೀವ ಪೂಜಾರಿ, ಕೆ. ಪಿ. ದಿವಾಕರ್, ಜನಾರ್ದನ ಪೂಜಾರಿ, ಶೇಖರ್ ಬಂಗೇರ, ಚಂದ್ರಶೇಖರ್, ಧರ್ಣಪ್ಪ ಪೂಜಾರಿ ಉಪಸ್ಥಿತರಿದ್ದರು.ಸಂಘದ ನಿರ್ದೇಶಕ ಸತೀಶ್ ಕಾಶಿಪಟ್ಣ ಸ್ವಾಗತಿಸಿ, ಮುಖ್ಯಕಾರ್ಯನಿರ್ವಹಣಾಧಿಕಾರಿ ಅಶ್ವತ್ಥ್ ಕುಮಾರ್ ಕಾರ್ಯಕ್ರಮ ನಿರೂಪಿಸಿದರು. ನಿರ್ದೇಶಕ ಜಗದೀಶ್ಚಂದ್ರ ಡಿ. ಕೆ. ವಂದಿಸಿದರು.ಶ್ರೀ ಗುರುದೇವ ವಿವಿದೋದ್ದೇಶ ಸಹಕಾರ ಸಂಘವು ಆರ್ಥಿಕ ಚಟುವಟಿಕೆಯೊಂದಿಗೆ ಸಾಮಾಜಿಕ ಚಟುವಟಿಕೆಗಳಲ್ಲೂ ತನ್ನನ್ನು ತಾನು ತೊಡಗಿಸಿಕೊಂಡು ಎಲ್ಲಾ ಸಹಕಾರ ಸಂಘಗಳಿಗೆ ಮಾದರಿಯೆನಿಸಿದೆ. ಸಂಘದ ಮೂಲಕ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ನೆರವು, ಅಶಕ್ತರಿಗೆ ಸಹಕಾರ, ಅರೋಗ್ಯ ಕೇಂದ್ರಗಳಿಗೆ ಕೋವಿಡ್ ನಿರ್ವಹಣಾ ಸಾಮಾಗ್ರಿ ನೀಡುತ್ತಾ ಬಂದಿರುವುದು ಶ್ಲಾಘನೀಯ ಎಂದು ಮಾಜಿ ಶಾಸಕ ಹಾಗೂ ಸಂಘದ ನಿರ್ದೇಶಕ ಕೆ. ವಸಂತ ಬಂಗೇರ ಇದೇ ಸಂದರ್ಭದಲ್ಲಿ ಸಂಘದ ಚಟುವಟಿಕೆಗಳನ್ನು ಶ್ಲಾಘಿಸಿದರು.






