ಬೆಳ್ತಂಗಡಿ: ವಿಶಾಲ ಮನೋ ಹೃದಯದ ಪರಿಪೂರ್ಣತೆ ಹೊಂದಿದ ವ್ಯಕ್ತಿ ಪದ್ಮನಾಭ ಮಾಣಿಂಜ. ತನ್ನ ಜೀವಿತದ ಅಮೂಲ್ಯ ಸಮಯವನ್ನು ಸಮಾಜಕ್ಕೆ ನೀಡಿದವರು. ಅವರು ಜೀವಿತದಲ್ಲಿ ರಾಜರ್ಷಿಯಾಗಿದ್ದು, ಅವರ ಜೀವಿತ ಶೈಲಿ ಸಮಾಜಕ್ಕೆ ಸದಾ ಆದರ್ಶವಾದುದು ಎಂದು ಬೆಂಗಳೂರು ಸೋಲೂರು ಆರ್ಯ ಈಡಿಗ ಮಹಾಸಂಸ್ಥಾನ ಮಠದ ಪೀಠಾಧಿಪತಿ ಶ್ರೀ ವಿಖ್ಯಾತನಂದ ಸ್ವಾಮೀಜಿ ಹೇಳಿದರು.ಅವರು ಬೆಳ್ತಂಗಡಿ ಶ್ರೀ ಗುರುದೇವ ವಿವಿಧೋದ್ದೇಶ ಸಹಕಾರಿ ಸಂಘದಲ್ಲಿ 14 ವರ್ಷ ಅಧ್ಯಕ್ಷರಾಗಿ, ಸಂಘದ 25 ಶಾಖೆಗಳ ರೂವಾರಿ ಈಚೆಗೆ ನಿಧನರಾದ ಎನ್. ಪದ್ಮನಾಭ ಮಾಣಿಂಜರಿಗೆ ಬೆಳ್ತಂಗಡಿ ಶ್ರೀ ಗುರುದೇವ ವಿವಿಧೋದ್ದೇಶ ಸಹಕಾರ ಸಂಘದ ವತಿಯಿಂದ ಸಹಕಾರ ಸಂಘದ ಕೇಂದ್ರ ಕಚೇರಿಯಲ್ಲಿರುವ ಶ್ರೀ ಗುರು ಸಾನಿಧ್ಯ ಸಭಾಭವನದಲ್ಲಿ ಮಾರ್ಚ್ 15ರಂದು ನಡೆದ ನುಡಿನಮನ – ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.ಸಮಾಜದ ಬಗೆಗೆ ಅಪಾರ ಚಿಂತನೆ ಇದ್ದವರು ಅವರು. ದುಃಖಗಳು ಬಂದಾಗ ಅದರ ಬಗ್ಗೆ ಹೆಚ್ಚು ಚಿಂತಿಸದೆ ಮರೆತು ಬಿಡುವ ಮನಸ್ಸು ಅವರದಾಗಿತ್ತು. ಸಹಕಾರ ಸಂಘವೊಂದನ್ನು ಕೇವಲ ಆರ್ಥಿಕ ವ್ಯವಹಾರ ಮಾತ್ರವಲ್ಲದೆ ಸಮಾಜಮುಖಿಯಾಗಿ ಬೆಳೆಸಬೇಕು ಎಂದು ಚಿಂತಿಸಿ ಆ ಚಿಂತನೆಯನ್ನು ನಿಜವಾದ ಅರ್ಥದಲ್ಲಿ ಕಾರ್ಯ ರೂಪಕ್ಕೆ ತಂದವರು ಅವರು ಎಂದು ಸ್ವಾಮೀಜಿ ಅಗಲಿದ ಮಾಣಿಂಜರನ್ನು ಗುಣಗಾನ ಮಾಡಿದರು.ಬೆಳ್ತಂಗಡಿ ತಾಲೂಕು ರಬ್ಬರ್ ಬೆಳೆಗಾರರ ಮಾರಾಟ ಮತ್ತು ಸಂಸ್ಕರಣ ಸಹಕಾರ ಸಂಘದ ಅಧ್ಯಕ್ಷ ಶ್ರೀಧರ ಜಿ. ಭಿಡೆ ಮಾತನಾಡಿ; ಪದ್ಮನಾಭ ಮಾಣಿಂಜರು ಕ್ಲಿಷ್ಟ ಪರಿಸ್ಥಿತಿಯನ್ನು ತಾಳ್ಮೆಯಿಂದ ನಿಭಾಯಿಸಿದವರು. ತನ್ನ ನಿಲುವಿನಲ್ಲಿ ಹೊಂದಾಣಿಕೆ ಮಾಡಿಕೊಳ್ಳದ ಅವರು ಎಲ್ಲಿಯೂ ನಿಷ್ಠುರತೆ ಬೆಳೆಸಿಕೊಂಡವರಲ್ಲ. ತನ್ನಲ್ಲಿ ಎಲ್ಲವೂ ಇದ್ದು, ತನ್ನದು ಯಾವುದೂ ಅಲ್ಲ ಎಂಬ ಸ್ಪಷ್ಟತೆ ಇದ್ದವರು ಅವರು. ಅವರ ಶರೀರ ದೂರವಾದರೂ ಅವರ ಶಕ್ತಿ ನಮ್ಮೊಳಗೆ ಶಾಶ್ವತವಾಗಿ ಇರಬೇಕು ಎಂದರು.