‘ಮದ್ಯಪಾನವು ವಿಷ ಮತ್ತು ದೋಷಪೂರ್ಣವಾಗಿದೆ’

‘ಮದ್ಯಪಾನವು ವಿಷ ಮತ್ತು ದೋಷಪೂರ್ಣವಾಗಿದೆ’
Facebook
Twitter
LinkedIn
WhatsApp

ಬೆಳ್ತಂಗಡಿ: ಮೊದಲು ಮನುಷ್ಯ ಮದ್ಯಪಾನ ಸೇವಿಸುತ್ತಾನೆ. ನಂತರ ಮದ್ಯಪಾನ ಮನುಷ್ಯನನ್ನು ಸೇವಿಸುತ್ತದೆ. ಕೊನೆಗೆ ಮದ್ಯಪಾನ ಮದ್ಯಪಾನವನ್ನೇ ಸೇವಿಸುತ್ತದೆ. ಈ ಹಂತಕ್ಕೆ ವ್ಯಸನ ಅನ್ನುತ್ತಾರೆ. ಮದ್ಯಪಾನದ ವ್ಯಸನವು ನಮ್ಮ ಬದ್ಧತೆ ಮತ್ತು ತೀರ್ಮಾನಗಳಲ್ಲಿ ದೋಷವುಂಟು ಮಾಡಿ ಮನಸ್ಸು ಮತ್ತು ಶರೀರಕ್ಕೆ ಅಪಾಯ ತಂದೊಡ್ಡುತ್ತದೆ. ಆದುದರಿಂದ ಮದ್ಯಪಾನವು ವಿಷ ಮತ್ತು ದೋಷಪೂರ್ಣವಾಗಿದೆ. ಇದನ್ನು ಪೂರ್ಣ ಪ್ರಮಾಣದಲ್ಲಿ ತ್ಯಜಿಸುವ ಸಂಕಲ್ಪ ಮಾಡಿಕೊಂಡು ಉತ್ತಮ ಭವಿಷ್ಯವನ್ನು ರೂಪಿಸಿ ಸಮಾಜದಲ್ಲಿ ಮಾದರಿಯಾಗಿ ಬದುಕಬೇಕು ಎಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಶಿಭಿರಾರ್ಥಿಗಳಿಗೆ ಮಾರ್ಗದರ್ಶನ ನೀಡಿ ಆಶೀರ್ವದಿಸಿದರು. ಅವರು ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ವ್ಯಸನಮುಕ್ತಿ ಮತ್ತು ಸಂಶೋಧನಾ ಕೇಂದ್ರದಲ್ಲಿ ನಡೆದ 232ನೇ ವಿಶೇಷ ಮದ್ಯವರ್ಜನ ಶಿಭಿರಕ್ಕೆ ಆಗಮಿಸಿದ 62ಮಂದಿ ಶಿಭಿರಾರ್ಥಿಗಳನ್ನು ಉದ್ದೇಶಿಸಿ ಮಾತನಾಡುತ್ತಿದ್ದರು. ಶಿಭಿರದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಶಿಭಿರಾಧಿಕಾರಿ ದಿನೇಶ್ ಮರಾಠಿ; ಪ್ರಸ್ತುತ ಸಮುದಾಯದಲ್ಲಿ ನಡೆಯುವ ಮದ್ಯವರ್ಜನ ಶಿಭಿರಗಳ ಕುರಿತಾಗಿ ಹಾಗೂ ಶಿಭಿರದ ಶಿಭಿರಾರ್ಥಿಗಳ ಕುರಿತಾದ ಅಂಕಿ ಅಂಶಗಳನ್ನು ವಿವರಿಸಿದರು. ಶಿವಮೊಗ್ಗದ ಶ್ರೀ ರಾಜೇಶ್ ಅನಿಸಿಕೆ ವ್ಯಕ್ತಪಡಿಸಿ; ಕೆಟ್ಟ ಸಹವಾಸದಿಂದ ಭವಿಷ್ಯ ಹಾಳಾಯಿತು. ಜೀವನದಲ್ಲಿ ಹೊಂದಿರುವ ಚಿನ್ನದಂತಹ ಅವಕಾಶಗಳನ್ನು ಕಳೆದುಕೊಳ್ಳಬೇಕಾಯಿತು. ಇನ್ನೇನು ಬೇರೆ ದಾರಿ ಇಲ್ಲ ಎಂಬ ಸ್ಥಿತಿಗೆ ತಲುಪಿದಾದ ನನ್ನನ್ನು ಈ ಶಿಭಿರಕ್ಕೆ ತಂದರು. ಈಗ ಎಲ್ಲಾ ವಿಚಾರದಂತೆ ನೆಮ್ಮದಿಯಲ್ಲಿದ್ದೇನೆ. ಇನ್ನೆಂದಿಗೂ ಕುಡಿಯುವುದಿಲ್ಲ ಎಂದರು. ಶಿಬಿರದಲ್ಲಿ ಡಾ| ಮೋಹನದಾಸ ಗೌಡ, ಡಾ| ಬಾಲಕೃಷ್ಣ ಭಟ್, ಡಾ| ಜೊನಥನ್, ಸುಮನ ಪಿಂಟೋ, ವೈದ್ಯಾಧಿಕಾರಿಗಳಾಗಿ ಹಾಗೂ ಸಲಹೆಗಾರರಾಗಿ ಸಹಕರಿಸಿದರು. ಕಾರ್ಯಸೂಚಿಯಂತೆ ಯೋಗ,ಧ್ಯಾನ, ವ್ಯಾಯಾಮ, ಅನಿಸಿಕೆ, ಆತ್ಮಾವಲೋಕನ, ಗುಂಪು ಚರ್ಚೆ, ಸಲಹೆ, ಕುಟುಂಬದ ದಿನ….. ಹೀಗೆ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಿ ಮನಪರಿವರ್ತನೆಗೆ ಅವಕಾಶ ಮಾಡಿಕೊಡಲಾಯಿತು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕರಾದ ಅನಿಲ್ ಕುಮಾರ್ ಎಸ್.ಎಸ್., ಜನಜಾಗೃತಿ ವೇದಿಕೆಯ ಪ್ರಾದೇಶಿಕ ನಿರ್ದೇಶಕ ವಿವೇಕ್ ವಿ. ಪಾಯ್ಸ್, ಯೋಜನಾಧಿಕಾರಿ ಮಾಧವ ಗೌಡ, ಆರೋಗ್ಯ ಸಹಾಯಕಿ ರಂಜಿತಾ ಸಹಕರಿಸಿದರು. ಮುಂದಿನ ವಿಶೇಷ ಶಿಬಿರವು ಅಕ್ಟೋಬರ್ 7ರಂದು ನಡೆಯಲಿದೆ ಎಂದು ವೇದಿಕೆಯ ಪ್ರಕಟಣೆ ತಿಳಿಸಿದೆ.

Latest 5

Related Posts