ಬೆಳ್ತಂಗಡಿ: ಅಂಗನವಾಡಿ ನೌಕರರಿಗೆ ಕಳೆದ ಜುಲೈ ತಿಂಗಳಿಂದ ವೇತನ ನೀಡದೇ ಸತಾಯಿಸುವ ಕೇಂದ್ರ ಹಾಗೂ ರಾಜ್ಯ ಸರಕಾರಗಳ ನಡೆ ಖಂಡನೀಯ ಹಾಗೂ ಇದು ಮಹಿಳಾ ಶೋಷಣೆಯೋ ಅಲ್ಲ, ಮಹಿಳೆಯರನ್ನು ಜೀತದಾಳುಗಳಂತೆ ದುಡಿಸುವ ಹುನ್ನಾರವೋ ಎಂಬುದನ್ನು ಎರಡೂ ಸರಕಾರಗಳು ಜಂಟಿ ಜವಾಬ್ದಾರಿಯಿಂದ ನಡೆಸುವ ಈ ಐಸಿಡಿಎಸ್ ಯೋಜನೆಯ ಅವ್ಯವಸ್ಥೆಯ ಬಗ್ಗೆ ಉತ್ತರಿಸಬೇಕಿದೆ ಎಂದು ಸಿಐಟಿಯು ಮುಖಂಡ ಬಿ.ಎಂ. ಭಟ್ ಹೇಳಿದರು. ಅಂಗನವಾಡಿ ನೌಕರರ 3 ತಿಂಗಳ ವೇತನ ಬಾಕಿಯನ್ನು ತಕ್ಷಣ ಪಾವತಿಗೆ ಆಗ್ರಹಿಸಿ ಹಾಗೂ ಸರಕಾರ ತನ್ನ ಆದೇಶದಂತೆ ನಿವೃತ್ತರಿಗೆ ನೀಡಬೇಕಾದ ಗ್ರಾಚ್ಯುವಿಟಿಯನ್ನು ತಕ್ಷಣ ಪಾವತಿಸಲು ಆಗ್ರಹಿಸಿ; ಕೆಲವು ಸ್ವತಂತ್ರ ಸಂಘಗಳು ಈ ಗ್ರಾಚ್ಯುವಿಟಿ ಆದೇಶ ಹಿಂಪಡೆಯಬೇಕೆಂಬ ಹೋರಾಟಕ್ಕೆ ಮಣಿಯಬಾರದು ಆಗ್ರಹಿಸಿ, ಎಲ್ಲಾ ಅಂಗನವಾಡಿಗಳಲ್ಲಿ ಸರಕಾರ ತಾನು ಒಪ್ಪಿದಂತೆ ಎಲ್ಕೆಜಿ. ಯುಕೆಜಿ ಶಾಲೆಗಳನ್ನು ಪ್ರಾರಂಭಿಸಬೇಕು ಎಂದು ಒತ್ತಾಯಿಸಿ ಬೆಳ್ತಂಗಡಿ ಸಿಡಿಪಿಓ ಕಚೇರಿ ಎದುರು ಸಾಂಕೇತಿಕ ಪ್ರತಿಭಟನೆ ನಡೆಸಿ ಸಿಡಿಪಿಓ ಮೂಲಕ ಸರಕಾರಕ್ಕೆ ಮನವಿ ನೀಡುವ ಸಂದರ್ಭದಲ್ಲಿ ಅವರು ಈ ವಿಷಯವನ್ನು ತಿಳಿಸಿದರು. ಚುನಾವಣಾ ನೀತಿ ಸಂಹಿತೆಗೆ ಗೌರವ ನೀಡಿ ಪ್ರತಿಭಟನೆ ಬದಲಿಗೆ ಸಂಘದ ಸಮಿತಿ ಸದಸ್ಯರುಗಳು ಬಂದು ಈ ಮನವಿ ನೀಡುತ್ತಿರುವುದಾಗಿದೆ ಎಂದ ಅವರು ಒಂದಲ್ಲ ಕಾರಣ ತಂದಿಟ್ಟು ಹೋರಾಟವನ್ನು ತಡೆಯುವ ಸರಕಾರ ಸಂಬಳ ನೀಡದೆ ದುಡಿಸುವುದಕ್ಕೆ ಯಾವ ಶಿಕ್ಷೆ ನೀಡಬೇಕು? ಎಂದು ಪ್ರಶ್ನಿಸಿದರು. ನಾವು ಕಾನೂನಿಗೆ ಗೌರವ ನೀಡಿ ಈ ಮನವಿ ನೀಡುವುದಕ್ಕೆ ಸೀಮಿತಗೊಳಿಸಿದ್ದೇವಾದರೂ ಸರಕಾರ ಈ ಮಹಿಳಾ ನೌಕರರ ಕಷ್ಟಗಳ ಬಗ್ಗೆ ಗಮನ ನೀಡಬೇಕಾಗಿದೆ ಎಂದರು. ಮಹಿಳಾ ಇಲಾಖೆಯೇ ಮಹಿಳೆಯರ ಶೋಷಣೆ ಮಾಡುತ್ತಿದ್ದರೆ ಸಿಐಟಯು ಮೌನವಾಗಿರಲು ಸಾದ್ಯವಿಲ್ಲ ಎಂದರು.ಈ ಸಂದರ್ಭ ಸಂಘದ ಅದ್ಯಕ್ಷೆ ಗಾಯತ್ರಿ ದೇವಿ ಮುಖಂಡರುಗಳಾದ ಅರುಣ ಬಿ, ಜಯಲಕ್ಷ್ಮಿ, ಅಪ್ಪಿ, ಸಿಐಟಿಯು ಮುಖಮಡರುಗಲಾದ ಈಶ್ವರಿ, ರಾಮಚಂದ್ರ, ಡಿ.ವೈ.ಎಫ್.ಐ. ಮುಖಂಡರಾದ ಅಬಿಷೇಕ್ ಮೊದಲಾದವರು ಇದ್ದರು.






