ಬೆಳ್ತಂಗಡಿ: ಮದ್ಯಪಾನದಂತಹ ವ್ಯಸನದಿಂದ ವ್ಯಕ್ತಿ ತನ್ನ ವ್ಯಕ್ತಿತ್ವವನ್ನೇ ಕಳೆದುಕೊಳ್ಳುತ್ತಾನೆ. ಆ ಮೂಲಕ ಸಮಾಜದಲ್ಲಿ ತನ್ನ ಹಾಗೂ ತನ್ನ ಕುಟುಂಬಿಕರ ಗೌರವಕ್ಕೆ ಕುತ್ತು ತರುತ್ತಾನೆ. ಪಂಚೇಂದ್ರಿಯಗಳನ್ನು ಹತೋಟಿಯಲ್ಲಿರಿಸಿ, ದುರ್ಜನರ ಸಂಘದಿಂದ ದೂರವಿದ್ದು, ಸಜ್ಜನರ ಸಹವಾಸ ಮಾಡಿ ಉತ್ತಮ ಬದುಕು ಕಟ್ಟಿಕೊಳ್ಳಬೇಕು. ದುಶ್ಚಟಗಳು ಕ್ರಿಮಿನಲ್ ಕೃತ್ಯಗಳಿಗೂ ಪ್ರೇರಣೆ ನೀಡುತ್ತದೆ ಎಂಬ ಬಗ್ಗೆ ಎಚ್ಚರ ಅಗತ್ಯ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಸಲಹೆ ನೀಡಿದರು.ಅವರು ಮದ್ಯವರ್ಜನ ಶಿಬಿರ ವ್ಯವಸ್ಥಾಪನಾ ಸಮಿತಿ ಬೆಳಾಲು ಇದರ ಆಶ್ರಯದಲ್ಲಿ; ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್, ಧರ್ಮಸ್ಥಳ ಮಂಜುನಾಥೇಶ್ವರ ವ್ಯಸನ ಮುಕ್ತಿ ಮತ್ತು ಸಂಶೋಧನ ಕೇಂದ್ರ ಲಾಯ್ಲ, ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿ ಬೆಂಗಳೂರು ಇವರೆಲ್ಲರ ಸಹಭಾಗಿತ್ವದಲ್ಲಿ ಬೆಳಾಲು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರಪ್ರೌಢ ಶಾಲೆಯಲ್ಲಿ ಅಕ್ಟೋಬರ್ 4ರಿಂದ 11ರವರೆಗೆ ನಡೆಯುತ್ತಿರುವ 1867ನೇ ಮದ್ಯವರ್ಜನ ಶಿಬಿರದಕ್ಕೆ ಅಕ್ಟೋಬರ್ 8ರಂದು ಭೇಟಿ ನೀಡಿ, ಶಿಬಿರಾರ್ಥಿಗಳನ್ನು ಉದ್ಧೇಶಿಸಿ ಮಾರ್ಗದರ್ಶನ ನೀಡುತ್ತಿದ್ದರು.ಪರಿವರ್ತನೆ ಜಗದ ನಿಯಮ. ಒಮ್ಮೆ ದುಶ್ಚಟಕ್ಕೆ ಬಲಿಯಾದವರು ಶಿಬಿರದ ಮೂಲಕ ವ್ಯಸನಮುಕ್ತರಾಗಿ ಹೊರಬಂದ ನಂತರ ಕುಟುಂಬಿಕರೊಂದಿಗೆ ನವಜೀವನ ನಡೆಸಬೇಕು. ದುರ್ಜನರ ಸಹವಾಸ ಮಾಡಬಾರದು. ಬದುಕಲ್ಲಿ ಹಾದಿ ತಪ್ಪಿಸುವ ಹಿತಶತ್ರುಗಳ ಬಗ್ಗೆ ಎಚ್ಚರಿಕೆಯಿಂದ ಇರಬೇಕು ಎಂದು ಡಾ. ಹೆಗ್ಗಡೆ ಶಿಬಿರಾರ್ಥಿಗಳಿಗೆ ಕಿವಿಮಾತು ಹೇಳಿದರು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅನಿಲ್ ಕುಮಾರ್ ಎಸ್.ಎಸ್., ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಸ್ಥಾಪಕಾಧ್ಯಕ್ಷ ವಸಂತ್ ಸಾಲಿಯಾನ್, ಜಿಲ್ಲಾಧ್ಯಕ್ಷ ಪದ್ಮನಾಭ ಶೆಟ್ಟಿ, ಯೋಜನೆ ಉಡುಪಿ ಪ್ರಾದೇಶಿಕ ನಿರ್ದೇಶಕ ದುಗ್ಗೇ ಗೌಡ, ಪ್ರಾದೇಶಿಕ ನಿರ್ದೇಶಕ ವಿವೇಕ್ ವಿನ್ಸೆಂಟ್ ಪಾಯ್ಸ್, ಬೆಳಾಲು ಗ್ರಾಮ ಪಂಚಾಯತ್ ಅಧ್ಯಕ್ಷೆ ವಿದ್ಯಾ ಶ್ರೀನಿವಾಸ್, ಶಿಬಿರದ ವ್ಯವಸ್ಥಾಪನ ಸಮಿತಿ ಗೌರವಾಧ್ಯಕ್ಷ ಜತ್ತನ್ನ ಗೌಡ, ಬೆಳ್ತಂಗಡಿ ತಾಲೂಕು ಜನಜಾಗೃತಿ ವೇದಿಕೆ ಅಧ್ಯಕ್ಷ ಕಾಸಿಂ ಮಲ್ಲಿಗೆ ಮನೆ, ವೇದಿಕೆ ಮಾಜಿ ಅಧ್ಯಕ್ಷರಾದ ತಿಮ್ಮಪ್ಪ ಗೌಡ ಬೆಳಾಲು, ಶಾರದಾ ಆರ್ ರೈ, ವೆಂಕಟರಾಯ ಅಡೂರು, ಬೆಳ್ತಂಗಡಿ ಕೇಂದ್ರ ಸಮಿತಿ ಅಧ್ಯಕ್ಷ ಸೀತಾರಾಂ ಆರ್., ಸಿಯೋನ್ ಆಶ್ರಮದ ಆಡಳಿತ ಟ್ರಸ್ಟಿ ಯು.ಸಿ. ಪೌಲೋಸ್ ಉಪಸ್ಥಿತರಿದ್ದರು.ಶಿಬಿರಾಧಿಕಾರಿ ದೇವಿಪ್ರಸಾದ್ ಅತ್ಯಂತ ಸುಂದರವಾಗಿ ಶಿಬಿರದ ವರದಿಯನ್ನು ಸಭೆಯ ಮುಂದಿರಿಸಿ, ಧರ್ಮಾಧಿಕಾರಿ ಡಾ. ಹೆಗ್ಗಡೆಯವರ ಮೆಚ್ಚುಗೆಗೂ ಪಾತ್ರರಾದರು. ವ್ಯಸನ ಮುಕ್ತರಾದ ಆದಂಖಾನ್, ಗಣೇಶ್ ಗೌಡ ಅನಿಸಿಕೆ ವ್ಯಕ್ತಪಡಿಸಿದರು.76 ಶಿಬಿರಾರ್ಥಿಗಳು ಶಿಬಿರದಲ್ಲಿ ಪಾಲ್ಗೊಂಡರು.ಅಧ್ಯಕ್ಷತೆ ವಹಿಸಿದ್ದ ಬೆಳಾಲು 1867 ನೇ ಮದ್ಯವರ್ಜನ ಶಿಬಿರದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಶ್ರೀನಿವಾಸ ಗೌಡ ಸ್ವಾಗತಿಸಿದರು. ಯೋಜನಾಧಿಕಾರಿ ಸುರೇಂದ್ರ ಕುಮಾರ್ ವಂದಿಸಿದರು. ಯೋಜನೆಯ ಕೃಷಿ ಅಧಿಕಾರಿ ರಾಮ್ ಕುಮಾರ್ ಕಾರ್ಯಕ್ರಮ ನಿರೂಪಿಸಿದರು.






