ಬೆಳ್ತಂಗಡಿ: ಉಜಿರೆಯ ಶ್ರೀ ಶಾರದಾ ಪೂಜಾ ಸಮಿತಿ ವತಿಯಿಂದ ಅಕ್ಟೋಬರ್ 9 ರಿಂದ 12ರವರೆಗೆ ಶ್ರೀ ಶಾರದಾ ಮಂಟಪದಲ್ಲಿ ನಡೆಯಲಿರುವ 44ನೇ ವರ್ಷದ ಸಾರ್ವಜನಿಕ ಶ್ರೀ ಶಾರದಾ ಪೂಜೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮವು ಸೆಪ್ಟೆಂಬರ್ 17ರಂದು ಶ್ರೀ ಶಾರದಾ ಮಂಟಪದಲ್ಲಿ ನಡೆಯಿತು. ಸಮಿತಿ ಗೌರವಾಧ್ಯಕ್ಷ ಉಜಿರೆ ಶ್ರೀ ಜನಾರ್ಧನ ಸ್ವಾಮಿ ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರ ಶರತ್ಕೃಷ್ಣ ಪಡುವೆಟ್ಣಾಯರು ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿ ಮಾತನಾಡಿ; ಉಜಿರೆಯ ಶ್ರೀ ಶಾರದೋತ್ಸವಕ್ಕೆ ಭವ್ಯ ಇತಿಹಾಸವಿದೆ. ಹಿರಿಯರು ಆರಂಭಿಸಿದ ಶ್ರೀ ಶಾರದೋತ್ಸವ ಎಲ್ಲರ ಸಹಕಾರದಿಂದ ನಿರಂತರವಾಗಿ ಯಶಸ್ವಿಯಾಗಿ ನಡೆದುಕೊಂಡು ಬರುತ್ತಿದೆ. ಯಾವುದೇ ಆಡಂಬರವಿಲ್ಲದೇ ಸರಳವಾಗಿ ಮಾದರಿಯಾಗಿ ನಡೆಸಿಕೊಂಡು ಬರಲು ಎಲ್ಲರ ಶ್ರಮವಿರಲಿ ಎಂದು ಶುಭ ಹಾರೈಸಿದರು. ಗೌರವ ಸಂಚಾಲಕ ವಿಧಾನ ಪರಿಷತ್ ಸದಸ್ಯ ಕೆ. ಪ್ರತಾಪ್ಸಿಂಹ ನಾಯಕ್ ಪ್ರಾಸ್ತಾವಿಕವಾಗಿ ಮಾತನಾಡಿ; ಶ್ರೀ ಶಾರದೋತ್ಸವ ನಡೆದುಬಂದ ದಾರಿಯನ್ನು ಅವಲೋಕಿಸಿ ಕಾರ್ಯಕ್ರಮ ಯಶಸ್ವಿಗೊಳಿಸುವಂತೆ ನುಡಿದರು. ಸಮಿತಿ ಅಧ್ಯಕ್ಷ ಎನ್ ಮಾಧವ ಹೊಳ್ಳ, ಉಪಾಧ್ಯಕ್ಷ ಹುಕುಮ್ ರಾಮ್ ಪಟೇಲ್, ಲಕ್ಷ್ಮಣ ಸಫಲ್ಯ, ಕೋಶಾಧಿಕಾರಿ ಶಿವಪ್ರಸಾದ್ ಸುರ್ಯ ಉಪಸ್ಥಿತರಿದ್ದರು. ಪದಾಧಿಕಾರಿಗಳು ಹಾಗೂ ನಾಗರಿಕರು ಉತ್ಸವದ ಯಶಸ್ಸಿಗೆ ಸಲಹೆ, ಸೂಚನೆ ನೀಡಿದರು. ಸಂಜೀವ ಶೆಟ್ಟಿ ಕುಂಟಿನಿ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿ ಕೊನೆಯಲ್ಲಿ ವಂದಿಸಿದರು.