ಕುದ್ರೋಳಿ ಶ್ರೀ ಗೋಕರ್ಣನಾಥೇಶ್ವರ ದೇವಸ್ಥಾನದ ಕೋಶಾಧಿಕಾರಿ ಪದ್ಮರಾಜ್ ಆರ್. ಪೂಜಾರಿ ಮಾತನಾಡಿ; ತಾನು ಯಾವುದೇ ಎತ್ತರಕ್ಕೆ ಏರಿದರೂ ತನ್ನ ಬದುಕಿನಲ್ಲಿ ದರ್ಪ ಬೆಳೆಸಿಕೊಳ್ಳದೆ ಎಲ್ಲರನ್ನೂ ಪ್ರೀತಿ ವಿಶ್ವಾಸದಿಂದ ನೋಡಿದವರು ಪದ್ಮನಾಭರು. ಕನ್ಯಾಡಿ ಶ್ರೀ ರಾಮ ಕ್ಷೇತ್ರ ನಿರ್ಮಾಣದಲ್ಲಿ ಆತ್ಮಾನಂದ ಸರಸ್ವತಿ ಸ್ವಾಮೀಜಿಗಳ ಜೊತೆ ಗಟ್ಟಿಯಾಗಿ ನಿಂತವರು ಅವರು ಎಂದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶ್ರೀ ಗುರುದೇವ ವಿವಿಧೋದ್ದೇಶ ಸಹಕಾರ ಸಂಘದ ಉಪಾಧ್ಯಕ್ಷ ಭಗೀರಥ ಜಿ ಮಾತನಾಡಿ; ಪದ್ಮನಾಭರು ಯಾವುದೇ ಕಾರ್ಯ ಮಾಡಿದರೂ ಅದು ಪ್ರಚಾರಕ್ಕಾಗಿ ಮಾಡುತ್ತಿರಲಿಲ್ಲ. ಅವರಲ್ಲಿ ಆ ಕಾರ್ಯದ ದೂರದರ್ಶಿತ್ವದ ಜೊತೆಗೆ ಪ್ರಾಮಾಣಿಕ ಮತ್ತು ನಿಷ್ಕಲ್ಮಶ ಮನಸ್ಸು ಸದಾ ಇರುತಿತ್ತು. ಅರಣ್ಯ ಇಲಾಖೆಯಲ್ಲಿ ಡಿಎಫ್ಓ ಆಗಿ ಪಶ್ಚಿಮ ಘಟ್ಟದ ಸೌಂದರ್ಯ ಮತ್ತು ಅಲ್ಲಿಯ ಜೀವ ಸಂಕುಲ ಉಳಿಯಲು ಕೂಡಾ ಅವರು ಕಾರಣಕರ್ತರಾಗಿದ್ದಾರೆ. ಕನ್ಯಾಡಿ ಶ್ರೀ ರಾಮ ಕ್ಷೇತ್ರ , ಶ್ರೀ ಗುರುದೇವ ವಿದ್ಯಾಸಂಸ್ಥೆ ಮತ್ತು ಸಹಕಾರಿ ಸಂಘ ಸ್ಥಾಪನೆಯಲ್ಲಿ ದೊಡ್ಡ ಕಾಣಿಕೆಯನ್ನು ನೀಡಿದವರು. ಅವರು ಮಾಡಿದ ಕೆಲಸ ಕಾರ್ಯಗಳು ಬಡ ಜನರ ಕಣ್ಣೀರು ಒರೆಸುವಂತಾದ್ದು’ ಎಂದರುವೇದಿಕೆಯಲ್ಲಿ ಪದ್ಮನಾಭ ಮಾಣಿಂಜರ ಹಿರಿಯ ಪುತ್ರ ಸುಧೀರ್, ಸಹಕಾರಿ ಸಂಘದ ನಿರ್ದೇಶಕರುಗಳಾದ ಕೆ.ಪಿ. ದಿವಾಕರ, ಸಂಜೀವ ಪೂಜಾರಿ, ಗಂಗಾಧರ ಮಿತ್ತಮಾರ್, ಚಂದ್ರಶೇಖರ, ತನುಜಾ ಶೇಖರ್, ಜಯವಿಕ್ರಂ ಕಲ್ಲಾಪು, ಧರಣೇಂದ್ರ ಕುಮಾರ್, ರಾಜಾರಾಮ್ ಕೆ.ಬಿ., ಚಿದಾನಂದ ಪೂಜಾರಿ ಎಲ್ದಕ್ಕ, ವಿಶೇಷ ಅಧಿಕಾರಿ ಎಂ. ಮೋನಪ್ಪ ಪೂಜಾರಿ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಶ್ವತ್ ಕುಮಾರ್ ಇದ್ದರು. ಸಹಕಾರ ಸಂಘದ ಸಿಬ್ಬಂದಿಗಳು ಪ್ರಾರ್ಥಿಸಿದರು. ದೈನಿಕ ಠೇವಣಿ ಸಂಗ್ರಾಹಕ ವಿಶ್ವನಾಥ ನುಡಿನಮನ ಗೀತೆ ಹಾಡಿದರು. ಸಹಕಾರ ಸಂಘದ ನಿರ್ದೇಶಕರಾದ ಜಗದಿಶ್ಚಂದ್ರ ಡಿ.ಕೆ. ಸ್ವಾಗತಿಸಿ, ನಿರ್ದೇಶಕ ಆನಂದ ಪೂಜಾರಿ ಸರ್ವೇದೋಳ ವಂದಿಸಿದರು. ನೆಲ್ಯಾಡಿ ಶಾಖಾ ವ್ಯವಸ್ಥಾಪಕ ಪ್ರದೀಶ್ ಕಾರ್ಯಕ್ರಮ ನಿರೂಪಿಸಿದರು.






