ಬೆಳ್ತಂಗಡಿ: ಸಾಧನೆಯ ಹಾದಿಯಲ್ಲಿ ಪರಿಶ್ರಮ ಹಾಗೂ ಬದ್ಧತೆ ಇದ್ದಲ್ಲಿ ಗುರಿಯನ್ನು ಸಾಕಾರಗೊಳಿಸಬಹುದು. ಕಠಿಣ ಪರಿಶ್ರಮ ಹಾಗೂ ಸತತ ಪ್ರಯತ್ನ ವಿದ್ಯಾರ್ಥಿ ಜೀವನದಲ್ಲಿ ಅತ್ಯಂತ ಪ್ರಮುಖ ಪಾತ್ರ ವಹಿಸುತ್ತದೆ ಎಂದು ‘ಕನಸು ಮಾರಾಟಕ್ಕಿದೆ’ ಚಿತ್ರದ ನಿರ್ದೇಶಕ ಸ್ಮಿತೇಶ್ ಬಾರ್ಯ ಹೇಳಿದರು.ಅವರು ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಸ್ನಾತಕೋತ್ತರ ಕೇಂದ್ರದ ಪತ್ರಿಕೋದ್ಯಮ ಹಾಗೂ ಸಮೂಹ ಸಂವಹನ ವಿಭಾಗವು ಆಯೋಜಿಸಿದ್ದ ನೂತನ ಶೈಕ್ಷಣಿಕ ವರ್ಷದ ವಿಧ್ಯಾರ್ಥಿಗಳ ವಿಭಾಗದ ಓರಿಯಂಟೇಷನ್ ಹಾಗೂ ಮೀಡಿಯಾ ಮೆಸೆಂಜರ್ ಕ್ಲಬ್‌ಗೆ ಚಾಲನೆ ನೀಡಿ ಮಾತನಾಡುತ್ತಿದ್ದರು.ಸೃಜನಶೀಲತೆ ಎಂಬುದು ಸತತ ಪ್ರಯತ್ನದ ಫಲ. ನಮ್ಮ ಗುರಿಯನ್ನು ನಿರ್ದಿಷ್ಟವಾಗಿರಿಸಿಕೊಂಡು ಅದನ್ನು ಸಾಧಿಸಲು ಧೃಡ ಸಂಕಲ್ಪ ಮಾಡಿದಲ್ಲಿ ಮಾತ್ರ ಕನಸುಗಳು ನನಸಾಗುತ್ತವೆ. ಸಾಧನೆಯ ಹಾದಿಯಲ್ಲಿ ಸಾಕಷ್ಟು ಸವಾಲುಗಳು ಎದುರಾಗಬಹುದು. ಅವೆಲ್ಲವನ್ನು ಹಿಮ್ಮೆಟ್ಟಿಸಿ ಗುರಿಯತ್ತ ಸಾಗಬೇಕು ಎಂದು ಅವರು ಹೇಳಿದರು.ವಿಭಾಗದ ಮುಖ್ಯಸ್ಥರಾದ ಡಾ. ಭಾಸ್ಕರ ಹೆಗಡೆ ಪ್ರಾಸ್ತಾವಿಕ ನುಡಿಗಳನ್ನಾಡಿ; ನೂತನ ಶೈಕ್ಷಣಿಕ ವರ್ಷದ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. ದ್ವಿತೀಯ ವರ್ಷದ ವಿದ್ಯಾರ್ಥಿಗಳ ಬರಹಗಳ ಸಂಗ್ರಹ ‘ಹೊಂಗಿರಣ’ ಪುಸ್ತಕವನ್ನ ಬಿಡುಗಡೆಗೊಳಿಸಲಾಯಿತು. ಕಾರ್ಯಕ್ರಮದಲ್ಲಿ ವಿಭಾಗದ ಉಪನ್ಯಾಸಕ ವೃಂದ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.






