ಬೆಳ್ತಂಗಡಿ: ವಿದ್ಯಾವಂತರು ವಿಚಾರವಂತರಾಗುವುದರೊಂದಿಗೆ ಆಚಾರವಂತರೂ ಆಗಬೇಕು. ಆಗ ಮಾತ್ರ ಕಲಿತ ವಿದ್ಯೆಗೆ ವಿಶೇಷ ಮಾನ್ಯತೆ, ಗೌರವ ಸಿಗುತ್ತದೆ ಎಂದು ಉಜಿರೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಧರ್ಮಸ್ಥಳದ ಡಿ. ಹರ್ಷೇಂದ್ರ ಕುಮಾರ್ ಹೇಳಿದರು.ಅವರು ಅಕ್ಟೋಬರ್ 5ರಂದು ಉಜಿರೆಯ ಇಂದ್ರಪ್ರಸ್ಥ ಸಭಾಂಗಣದಲ್ಲಿ ನಡೆದ ಉಜಿರೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಘಟಕದ ಸುವರ್ಣ ಮಹೋತ್ಸವ ಸಂಭ್ರಮಾಚರಣೆಯ ಸಂದರ್ಭ ಸುವರ್ಣಸಮ್ಮಿಲನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.ವಿದ್ಯಾರ್ಥಿಗಳ ಪ್ರತಿಭೆ, ಶಕ್ತಿ-ಸಾಮರ್ಥ್ಯ ಮತ್ತು ಉತ್ಸಾಹ ಸದುಪಯೋಗ ಮಾಡಿ ಶಿಸ್ತು, ಸಮಯಪಾಲನೆಯೊಂದಿಗೆ ಉತ್ತಮ ಸಂಸ್ಕಾರ ನೀಡಿ ವ್ಯಕ್ತಿತ್ವ ವಿಕಸನ ಮಾಡುವುದೇ ರಾಷ್ಟ್ರೀಯ ಸೇವಾ ಯೋಜನೆಯ ಉದ್ದೇಶವಾಗಿದೆ. ಗ್ರಾಮೀಣ ಪ್ರದೇಶಗಳಲ್ಲಿ ವಿಶೇಷ ಶಿಬಿರಗಳನ್ನು ಆಯೋಜಿಸಿ ಸ್ಥಳೀಯರ ಸಮಸ್ಯೆಗಳು, ಸವಾಲುಗಳನ್ನು ತಿಳಿದುಕೊಂಡು ಅವರಿಗೆ ನೆರವು ನೀಡಿ ನಾಗರಿಕ ಪ್ರಜ್ಞೆಯೊಂದಿಗೆ ಸೇವಾ ಮನೋಭಾವ ಹಾಗೂ ಸಾಮಾಜಿಕ ಸಾಮರಸ್ಯ ಬೆಳೆಸಲು ರಾಷ್ಟ್ರೀಯ ಸೇವಾ ಯೋಜನೆ ಸಹಕಾರಿಯಾಗಿದೆ ಎಂದ ಹರ್ಷೇಂದ್ರ ಕುಮಾರ್; ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಘಟಕದ ಸೇವೆ-ಸಾಧನೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಅಭಿನಂದಿಸಿದರು.ರಾಜ್ಯದ ರಾಷ್ಟ್ರೀಯ ಸೇವಾ ಯೋಜನಾಧಿಕಾರಿ ಡಾ. ಪ್ರತಾಪ್ ಲಿಂಗಯ್ಯ ಶುಭಾಶಂಸನೆ ಮಾಡಿ; ಸ್ವಯಂ ಸೇವಕರು ಮೌಲ್ಯಾಧಾರಿತ ಶಿಕ್ಷಣದೊಂದಿಗೆ ಜೀವನಪರ್ಯಂತ ಸೇವಾ ಮನೋಭಾವ ಮೈಗೂಡಿಸಿಕೊಂಡು ಸೃಜನಾತ್ಮಕ ಚಟುವಟಿಕೆಗಳಲ್ಲಿ ತೊಡಗಿ ಜವಾಬ್ಧಾರಿಯುತ ನಾಗರಿಕರಾಗಿ ಸಾರ್ಥಕ ಜೀವನ ನಡೆಸಬೇಕು ಎಂದು ಸಲಹೆ ನೀಡಿದರು.ದೇಶದಲ್ಲಿ 45 ಲಕ್ಷಕ್ಕೂ ಮಿಕ್ಕಿ ರಾಷ್ಟ್ರೀಯ ಸೇವಾ ಯೋಜನೆಯ ಸ್ವಯಂಸೇವಕರಿದ್ದು ರಾಜ್ಯದಲ್ಲಿ ಆರು ಲಕ್ಷ ಸ್ವಯಂ ಸೇವಕರಿದ್ದಾರೆ. ಅಲ್ಲಲ್ಲಿ ನಡೆಯುತ್ತಿರುವ ಕೊಲೆ, ಆತ್ಮಹತ್ಯೆ, ಹಿಂಸೆ, ವರದಕ್ಷಿಣೆ ಪಿಡುಗು, ಮದ್ಯಪಾನ ಮೊದಲಾದ ದುಶ್ಚಟಗಳನ್ನು ತಡೆಯಲು ಸ್ವಯಂಸೇವಕರು ಪ್ರಯತ್ನಿಸಬೇಕು. ಜವಾಬ್ಧಾರಿಯುತ ಸೇವೆಯ ರಾಯಭಾರಿಗಳಾಗಿ ಸಮಾಜಸೇವೆ ಮಾಡಬೇಕು ಎಂದು ಅವರು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಘಟಕ ದೇಶಕ್ಕೆ ಹಾಗೂ ರಾಜ್ಯಕ್ಕೆ ಮಾದರಿಯಾಗಿದೆ ಎಂದು ಹೇಳಿ ಅಭಿನಂದಿಸಿದರು.