ಡಿ. 22ರಂದು ರೋಟರಿ ಗವರ್ನರ್ ಬೆಳ್ತಂಗಡಿಗೆ

ಡಿ. 22ರಂದು ರೋಟರಿ ಗವರ್ನರ್ ಬೆಳ್ತಂಗಡಿಗೆ
Facebook
Twitter
LinkedIn
WhatsApp

ಬೆಳ್ತಂಗಡಿ: ರೋಟರಿ ಕ್ಲಬ್ ಬೆಳ್ತಂಗಡಿ ಇದರ ಸುವರ್ಣ ಮಹೋತ್ಸವ ಕಾರ್ಯಕ್ರಮಗಳ ಸಮಾರೋಪ ಡಿಸೆಂಬರ್ 22 ರಂದು ಕಾಶಿಬೆಟ್ಟು ಅರಳಿ ರಸ್ತೆಯಲ್ಲಿರುವ ರೋಟರಿ ಸಭಾಂಗಣದಲ್ಲಿ ಜರುಗಲಿದ್ದು, ಆ ದಿನ ಬಹುವಿಧ ಸೇವಾ ಚಟುವಟಿಕೆಗಳ ಅನಾವರಣ ಹಾಗೂ ರೋಟರಿ ಜಿಲ್ಲಾ ರಾಜ್ಯಪಾಲರ ಅಧಿಕೃತ ಭೇಟಿ ಕಾರ್ಯಕ್ರಮ ವ್ಯವಸ್ಥಿತವಾಗಿ ಆಯೋಜಿಲಾಗಿದೆ ಎಂದು ರೋಟರಿ ಕ್ಲಬ್ ಅಧ್ಯಕ್ಷ ಶರತ್‌ಕೃಷ್ಣ ಪಡುವೆಟ್ನಾಯ ತಿಳಿಸಿದರು.ಬೆಳ್ತಂಗಡಿಯ ಪತ್ರಿಕಾಭವನದಲ್ಲಿ ಡಿಸೆಂಬರ್ 18ರಂದು ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ವಿವರ ನೀಡಿದರು.ರಾಜ್ಯಪಾಲರ ಭೇಟಿಯ ಅಂಗವಾಗಿ ರೋಟರಿ ಪ್ರಮುಖ ಯೋಜನೆ ಘೋಷಿಸಿದ್ದು, ಬೆಳ್ತಂಗಡಿ ಕಸಬಾ ಗ್ರಾಮದಲ್ಲಿರುವ ಮುಗುಳಿ ಸರಕಾರಿ ಶಾಲೆಯನ್ನು 6 ಲಕ್ಷ ರೂಪಾಯಿ ವೆಚ್ಚದಲ್ಲಿ ಬೆಂಗಳೂರಿನ ಇಂದಿರಾನಗರ ರೋಟರಿ ಕ್ಲಬ್‌ನ ಸಹಕಾರದಲ್ಲಿ ನವೀಕರಿಸುವ ಕಾರ್ಯಕ್ರಮ, ಚಾರ್ಮಾಡಿ ಗ್ರಾಮದ ಕೊಳಂಬೆ ಎಂಬಲ್ಲಿ ನೆರೆ ಪೀಡಿತ ಪ್ರದೇಶದಲ್ಲಿ ರಚನೆಯಾಗುತ್ತಿರುವ 12 ಮನೆಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸುವ ಯೋಜನೆ, ಮುಂಡಾಜೆಯ ಅರ್ಹ ಕುಟುಂಬವೊಂದಕ್ಕೆ ನಿರ್ಮಿಸಿ ಹಸ್ತಾಂತರಿಸಿರುವ ಮನೆಯನ್ನು ರಾಜ್ಯಪಾಲರು ವೀಕ್ಷಿಸುವ ಕಾರ್ಯಕ್ರಮ, ಉಜಿರೆಯ ಮಾದರಿ ರುದ್ರ ಭೂಮಿಯಲ್ಲಿ ಉಪಯೋಗವಾಗುವಂತೆ ಶವ ಸಂರಕ್ಷಣಾ ಶೀಥಲೀಕೃತ ಯಂತ್ರ( ಫ್ರೀಝರ್) ಕೊಡುಗೆ ಇತ್ಯಾದಿ ಯೋಜನೆಯನ್ನು ರಾಜ್ಯಪಾಲರು ಅನಾವರಣಗೊಳಿಸಲಿದ್ದಾರೆ ಎಂದರು.