ಬೆಳ್ತಂಗಡಿ: ಸಿಯೋನ್ ಆಶ್ರಮ ಟ್ರಸ್ಟ್ ಗಂಡಿಬಾಗಿಲು ಇಲ್ಲಿ ಅಕ್ಟೋಬರ್ 2ರಂದು ಮಹಾತ್ಮಾ ಗಾಂಧಿ ಜಯಂತಿ ಹಾಗೂ ಹಿರಿಯ ನಾಗರಿಕರ ದಿನಾಚರಣೆಯನ್ನು ಜಂಟಿಯಾಗಿ ಹಮ್ಮಿಕೊಳ್ಳಲಾಗಿತ್ತು. ರಾಷ್ಟ್ರಪಿತ ಗಾಂಧೀಜಿಯವರ ಪ್ರತಿಮೆಗೆ ಪುಷ್ಪಾರ್ಚನೆ ಮಾಡಿ ಗೌರವ ಸಲ್ಲಿಸಲಾಯಿತು. ಸಭೆಯ ಅಧ್ಯಕ್ಷತೆ ವಹಿಸಿದ ಸಿಯೋನ್ ಆಶ್ರಮದ ಮ್ಯಾನೇಜಿಂಗ್ ಟ್ರಸ್ಟಿ ಡಾ. ಯು.ಸಿ. ಪೌಲೋಸ್ ಮಾತನಾಡಿ; ಗಾಂಧೀಜಿಯವರು ಶಾಂತಿ-ಅಹಿಂಸೆಗಳ ಹರಿಕಾರ, ಸತ್ಯದ ಸರದಾರ. ನಮ್ಮ ರಾಷ್ಟ್ರಪಿತರ ಬದುಕು, ಬೋಧನೆ, ತತ್ವಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳೋಣ ಎಂದರು. ಸಿಯೋನ್ ಅಶ್ರಮದಲ್ಲಿ ಹಿರಿಯ ನಾಗರಿಕರ ದಿನಾಚರಣೆಯನ್ನು ಆಚರಿಸುವ ಪ್ರಾಮುಖ್ಯತೆ ಬಗ್ಗೆ ವಿವರಿಸಿದರು. ಹಿರಿಯರನ್ನು ಗೌರವಿಸಿ, ನೆಮ್ಮದಿಯ ಬದುಕು ಕಲ್ಪಿಸಿಕೊಡುವುದರಿಂದ ಮಾನವ ಜನ್ಮ ಸಾರ್ಥಕವಾಗಿಸಬಹುದು ಎಂದರಲ್ಲದೇ; ಸಿಯೋನ್ ಆಶ್ರಮದಲ್ಲಿ ಯಾವುದೇ ಜಾತಿ-ಮತ, ಬೇಧ-ಭಾವವಿಲ್ಲದೇ ಬೇರೆ ಬೇರೆ ಧರ್ಮದ ಮೂವರು ಹಿರಿಯ ನಾಗರಿಕರನ್ನು ಗುರುತಿಸಿ, ಪ್ರತಿ ವರ್ಷ ಸನ್ಮಾನಿಸಲಾಗುವುದೆಂದು ತಿಳಿಸಿದರು.ಬೆಳ್ತಂಗಡಿ ತಾಲೂಕಿನ ಹಿರಿಯನಾಗರಿಕರಾದ ಮಾಲಾಡಿ ಗ್ರಾಮದ ಕೋಡಿಯೇಲು ಬಸವನಗುಡಿ ನಿವಾಸಿ ಪದ್ಮನಾಭ ಸಾಲಿಯಾನ್, ಮೆಲಂತಬೆಟ್ಟು ಗ್ರಾಮದ ಕಲ್ಕಣಿಬೈಲು ನಿವಾಸಿ ಫೆಲಿಸಿಟಾಸ್ ಮೊರಿಸ್, ಚಾರ್ಮಾಡಿ ಗ್ರಾಮದ ಗೋಳಿಕಟ್ಟೆ ನಿವಾಸಿ ಹಸನಬ್ಬರನ್ನು ಪ್ರಮಾಣ ಪತ್ರ, ಫಲಪುಷ್ಪಗಳೊಂದಿಗೆ, ಪೇಟಾ ಶಾಲು ಹೊದಿಸಿ ಸನ್ಮಾನಿಸಲಾಯಿತು. ಸನ್ಮಾನಿಸಲ್ಪಟ್ಟ ಹಿರಿಯ ನಾಗರಿಕರು ತಮ್ಮ ಮನದಾಳದ ಮಾತುಗಳನ್ನು ಹಂಚಿಕೊಂಡರು. ಟ್ರಸ್ಟ್‌ನ ಸದಸ್ಯರಾದ ಮೇರಿ ಯು.ಪಿ., ಸಂಸ್ಥೆಯ ವೈದ್ಯರಾದ ಡಾ| ಶಿವಾನಂದ ಸ್ವಾಮಿ, ಆಶ್ರಮನಿವಾಸಿಗಳಾದ ರಾಮಚಂದ್ರ ಭಂಡಾರಿ ಮತ್ತು ಗೀತಾಕಾಮತ್ ವೇದಿಕೆಯನ್ನಲಂಕರಿಸಿದ್ದರು.ವಿಶ್ವ ಹಿರಿಯ ನಾಗರಿಕರ ದಿನಾಚರಣೆ ಪ್ರಯುಕ್ತ ಸೆಪ್ಟೆಂಬರ್ 10ರಂದು ಮಂಗಳೂರಿನಲ್ಲಿ ನಡೆದ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಹಿರಿಯ ನಾಗರಿಕರ ಕ್ರೀಡಾಕೂಟದಲ್ಲಿ ಸಿಯೋನ್ ಆಶ್ರಮದ 6ಮಂದಿ ಫಲಾನುಭವಿಗಳು ಭಾಗವಹಿಸಿ ವಿಜೇತರಾಗಿದ್ದು, ಅವರೆಲ್ಲರನ್ನು ಬಹುಮಾನ ನೀಡಿ ಸಮ್ಮಾನಿಸಲಾಯಿತು. ಸಿಯೋನ್ ಆಶ್ರಮದಲ್ಲಿ ಹಿರಿಯ ನಾಗರಿಕ ನಿವಾಸಿಗಳಿಗೆ ಒಳಾಂಗಣ ಆಟಗಳನ್ನು ಏರ್ಪಡಿಸಲಾಗಿದ್ದು, ಇದರಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಸಿಯೋನ್ ಆಶ್ರಮದ ಆಡಳಿತಮಂಡಳಿಯವರು, ಸಿಬ್ಬಂದಿವರ್ಗದವರು ಹಾಗೂ ಆಶ್ರಮ ನಿವಾಸಿಗಳೆಲ್ಲರೂ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಸಿಬ್ಬಂದಿಯವರಾದ ಸಿಂಧು ವಿ.ಎಂ. ಸ್ವಾಗತಿಸಿದರು. ಸಿಬ್ಬಂದಿ ದಿನವತಿ ಕಾರ್ಯಕ್ರಮ ನಿರೂಪಿಸಿದರು.






