ಬೆಳ್ತಂಗಡಿ: ದೇವರ ನಾಮಸ್ಮರಣೆಗೆ ಸೋಲೇ ಇಲ್ಲ; ಬದುಕಿನಲ್ಲಿ ಎಲ್ಲವೂ ಗೆಲುವೇ. ಆದ್ದರಿಂದ ಇಲ್ಲಿ ಏರ್ಪಡಿಸಿದ ಜಿನಭಜನಾ ಸ್ಪರ್ಧೆಯಲ್ಲಿ ಎಲ್ಲರೂ ಶ್ರದ್ಧೆಯಿಂದ ಭಾಗವಹಿಸಿ; ಸ್ಪರ್ಧೆಯಲ್ಲಿ ಒಂದು ತಂಡ ಗೆಲ್ಲಬಹುದು; ಉಳಿದ ತಂಡಗಳಿಗೆ ಅದು ಮುಂದಿನ ಸ್ಪರ್ಧೆಗೆ ಸಿದ್ಧತೆಗೆ ವೇದಿಕೆಯಾದಂತೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಹೇಳಿದರು.ಅವರು ನವೆಂಬರ್ 24ರಂದು ಬೆಳ್ತಂಗಡಿಯ ಶ್ರೀ ಮಂಜುನಾಥಸ್ವಾಮಿ ಕಲಾಭವನದಲ್ಲಿ ನಡೆದ ಮಂಗಳೂರು ವಿಭಾಗ ಮಟ್ಟದ ಜಿನಭಜನಾ ಸ್ಪರ್ಧೆಯನ್ನು ತಂತ್ರಜ್ಞಾನ ಮತ್ತು ದೀಪ ಪ್ರಜ್ವಲನೆಯ ಮೂಲಕ ಉದ್ಘಾಟಿಸಿ ಮಾತನಾಡುತ್ತಿದ್ದರು.ಭಜನಾ ಸ್ಪರ್ಧೆಗೆ ಉತ್ತಮ ಸಾಹಿತ್ಯ ಮತ್ತು ಸಂಗೀತದ ಜ್ಞಾನ ಮುಖ್ಯ. ಸಾಹಿತ್ಯದ ಮೂಲಕ ಭಗವಂತನನ್ನು ಕಾಣಲು ಭಜನೆ ಅಂತರಾತ್ಮದ ಕೂಗಾಗಬೇಕು ಎಂದ ಡಾ. ಹೆಗ್ಗಡೆ ಸಾಹಿತ್ಯದ ಮೂಲಕ ಸಂಗೀತಕ್ಕೆ ಶಕ್ತಿ ಬರುತ್ತದೆ. ಧರ್ಮದ ಹಾದಿಯಲ್ಲಿ ನಡೆಯಲು ಭಜನೆ ಉತ್ತಮ ಮಾರ್ಗ. ಸಹಜವಾದ ಧಾರ್ಮಿಕ ಪ್ರಕ್ರಿಯೆ ಆಚರಣೆಗೆ ಕಷ್ಟವಾಗದು. ಮಕ್ಕಳಿಗೆ ತಾಯಂದಿರು ಎಳವೆಯಲ್ಲಿಯೇ ಉತ್ತಮ ಸಂಸ್ಕಾರ ನೀಡಬೇಕು. ನಾವು ಧರಿಸುವ ಜನಿವಾರ ತಪ್ಪು ಎಸಗದಂತೆ ಹಾಕಿದ ಮೂಗುದಾರ ಎಂದು ಅಭಿಪ್ರಾಯಿಸಿದರು.ಉದ್ಘಾಟನಾ ಸಮಾರಂಭದಲ್ಲಿ ಡಾ. ವೀರೇಂದ್ರ ಹೆಗ್ಗಡೆಯವರನ್ನು ಜೈನ್ ಮಿಲನ್ ವತಿಯಿಂದ ಸಮ್ಮಾನಿಸಿ, ಆತ್ಮೀಯವಾಗಿ ಹುಟ್ಟುಹಬ್ಬದ ಶುಭಾಶಯಗಳನ್ನು ತಿಳಿಸಲಾಯಿತು. ಬೆಳ್ತಂಗಡಿ ಜೈನ್ ಮಿಲನ್ ಅಧ್ಯಕ್ಷ ಉಜಿರೆಯ ಡಾ. ನವೀನ್ ಕುಮಾರ್ ಜೈನ್‌ರ ಅಧ್ಯಕ್ಷತೆಯಲ್ಲಿ ನಡೆದ ಈ ಉದ್ಘಾಟನಾ ಸಮಾರಂಭದಲ್ಲಿ ಪಡ್ಯಾರಬೆಟ್ಟ ಕೊಡಮಣಿತ್ತಾಯ ಮೂಲಕ್ಷೇತ್ರದ ಆಡಳಿತ ಮೊಕ್ತೇಸರರಾದ ಜೀವಂದರ್ ಕುಮಾರ್, ಭಾರತೀಯ ಜೈನ್ ಮಿಲನ್ ವಲಯ-8ರ ಉಪಾಧ್ಯಕ್ಷ ಪ್ರಸನ್ನ ಕುಮಾರ್, ವೇಣೂರು ದಿಗಂಬರ ಜೈನ ತೀರ್ಥಕ್ಷೇತ್ರ ಸಮಿತಿಯ ಕಾರ್ಯದರ್ಶಿ ಪ್ರವೀಣ್ ಕುಮಾರ್ ಇಂದ್ರ, ಗುರುವಾಯನಕೆರೆ ಎಕ್ಸೆಲ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಸುಮಂತ್ ಕುಮಾರ್ ಜೈನ್ ವಿಶೇಷ ಅತಿಥಿಗಳಾಗಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾರ್ಯಕ್ರಮ ಸಂಘಟಕರಾದ ಅನಿತಾ ಸುರೇಂದ್ರ ಕುಮಾರ್, ಸೋನಿಯಾ ವರ್ಮಾ, ಯುವರಾಜ ಭಂಡಾರಿ ಮೈಸೂರು, ಸೋಮಶೇಖರ್ ಶೆಟ್ಟಿ ಉಜಿರೆ, ಸುದರ್ಶನ್ ಜೈನ್, ಸುಭಾಶ್ಚಂದ್ರ ಜೈನ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ದಿವ್ಯಾ ಕುಮಾರಿ ನಿರೂಪಿಸಿದ ಕಾರ್ಯಕ್ರಮದಲ್ಲಿ ಪ್ರಾರ್ಥನೆಯಾಗಿ ಸಾಮೂಹಿಕ ಣಮೋಕಾರ ಮಂತ್ರ ಪಠಿಸಲಾಯಿತು. ಪ್ರಸ್ತಾವಿಕ ನುಡಿಗಳೊಂದಿಗೆ ಸುದರ್ಶನ್ ಜೈನ್ ಸ್ವಾಗತಿಸಿದರು. ಸೋಮಶೇಖರ್ ಶೆಟ್ಟಿ ವಂದಿಸಿದರು.