ಮAಗಳೂರು ವಿಶ್ವವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆ ಸಂಯೋಜಕ ಡಾ. ಶೇಷಪ್ಪ ಅಮೀನ್ ಮಾತನಾಡಿ; ಉಡುಪಿ ಮತ್ತು ದಕ್ಷಿಣಕನ್ನಡ ಜಿಲ್ಲೆಯಲ್ಲಿ 106 ಕಾಲೇಜುಗಳಲ್ಲಿ ರಾಷ್ಟ್ರೀಯ ಸೇವಾ ಯೋಜನೆಯ ಘಟಕಗಳಿದ್ದು ಪ್ರತಿಯೊಂದು ಘಟಕ ಕೂಡಾ ಒಂದು ಗ್ರಾಮವನ್ನು ದತ್ತು ತೆಗೆದುಕೊಂಡು ಸರ್ವತೋಮುಖ ಅಭಿವೃದ್ಧಿಗೆ ಸಹಕರಿಸಬೇಕು ಎಂದು ಹೇಳಿದರು.ಹಿರಿಯ ರಾಷ್ಟ್ರೀಯ ಸೇವಾ ಯೋಜನೆ ಅಧಿಕಾರಿಗಳನ್ನು ಮತ್ತು ಸ್ವಯಂಸೇವಕರನ್ನು ಗೌರವಿಸಲಾಯಿತು.ರವಿ ಕಟಪಾಡಿ ಮತ್ತು ಉಜಿರೆಯ ಮೋಹನ್ ಕುಮಾರ್ ‘ಲಕ್ಷ್ಮೀ’ ಅವರ ವಿಶೇಷ ಸೇವೆಯನ್ನು ಗುರುತಿಸಿ, ಅವರಿಗೆ ‘ಸುವರ್ಣ ಸೇವಾರತ್ನ’ ಪುರಸ್ಕಾರ ನೀಡಿ ಗೌರವಿಸಲಾಯಿತು.ಅಧ್ಯಕ್ಷತೆ ವಹಿಸಿದ ಕಾಲೇಜಿನ ಪ್ರಾಂಶುಪಾಲ ಪ್ರೊ. ಬಿ.ಎ. ಕುಮಾರ ಹೆಗ್ಡೆ ಮಾತನಾಡಿ; ‘ನನಗಲ್ಲ, ನಿನಗೆ’ ಎಂಬ ಉತ್ಕೃಷ್ಟ ಧ್ಯೇಯದೊಂದಿಗೆ ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ಮಾಡುವ ಕಾಯಕವೇ ಸೇವೆ ಆಗಿದೆ. ಸ್ವಚ್ಛತೆ, ಪರಿಸರ ಸಂರಕ್ಷಣೆ, ರಕ್ತದಾನ ಶಿಬಿರ, ಮೊದಲಾದ ಸೇವಾ ಕಾರ್ಯಗಳ ಮೂಲಕ ಸ್ವಯಂ ಸೇವಕರ ತ್ಯಾಗ ಮನೋಭಾವದ ಸೇವೆಯಿಂದ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಘಟಕಕ್ಕೆ 36 ರಾಜ್ಯಮಟ್ಟದ ಹಾಗೂ ರಾಷ್ಟ್ರಮಟ್ಟದ ಪ್ರಶಸ್ತಿಗಳು ದೊರಕಿವೆ ಎಂದು ಸಂತಸ ವ್ಯಕ್ತಪಡಿಸಿದರು.ಕಾಲೇಜಿನ ಮೂಲಭೂತ ಸೌಕರ್ಯಗಳಿಗಾಗಿ ಐದು ಕೋಟಿ ರೂಪಾಯಿ ಅನುದಾನ ನೀಡಿರುವ ಆಡಳಿತ ಮಂಡಳಿಯನ್ನು ಅವರು ಅಭಿನಂದಿಸಿದರು.’ಸೇವಾಪಥ’ ಸ್ಮರಣಸಂಚಿಕೆ ಬಿಡುಗಡೆಗೊಳಿಸಲಾಯಿತು. ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ. ಎಸ್. ಸತೀಶ್ಚಂದ್ರ, ಸ್ವಯಂ ಸೇವಕರಾದ ನಿಕ್ಷಿತ್ ಮತ್ತು ಕುಮಾರಿ ದೀಪಾ ಉಪಸ್ಥಿತರಿದ್ದರು.ರಾಷ್ಟ್ರೀಯ ಸೇವಾ ಯೋಜನಾಧಿಕಾರಿ ಪ್ರೊ. ಮಹೇಶ್ ಕುಮಾರ್ ಶೆಟ್ಟಿ ಸ್ವಾಗತಿಸಿದರು. ಯೋಜನಾಧಿಕಾರಿ ಪ್ರೊ. ದೀಪಾ, ಆರ್.ಪಿ. ವಂದಿಸಿದರು.ಉಪನ್ಯಾಸಕ ದೀಕ್ಷಿತ್ ರೈ ಮತ್ತು ಸಿಂಚನ ಕಲ್ಲೂರಾಯ ಕಾರ್ಯಕ್ರಮ ನಿರೂಪಿಸಿದರು.






