ಸಾಂಕ್ರಾಮಿಕ ರೋಗದ ಭೀತಿಯಲ್ಲಿ ಗುರುವಾಯನಕೆರೆ ನಾಗರಿಕರು;ನಿರ್ಲಜ್ಜ ತಾಲೂಕು ಆಡಳಿತದಿಂದ ನಿರ್ಲಕ್ಷ್ಯ ಧೋರಣೆ

ಸಾಂಕ್ರಾಮಿಕ ರೋಗದ ಭೀತಿಯಲ್ಲಿ ಗುರುವಾಯನಕೆರೆ ನಾಗರಿಕರು;ನಿರ್ಲಜ್ಜ ತಾಲೂಕು ಆಡಳಿತದಿಂದ ನಿರ್ಲಕ್ಷ್ಯ ಧೋರಣೆ
Facebook
Twitter
LinkedIn
WhatsApp

ಬೆಳ್ತಂಗಡಿ: ಕುವೆಟ್ಟು ಗ್ರಾಮದ ಗುರುವಾಯನಕೆರೆಯ ಐತಿಹಾಸಿಕ ಕೆರೆಗೆ ಕಿಡಿಗೇಡಿಗಳು ವಿಷ ಬೆರೆಸಿಯೋ ಅಥವಾ ಸ್ಥಾಪಿತ ಹಿತಾಸಕ್ತ ಪ್ರಭಾವಿಗಳು ಹರಿಸಿದ ಮಲಿನ ನೀರಿನಿಂದಲೋ ಕೆರೆಯಲ್ಲಿರುವ ಲಕ್ಷಾಂತರ ಮೀನುಗಳ ಮಾರಣ ಹೋಮವಾಗಿರುವ ವಿಚಾರ ಮಾರ್ಚ್ 13ರಂದು ಬೆಳಕಿಗೆ ಬಂದಿದೆ. ಮೀನುಗಳ ಮಾರಣ ಹೋಮ ನಡೆದು ದಿನಗಳೆರಡು ಕಳೆದರೂ ನಿರ್ಲಜ್ಜ ತಾಲೂಕು ಆಡಳಿತ ಸತ್ತ ಮೀನುಗಳ ವಿಲೇವಾರಿಗೆ ಯಾವೊಂದು ಕ್ರಮಕ್ಕೂ ಮುಂದಾಗದೇ ನಿರ್ಲಕ್ಷ್ಯ ವಹಿಸಿದ್ದರ ಪರಿಣಾಮ ಗುರುವಾಯನಕೆರೆ ಪರಿಸರದಲ್ಲಿ ಸತ್ತ ಮೀನುಗಳಿಂದ ಹರಡುವ ದುರ್ನಾತ ಬೀರುತ್ತಿದ್ದು, ನಾಗರಿಕರಲ್ಲಿ ಸಾಂಕ್ರಾಮಿಕ ರೋಗದ ಭೀತಿ ಹುಟ್ಟಿಸಿದೆ.ಗುರುವಾಯನಕೆರೆಯ ಈ ಬಡಪಾಯಿ ಮೀನುಗಳಿಗೆ ಸ್ಥಳೀಯ ಹಿಂದು ಸಂಘಟನೆಗಳ ಬೆಂಬಲವಿಲ್ಲ. ಕಾರಣ ಈ ಕೆರೆಯ ಮೀನುಗಳಿಗೆ ಯಾವುದೇ ದೇವಾಲಯದ ಲೇಬಲ್ ಇಲ್ಲ. ಈ ಹಿಂದೆ ಶಿಶಿಲ ದೇಗುಲದ ಬಳಿ ನದಿಯಲ್ಲಿ ಮೀನುಗಳ ಮಾರಣ ಹೋಮವಾದಾಗ ಹಾಗೂ ಕರಂಬಾರು ಕೇಳ್ಕರೇಶ್ವರ ದೇಗುಲದ ಬಳಿ ಹೊಳೆಯಲ್ಲಿ ಮೀನುಗಳು ಸತ್ತಾಗ ತಾಲೂಕಿನ ಹಿಂದು ಸಂಘಟನೆಗಳ ಯುವಕರು ಬೀದಿಗಿಳಿದು ಹೋರಾಡಿದ್ದರು. ಮಾತ್ರವಲ್ಲ; ಸ್ವಯಂಪ್ರೇರಿತರಾಗಿ ಸತ್ತ ಮೀನುಗಳ ಅಂತ್ಯಸಂಸ್ಕಾರ ನೆರವೇರಿಸಿದ್ದರು. ಆ ಮೂಲಕ ಪರಿಸರದಲ್ಲಿ ದುರ್ನಾತ ಬೀರುವುದನ್ನು ಹಾಗೂ ಸಂಭಾವ್ಯ ಸಾಂಕ್ರಾಮಿಕ ರೋಗಗಳಿಂದ ಜನರನ್ನು ರಕ್ಷಿಸಿದ್ದರು. ಆದರೆ ಗುರುವಾಯನಕೆರೆಯ ಈ ಹತಭಾಗ್ಯ ಮೀನುಗಳಿಗೆ ದೇಗುಲದ ಲೇಬಲ್ ಇಲ್ಲ; ಪರಿಣಾಮ ಯಾವೊಂದು ಹಿಂದು ಸಂಘಟನೆಯವರಿಗೂ ಇಲ್ಲಿ ಮೀನು ಸತ್ತ ಕಾರಣಗಳ ಬಗ್ಗೆ ತನಿಖೆಯೂ ಬೇಕಾಗಿಲ್ಲ; ಮೃತ ಮೀನುಗಳ ಅಂತ್ಯಸಂಸ್ಕಾರವೂ ಆಗಬೇಕಾದ್ದಿಲ್ಲ. ತಾಲೂಕು ಆಡಳಿತಕ್ಕೆ ಇದು ಬಿದ್ದು ಹೋದ ವಿಚಾರವೇ ಅಲ್ಲ. ಗುರುವಾಯನಕೆರೆಯಲ್ಲಿ ಸತ್ತ ಮೀನುಗಳಿಂದ ದುರ್ನಾತ ಹರಡಲಿ ಅಥವಾ ಸಾಂಕ್ರಾಮಿಕ ರೋಗ ಹರಡಲಿ; ನಿರ್ಲಜ್ಜ ತಾಲೂಕು ಆಡಳಿತ ಇದರ ಬಗ್ಗೆ ತಲೆ ಕೆಡಿಸಿಕೊಂಡಂತಿಲ್ಲ. ಇದ್ದುದರಲ್ಲಿ ಕುವೆಟ್ಟು ಗ್ರಾಮ ಪಂಚಾಯತ್ ಆಡಳಿತ ತನ್ನ ಇತಿಮಿತಿಯೊಳಗೆ ಕಾರ್ಯಾಚರಿಸುತ್ತಿದ್ದು, ಸೂಕ್ತ ಕ್ರಮಕ್ಕಾಗಿ ತಾಲೂಕು ಆಡಳಿತ ಹಾಗೂ ಮೀನುಗಾರಿಕಾ ಇಲಾಖೆಯ ಸಹಕಾರಕ್ಕಾಗಿ ಕಾಯುತ್ತಿದೆ. ಎಲ್ಲ ವಿಚಾರಗಳಲ್ಲೂ ಯಾರೂ ಊಹಿಸದ ರೀತಿಯಲ್ಲಿ ತ್ವರಿತವಾಗಿ ಕಾರ್ಯಾಚರಿಸುವ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಕೂಡಾ ಮೀನುಗಳ‌ ಈ ಮಾರಣ ಹೋಮದ ಬಗ್ಗೆ, ಮೃತ ಮೀನುಗಳ ಶವಗಳಿಂದ ಪರಿಸರದಲ್ಲಿ ಬೀರುತ್ತಿರುವ ದುರ್ನಾತದ ವಿಚಾರವಾಗಿ ತಾಲೂಕು ಆಡಳಿತ ವಹಿಸಿದ ನಿರ್ಲಜ್ಜ ಮೌನದ ಬಗ್ಗೆ ಹಾಗೂ ಗುರುವಾಯಕೆರೆ ನಾಗರಿಕರರನ್ನು ಕಾಡುತ್ತಿರುವ ಸಾಂಕ್ರಾಮಿಕ ರೋಗದ ಭೀತಿಯ ಬಗ್ಗೆ ತುಟಿಪಿಟಿಕ್ ಎನ್ನದೇ ಮೌನಕ್ಕೆ ಶರಣಾಗಲು ಯಾರ ಪ್ರಭಾವ ಕಾರಣ ಎಂಬುವುದು ನಿಗೂಢವಾಗಿದೆ.ಯಾರು ಏನೇ ಮಾಡಲಿ, ಕೆರೆಯ ನೀರು ವಿಷಮಯವಾಗಿ‌ ಲಕ್ಷಾಂತರ ಮೀನುಗಳ ಮಾರಣ ಹೋಮವಾಗಲು ನೈಜ ಕಾರಣ ತಿಳಿಯಲು ಸೂಕ್ತ ತನಿಖೆಯ ಅಗತ್ಯವಿದೆ. ಕುವೆಟ್ಟು ಗ್ರಾಮ ಪಂಚಾಯತ್ ಆಡಳಿತ ಯಾವ ಅಥವಾ ಯಾರ ಒತ್ತಡಕ್ಕೂ ಮಣಿಯದೇ ಕಡಕ್ ನಿರ್ಣಯ ಕೈಗೊಂಡು ಈ ಬಗ್ಗೆ ಮುಂದುವರಿದೀತೇ ಎಂಬ ಪ್ರಶ್ನೆಗೆ ಕಾಲವೇ ಉತ್ತರಿಸಲಿದೆ.

Latest 5

Related Posts