ಬೆಳ್ತಂಗಡಿ: ಉಜಿರೆ ಶ್ರೀ ಮಹಮ್ಮಾಯಿ (ಮಾರಿಗುಡಿ) ದೇವಸ್ಥಾನದಲ್ಲಿ ಅಕ್ಟೋಬರ್ 3ರಿಂದ ಮೊದಲ್ಗೊಂಡು ಅಕ್ಟೋಬರ್ 11 ಮಹಾನವಮಿ ಪರ್ಯಂತ ಪ್ರತಿ ರಾತ್ರಿ ವಿವಿಧ ತಂಡಗಳಿಂದ ಭಜನೆ ಹಾಗೂ ಸೇವಾರ್ಥಿಗಳಿಂದ ವಿಶೇಷ ರಂಗ ಪೂಜೆ ನಡೆಯಿತು. ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರ ಶರತ್‌ಕೃಷ್ಣ ಪಡುವೆಟ್ಣಾಯರ ನೇತೃತ್ವದಲ್ಲಿ ದೇವಸ್ಥಾನವನ್ನು ವಿಶೇಷವಾಗಿ ಪುಷ್ಪಾಲಂಕಾರ ಮತ್ತು ವಿದ್ದ್ಯುದ್ದೀಪಗಳಿಂದ ಶೃಂಗರಿಸಲಾಗಿತ್ತು. ಅಕ್ಟೋಬರ್ 11 ರಂದು ಶುಕ್ರವಾರ ರಾತ್ರಿ ಉಜಿರೆಯ ಕನಸಿನ ಮನೆ ಲಕ್ಷ್ಮಿ ಗ್ರೂಪ್ ಮಾಲಕರಾದ ಬದುಕು ಕಟ್ಟೋಣ ಬನ್ನಿ ತಂಡದ ಸಂಚಾಲಕ ಕೆ. ಮೋಹನ ಕುಮಾರ್ ಅವರ ವತಿಯಿಂದ ವಿಶೇಷ ಪುಷ್ಪಾಲಂಕಾರ ಸಹಿತ ರಂಗಪೂಜೆ ನಡೆಯಿತು. ಮೇಘನಾಥ ಸಾಲಿಗ್ರಾಮ ಮತ್ತು ತಂಡದವರಿಂದ ಸ್ಯಾಕ್ಸೋಫೋನ್ ವಾದನ ಮತ್ತು ಧರ್ಮಸ್ಥಳದ ಕುಡುಮಶ್ರೀ ತಂಡದಿಂದ ಹುಲಿ ಕುಣಿತ ವಿಶೇಷ ಆಕರ್ಷಣೆಯಾಗಿತ್ತು . ಪರಿಸರದ ಸಹಸ್ರಾರು ಭಕ್ತಾದಿಗಳು ಮಹೋತ್ಸವದಲ್ಲಿ ಭಾಗವಹಿಸಿ ಪ್ರಸಾದ ಸ್ವೀಕರಸಿದರು. ಪರಾರಿ ವೆಂಕಟ್ರಮಣ ಹೆಬ್ಬಾರ್ ರಂಗಪೂಜೆಯ ನಿರ್ವಹಣೆಯ ಉಸ್ತುವಾರಿ ವಹಿಸಿ, ಸ್ವಯಂಸೇವಕರು ಭಕ್ತರಿಗೆ ದೇವರ ದರ್ಶನ ಹಾಗೂ ಪ್ರಸಾದ ವಿತರಣೆಯಲ್ಲಿ ಸಹಕರಿಸಿದರು. ತಿಮ್ಮಯ್ಯ ನಾಯ್ಕ್ ಕಾರ್ಯಕ್ರಮ ನಿರೂಪಿಸಿದರು.






