ಬೆಳ್ತಂಗಡಿ: ವಿದ್ಯಾರ್ಥಿಗಳು ವಿದ್ಯೆಯ ಜೊತೆ ಉತ್ತಮ ಸಂಸ್ಕಾರ ಹಾಗೂ ಮಾನವೀಯ ಮೌಲ್ಯಗಳನ್ನು ಬೆಳೆಸಿಕೊಳ್ಳಬೇಕು ಎಂದು ಹೊಂಬುಜ ಜೈನಮಠದ ಪೂಜ್ಯ ದೇವೇಂದ್ರಕೀರ್ತಿ ಭಟ್ಟಾರಕ ಸ್ವಾಮೀಜಿ ಹೇಳಿದರು.ಅವರು ಸೆಪ್ಟೆಂಬರ್ 20ರಂದು ಬೆಳ್ತಂಗಡಿ ಜೈನಪೇಟೆಯಲ್ಲಿರುವ ರತ್ನತ್ರಯ ತೀರ್ಥಕ್ಷೇತ್ರದಲ್ಲಿ ಅವಿಭಜಿತ ದಕ್ಷಿಣಕನ್ನಡ ಜಿಲ್ಲೆಯ 733 ವಿದ್ಯಾರ್ಥಿಗಳಿಗೆ 20,29,000/-ರೂಪಾಯಿಗಳ ವಿದ್ಯಾರ್ಥಿ ಪ್ರೋತ್ಸಾಹಧನವನ್ನು ಕಿನ್ಯಮ್ಮ ಯಾನೆ ಗುಣಾವತಿ ಅಮ್ಮ ಸ್ಮಾರಕ ಟ್ರಸ್ಟ್ ವತಿಯಿಂದ ವಿತರಿಸಿ ಆಶೀರ್ವಚನ ನೀಡುತ್ತಿದ್ದರು.ಇಂದಿನ ಅತ್ಯಂತ ವೇಗ ಮತ್ತು ಸ್ಪರ್ಧಾತ್ಮಕ ಜಗತ್ತಿನಲ್ಲಿ ಪೋಷಕರು ಮತ್ತು ವಿದ್ಯಾರ್ಥಿಗಳು ಒತ್ತಡದಲ್ಲೇ ಬದುಕುತ್ತಿದ್ದಾರೆ. ಗುರುಹಿರಿಯರಿಂದಲೂ ಮಕ್ಕಳಿಗೆ ಸಕಾಲಿಕ ಮಾರ್ಗದರ್ಶನ ಸಿಗುತ್ತಿಲ್ಲ. ಹಣ, ಉದ್ಯೋಗ, ಆಸ್ತಿ, ಕೀತಿ ಯಾವುದೂ ಶಾಶ್ವತವಲ್ಲ. ವಿದ್ಯಾರ್ಥಿಗಳು ವಿದ್ಯೆಯೊಂದಿಗೆ ವಿನಯ, ಪರೋಪಕಾರ, ಕರುಣೆ, ಅನುಕಂಪ ಮೊದಲಾದ ಮಾನವೀಯ ಮೌಲ್ಯಗಳನ್ನು ಬೆಳೆಸಿಕೊಳ್ಳಬೇಕು ಎಂದು ಸ್ವಾಮೀಜಿ ಸಲಹೆ ನೀಡಿದರು.ಬಸದಿಯ ಅನುವಂಶಿಕ ಆಡಳಿತ ಮೊಕ್ತೇಸರ ಕೆ. ಜಯವರ್ಮರಾಜ ಬಳ್ಳಾಲ್ ಸ್ವಾಗತಿಸಿದರು.ಕೆ. ರಾಜವರ್ಮ ಬಳ್ಳಾಲ್, ಡಾ| ಜೀವಂಧರ ಬಳ್ಳಾಲ್, ಕೆ. ಪ್ರಸನ್ನ ಕುಮಾರ್, ಪ್ರೇಮ್ ಕುಮಾರ್ ಹೊಸ್ಮಾರು, ವಿಜಯಾ ಬ್ಯಾಂಕ್ ನಿವೃತ್ತ ಮ್ಯಾನೇಜರ್ ಎಂ. ಜಿನರಾಜ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.ಬಸದಿಯಲ್ಲಿ 24 ತೀರ್ಥಂಕರರ ಆರಾಧನೆ ಮತ್ತು ವಿಶೇಷ ಪೂಜೆ ನಡೆಯಿತು.ಕಾರ್ಯಕ್ರಮ ನಿರೂಪಿಸಿದ ಶಿಕ್ಷಕ ಧರಣೇಂದ್ರ ಕುಮಾರ್ ಧನ್ಯವಾದವಿತ್ತರು.






