ಬೆಳ್ತಂಗಡಿ: ವಿಮುಕ್ತಿ ಸ್ವ-ಸಹಾಯ ಸಂಘಗಳ ಟ್ರಸ್ಟ್‌ನ ಒಕ್ಕೂಟ ಸಾಮಾನ್ಯ ಸಭೆಯು ಸೆಪ್ಟೆಂಬರ್ 22ರಂದು ವಿಮುಕ್ತಿ ಕಛೇರಿಯಲ್ಲಿ ಬೆಳಿಗ್ಗೆ ನಡೆಯಿತು. ವಿಮುಕ್ತಿ ಸ್ವ-ಸಹಾಯ ಸಂಘಗಳ ಒಕ್ಕೂಟದ ಅಧ್ಯಕ್ಷೆ ಶಾಲಿ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಸಂಸ್ಥೆಯ ನಿರ್ದೇಶಕರಾದ ವಂದನೀಯ ವಿನೋದ್ ಮಸ್ಕರೇನಸ್ ಹಾಗೂ ಸಹ ನಿರ್ದೇಶಕರಾದ ವಂದನೀಯ ರೋಹನ್ ಲೋಬೋ ಉಪಸ್ಥಿತರಿದ್ದರು. ಒಕ್ಕೂಟದ ಕಾರ್ಯದರ್ಶಿ ರೈನಾ ಸರ್ವರನ್ನು ಸ್ವಾಗತಿಸಿ ಹಿಂದಿನ ಒಕ್ಕೂಟ ಸಾಮಾನ್ಯ ಸಭೆಯ ವರದಿಯನ್ನು ವಾಚಿಸಿದರು. ಸಂಸ್ಥೆಯ ಸಿಬ್ಬಂಧಿಗಳು ಘಟಕ ಸಭೆಯ ವಿವರಗಳು, ಒಕ್ಕೂಟ ಸಾಲಗಳು, ಲೆಕ್ಕಪರಿಶೋದನೆ, ವಿದಾಸ್ನೇಹಿ ಯೋಜನೆ, ವಾರ್ಷಿಕ ಲೆಕ್ಕಾಚಾರದ ವಿವರಗಳನ್ನು ನೀಡಿದರು. ನವೆಂಬರ್‌ನಲ್ಲಿ ನಡೆಯಲಿರುವ ಒಕ್ಕೂಟದ ಬೆಳ್ಳಿಹಬ್ಬ ಆಚರಣೆಯ ಬಗ್ಗೆ ಚರ್ಚಿಸಲಾಯಿತು. ನಿರ್ದೇಶಕರಾದ ವಂದನೀಯ ವಿನೋದ್ ಮಸ್ಕರೇನ್ಹಸ್ ಮಾತನಾಡಿ; ಈ ಸಂಸ್ಥೆಯು ಹುಟ್ಟಿಕೊಂಡಿದ್ದೇ ತಾಲೂಕಿನ ಬಡ ಮಹಿಳೆಯರಿಗಾಗಿ. ಆದರೆ ಅದಕ್ಕೆ ಮಾತ್ರ ಸೀಮಿತವಲ್ಲದೆ ಹಲವಾರು ಮಕ್ಕಳಿಗೂ ಆಶ್ರಯವಾಗಿದೆ. ನಮ್ಮ ಸ್ವ-ಸಹಾಯ ಸಂಘ ಕೇವಲ ಸಾಲಕ್ಕಾಗಿ ಅಲ್ಲ, ಪ್ರತಿಯೊಬ್ಬ ಮಹಿಳೆಯರ ಏಳಿಗೆಗಾಗಿ ಶ್ರಮಿಸುತ್ತಿದೆ. ಇನ್ನು ಮುಂದಕ್ಕೆ ಎಲ್ಲರೂ ತಮ್ಮ ಸಂಘಗಳಲ್ಲಿ ಯುವ ಜನರನ್ನು ಸೇರಿಸಿ ಒಕ್ಕೂಟವನ್ನು ಬೆಳೆಸಿ ಎಂದು ಹೇಳಿದರು. ಒಕ್ಕೂಟದ ಅಧ್ಯಕ್ಷೆ ಶಾಲಿ ಮಾತನಾಡಿ; ನವೆಂಬರ್‌ನಲ್ಲಿ ನಡೆಯುವ ಬೆಳ್ಳಿ ಹಬ್ಬದ ಕಾರ್ಯಕ್ರಮಕ್ಕೆ ಎಲ್ಲರೂ ಸಹಕರಿಸಬೇಕಾಗಿ ವಿನಂತಿಸಿದರು. ಕೊನೆಯಲ್ಲಿ ಪ್ರಮೀಳಾ ವಂದಿಸಿದರು.