ಸಮಾಜ ಸೇವಾ ಉದ್ದೇಶದಿಂದ ಸ್ಥಾಪಿತವಾದ ರೋಟರಿ ಸಂಸ್ಥೆಗೆ ಭಾರತದಲ್ಲಿ ಶತಮಾನದ ಇತಿಹಾಸ ಇದೆ. ಬೆಳ್ತಂಗಡಿಯ ರೋಟರಿ ಕ್ಲಬ್‌ಗೆ 51 ರ ಹರೆಯ. ಜಾಗತಿಕವಾಗಿ ರೋಟರಿ ಸಂಘಟನೆ ಸುಮಾರು 200 ದೇಶಗಳಲ್ಲಿ 35,000 ಕ್ಕೂ ಮಿಕ್ಕಿ ಕ್ಲಬ್‌ಗಳನ್ನು ಹೊಂದಿದ್ದು ಮನುಕುಲದ ಸೇವೆಯಲ್ಲಿ ತೊಡಗಿಸಿಕೊಂಡಿದೆ. ಸಾರ್ಥಕ ಸೇವೆಯ 5 ದಶಕಗಳನ್ನು ಪೂರೈಸಿರುವ ಬೆಳ್ತಂಗಡಿ ರೋಟರಿ ಕ್ಲಬ್ ಮಂಗಳೂರು ಉತ್ತರ ರೋಟರಿ ಕ್ಲಬ್‌ನ ಪ್ರಾಯೋಜಕತ್ವದಲ್ಲಿ 50 ವರ್ಷಗಳ ಹಿಂದೆ ತನ್ನ ಸೇವಾ ಕಾರ್ಯವನ್ನು ಪ್ರಾರಂಭಿಸಿತು. ಪ್ರಸ್ತುತ ಶರತ್ ಕೃಷ್ಣ ಪಡುವೆಟ್ಣಾಯ ಅಧ್ಯಕ್ಷರಾಗಿ, ಯು. ಎಚ್. ಅಬೂಬಕ್ಕರ್ ಕಾರ್ಯದರ್ಶಿಯಾಗಿ, ವೈಕುಂಠ ಪ್ರಭು ಕೋಶಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ‌ ಬೆಳ್ತಂಗಡಿಯ ಖ್ಯಾತ ನ್ಯಾಯವಾದಿ ಹಾಗೂ ಮಂಗಳೂರಿನ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾನೂನು ಮಹಾವಿದ್ಯಾಲಯದ ಸ್ಥಾಪಕ ಪ್ರಾಂಶುಪಾಲ ಎನ್. ಜೆ. ಕಡಂಬರವರು ಸ್ಥಾಪಕ ಅಧ್ಯಕ್ಷರಾಗಿ. ಸುಧೀರ್ ಜಿ. ಭಿಡೆಯವರು ಸ್ಥಾಪಕ ಕಾರ್ಯದರ್ಶಿಯಾಗಿ ಆರಂಭಿಸಿದ ಸಂಸ್ಥೆ ಕಳೆದ 50 ವರ್ಷಗಳಲ್ಲಿ ಕ್ಲಬ್ಬಿನ ಸಾರಥ್ಯವನ್ನು ವಹಿಸಿದ್ದ ಹಿರಿಯರು ತಾಲೂಕಿನಾದ್ಯಂತ ಸಮುದಾಯದ ಅಗತ್ಯಗಳಿಗೆ ಸ್ಪಂದಿಸುವ ಹಾಗೂ ಜನಪರ ಕೆಲಸ ಮಾಡುವ ಮೂಲಕ ಮಾದರಿ ಸಂಸ್ಥೆಯಾಗಿ ಬೆಳೆದಿರುತ್ತದೆ.ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಗೌರವ ಸದಸ್ಯರಾಗಿರುವ ನಮ್ಮ ಈ ಸಂಸ್ಥೆಯು ಇಂದು ವಿವಿಧ ವೃತ್ತಿಯಲ್ಲಿ ಉತ್ತಮ ಸಾಧನೆ ಮಾಡಿರುವ 81ಸಾಧಕರನ್ನು ಸದಸ್ಯರಾಗಿ ಹೊಂದಿದೆ. ನಮ್ಮೊಂದಿಗೆ ರೋಟರಿ ಸಹಸಂಸ್ಥೆಗಳಾಗಿ 4 ರೋಟರಿ ಸಮುದಾಯ ದಳಗಳು, 8 ಇಂಟರಾಕ್ಟ್ ಕ್ಲಬ್‌ಗಳು, 3 ರೋಟರಾಕ್ಟ್ ಕ್ಲಬ್‌ಗಳ ಹಾಗೂ ಆನ್ಸ್ ಕ್ಲಬ್ ಸೇವಾ ಚಟುವಟಿಕೆಗಳಲ್ಲಿ ಸಹಭಾಗಿಗಳಾಗಿದ್ದಾರೆ.ಪ್ರಸ್ತುತ ನವೀನಾ ಜಯಕುಮಾರ್ ಶೆಟ್ಟಿ ಅಧ್ಯಕ್ಷರಾಗಿ, ಡಾl ಭಾರತಿ ಗೋಪಾಲಕೃಷ್ಣ ಕಾರ್ಯದರ್ಶಿಗಳಾಗಿ ಆನ್ಸ್ ಕ್ಲಬ್‌ನಲ್ಲಿ ತಮ್ಮ ಸೇವೆಯನ್ನು ನೀಡುತ್ತಿದ್ದಾರೆ. 70ರ ದಶಕದಲ್ಲಿ ಬೆಳ್ತಂಗಡಿಯ ಮುಖ್ಯರಸ್ತೆಯಲ್ಲಿರುವ ಸರಕಾರಿ ಮಾದರಿ ಶಾಲೆಯ ಆವರಣದಲ್ಲಿ ಕಚೇರಿ ನಿರ್ಮಿಸಿಕೊಂಡು ಡಾ. ಡಿ. ವೀರೇಂದ್ರ ಹೆಗ್ಗಡೆಯವರಿಂದ ಉದ್ಘಾಟಿಸಲ್ಪಟ್ಟಿತ್ತು.ಸಮಾಜದ ಮುಂದಿನ ಅಗತ್ಯಗಳಿಗೆ ಸ್ಪಂದಿಸುವ ಸಾಮರ್ಥ್ಯವನ್ನು ನಾವು ಪಡೆದುಕೊಳ್ಳಬೇಕು ಹಾಗೂ ರೋಟರಿ ಕ್ಲಬ್ಬಿನ ಚಿನ್ನದ ಹಬ್ಬವನ್ನು ನೂತನ ಆಯಾಮಕ್ಕೆ ಕೊಂಡೊಯ್ಯುವ ದೃಷ್ಟಿಯಿಂದ ನಮ್ಮ ಕ್ಲಬ್ಬಿನ ಸ್ಥಾಪಕ ಸದಸ್ಯರಾಗಿದ್ದ ದಿ. ಕೆ. ರಮಾನಂದ ಸಾಲ್ಯಾನ್ ಅವರ ಅಧ್ಯಕ್ಷತೆಯಲ್ಲಿ ರೋಟರಿ ಸೇವಾ ಟ್ರಸ್ಟ್ ಪ್ರಾರಂಭಗೊಂಡು ಪ್ರಸಕ್ತ ಅಧ್ಯಕ್ಷರಾಗಿ ಮೇಜರ್‌ ಜನರಲ್ ( ನಿವೃತ್ತ ) ಎಂ. ವಿ. ಭಟ್, ಕಾರ್ಯದರ್ಶಿಗಳಾಗಿ ಡಾl ಶಶಿಧರ ಡೋಂಗ್ರೆ, ಕೋಶಾಧಿಕಾರಿಯಾಗಿ ಶ್ರೀಕಾಂತ್ ಕಾಮತ್‌ರವರ ನೇತೃತ್ವದಲ್ಲಿ ರೋಟರಿ ಸೇವಾ ಟ್ರಸ್ಟ್ ಉಜಿರೆಯ ಕಾಶಿಬೆಟ್ಟುವಿನ ಅರಳಿ ರಸ್ತೆಯಲ್ಲಿ ವಿವಿಧ ಸೇವಾ ಚಟುವಟಿಕೆಗಳಿಗೆ ಪೂರಕವಾದ 8500 ಚದರ ಅಡಿ ವಿಶಾಲವಾದ ಒಳಾಂಗಣ ಕ್ರೀಡಾಂಗಣ ಹಾಗೂ ಕೆ. ರಮಾನಂದ ಸಾಲ್ಯಾನ್ ಸ್ಮರಣಾರ್ಥ ಹವಾ ನಿಯಂತ್ರಣ ಸಭಾಂಗಣವನ್ನು ಹೊಂದಿ ಕಾರ್ಯಾಚರಿಸುತ್ತಿದೆ. ಅಲ್ಲಿ ಉದ್ಘಾಟನೆಗೊಂಡಿರುವ ಕ್ಲಬ್ಬಿನ ಸುವರ್ಣ ಮಹೋತ್ಸವ ಡಿಸೆಂಬರ್ 22 ರಂದು ಸಮಾರೋಪಗೊಳ್ಳುತ್ತಿದೆ ಎಂದರು.ಅದೇ ದಿನ ನಮ್ಮ ರೋಟರಿ ಜಿಲ್ಲೆ 3181ರ ಗವರ್ನರ್ ಆರ್. ರವೀಂದ್ರ ಭಟ್‌ ಅವರು ನಮ್ಮ ಕ್ಲಬ್‌ಗೆ ಅಧಿಕೃತ ಭೇಟಿ ನೀಡಲಿದ್ದಾರೆ.ಈ ಸಂಭ್ರಮದಲ್ಲಿ ರೋಟರಿ ಅಸಿಸ್ಟಂಟ್ ಗವರ್ನರ್ ಸುರೇಂದ್ರ ಕಿಣಿ ಹಾಗೂ ವಲಯ ಕಾರ್ಯದರ್ಶಿ ಜಯರಾಮ ರೈ ಇವರು ಭಾಗಿಯಾಗಲಿದ್ದಾರೆ. ಕೋವಿಡ್ 19 ಸಾಂಕ್ರಾಮಿಕ ರೋಗದ ಮಧ್ಯೆಯೂ Serve to Change lives ಎಂಬ ಧೈಯ ವಾಕ್ಯದಡಿ ಜುಲೈ 2021 ರಿಂದ ಮೊದಲುಗೊಂಡು ಈವರೆಗೆ ಬೆಳ್ತಂಗಡಿ ತಾಲೂಕಿನಾದ್ಯಂತ ಜನ ಸಾಮಾನ್ಯರಿಗೆ ಉಪಯುಕ್ತವಾದ ಸುಮಾರು 500 ಕ್ಕಿಂತಲೂ ಹೆಚ್ಚು ಸಾಮಾಜಿಕ ಕಾರ್ಯಕ್ರಮಗಳನ್ನು ಸಂಘಟಿಸಿ ರಾಷ್ಟ್ರ ಮಟ್ಟದಲ್ಲಿ ಅಗ್ರಸ್ಥಾನವನ್ನು ಈವರೆಗೆ ಬೆಳ್ತಂಗಡಿ ಕ್ಲಬ್ ಕಾಯ್ದುಕೊಂಡುಬಂದಿದೆ ಎಂದು ಅವರು ಈ ವೇಳೆ ನೆನಪಿಸಿಕೊಂಡರು.ಗೋಷ್ಠಿಯಲ್ಲಿ ರೋಟರಿ‌ ಝೋನಲ್ ಲೆಫ್ಟಿನೆಂಟ್ ಧನಂಜಯ ರಾವ್ ಬಿ. ಕೆ., ಕಾರ್ಯದರ್ಶಿ ಅಬೂಬಕ್ಕರ್ ಉಜಿರೆ, ನಿಯೋಜಿತ ಅಧ್ಯಕ್ಷೆ ಮನೋರಮಾ ಭಟ್, ನಿಯೋಜಿತ ಕಾರ್ಯದರ್ಶಿ ರಕ್ಷಾ ರಾಗ್ನೇಶ್ ಉಪಸ್ಥಿತರಿದ್ದರು.

Latest 5

Related Posts