‘ಬೆಳ್ತಂಗಡಿ: ನಾವು ಪ್ರತಿಯೊಬ್ಬರೂ ಕಲಿಕೆಯನ್ನು ನಮ್ಮ ಬದುಕಿನ ಗಳಿಕೆಯೆಂದು ಅರ್ಥೈಸಿಕೊಳ್ಳಬೇಕು. ಪ್ರತಿಯೊಬ್ಬ ಶಿಕ್ಷಕರು ಮುಂದುವರಿದ ತರಬೇತಿಯನ್ನು ಪಡೆದು ತಮ್ಮ ಜ್ಞಾನವನ್ನು ಮತ್ತಷ್ಟು ವೃದ್ಧಿಸಿಕೊಳ್ಳಬೇಕು. ಆಗ ಅದರ ಪ್ರಯೋಜನ ನಮ್ಮ ಮುಂದಿನ ಭವಿಷ್ಯದ ಪೀಳಿಗೆಗೆ ನೀಡಲು ಸಾಧ್ಯವಾಗುತ್ತದೆ. ಅಂತಹ ಕಾಯಕದಲ್ಲಿ ಪ್ರತಿಯೊಬ್ಬರು ತೊಡಗಿಸಿಕೊಳ್ಳಿ. ಅದೇ ರೀತಿ ಮಡಂತ್ಯಾರು ಸ್ಥಳೀಯ ಸಂಸ್ಥೆಯು ತಮ್ಮ ಸ್ವಂತ ಜಾಗವನ್ನು ವ್ಯವಸ್ಥೆ ಮಾಡುವುದರೊಂದಿಗೆ ಕಟ್ಟಡವನ್ನು ಕೂಡ ಕಟ್ಟುವ ಬಗ್ಗೆ ಯೋಜನೆಗಳನ್ನು ಹಾಕಿಕೊಳ್ಳಬೇಕು. ಈ ಯೋಜನೆಗೆ ಸರ್ವರ ಸಹಕಾರವು ಖಂಡಿತ ದೊರೆಯಲಿದೆ. ಜಿಲ್ಲಾ ಸಂಸ್ಥೆಯು ಸದಾ ತಮ್ಮೊಂದಿಗೆ ಇರುತ್ತದೆ ಎಂದು ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಸಂಸ್ಥೆ ಮಂಗಳೂರು ಇದರ ಜಿಲ್ಲಾ ಆಯುಕ್ತರಾದ ಡಾಕ್ಟರ್ ಎಂ. ಮೋಹನ್ ಆಳ್ವ ಹೇಳಿದರು.ಅವರು ಭಾರತ್ ಸ್ಕೌಟ್ಸ್ ಗೈಡ್ಸ್ ಸ್ಥಳೀಯ ಸಂಸ್ಥೆ ಮಡಂತ್ಯಾರು ಇದರ 2024-25ರ ಸಾಲಿನ ವಾರ್ಷಿಕ ಮಹಾಸಭೆಯ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡುತ್ತಿದ್ದರು.ಸಭೆಯ ಅಧ್ಯಕ್ಷತೆಯನ್ನು ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್‌ನ ಮಡಂತ್ಯಾರು ಸ್ಥಳೀಯ ಸಂಸ್ಥೆಯ ಅಧ್ಯಕ್ಷರಾದ ಹಾಜಿ ಅಬ್ದುಲ್ ಲತೀಫ್ ಸಾಹೇಬ್ ರವರು ವಹಿಸಿಕೊಂಡು ಸಭೆಯನ್ನು ಮುನ್ನಡೆಸಿದರು. ಈ ಸಭೆಯು ಕೆ. ಪಿ.ಎಸ್. ಪುಂಜಾಲಕಟ್ಟೆಯ ಪ್ರೌಢಶಾಲಾ ವಿಭಾಗದವರ ಸಹಕಾರದೊಂದಿಗೆ ನಡೆಸಲಾಯಿತು. ಕಾರ್ಯದರ್ಶಿ ಎಂ. ಶಾಂತಾರಾಮ ಪ್ರಭು ಎಎಲ್‌ಟಿ (ಸ್ಕೌಟ್) ರವರು 2024-2025ನೇ ಸಾಲಿನ ವಾರ್ಷಿಕ ವರದಿಯನ್ನು ಸಭೆಯ ಮುಂದಿರಿಸಿದರು. ಜಿಲ್ಲಾ ಸಹಾಯಕ ಆಯುಕ್ತರಾದ ದತ್ತಾತ್ರೇಯಗೊಲ್ಲ ಎಚ್‌ಡಬ್ಲ್ಯೂಬಿ (ಸ್ಕೌಟ್) ರವರು ವರದಿ ಮಂಜೂರಾತಿಗೆ ಸೂಚನೆ ನೀಡಿದರು. ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಅಂಡೆತಡ್ಕ ಇಲ್ಲಿನ ಗೈಡ್ ಕ್ಯಾಪ್ಟನ್ ಜೆಸಿಂತಾ ಡಬ್ಲ್ಯೂಬಿ (ಗೈಡ್)ರವರು ಅನುಮೋದಿಸಿದರು. ಕೋಶಾಧಿಕಾರಿ ಸುಜಾತಾ ಡಬ್ಲ್ಯೂಬಿ (ಸ್ಕೌಟ್) ರವರು 2024-2025ನೇ ಸಾಲಿನ ಲೆಕ್ಕಪತ್ರವನ್ನು ಸಭೆಯ ಮುಂದಿಟ್ಟರು. ಗಾರ್ಡಿಯನ್ ಏಂಜಲ್ಸ್ ಹಿರಿಯ ಪ್ರಾಥಮಿಕ ಶಾಲೆ ಮಡಂತ್ಯಾರು ಇಲ್ಲಿನ ಗೈಡ್ ಕ್ಯಾಪ್ಟನ್ ಜೋಯ್ಸ್ ಬೆನಡಿಕ್ಟಾ ತಾವ್ರೋರವರು ಲೆಕ್ಕ ಪತ್ರ ಮಂಜೂರಾತಿಗೆ ಸೂಚನೆ ನೀಡಿದರು. ಸರಕಾರಿ ಉನ್ನತೀಕರಿಸಿದ ಪ್ರಾಥಮಿಕ ಶಾಲೆ ಕುವೆಟ್ಟು ಇಲ್ಲಿನ ಗೈಡ್ ಕ್ಯಾಪ್ಟನ್ ಪೂರ್ಣಿಮಾ ಡಬ್ಲ್ಯೂಬಿ (ಗೈಡ್) ರವರು ಅನುಮೋದಿಸಿದರು. ಬಳಿಕ ಕಾರ್ಯದರ್ಶಿಗಳು 2025-2026ನೇ ಸಾಲಿನ ವಾರ್ಷಿಕ ಕಾರ್ಯಕ್ರಮಗಳ ಯೋಜನೆಗೆ ಮಂಜೂರಾತಿ ಪಡೆದರು. ಕೋಶಾಧಿಕಾರಿ ಸುಜಾತಾರವರು 2025-2026ನೇ ಸಾಲಿನ ಮುಂಗಡ ಪತ್ರಕ್ಕೆ ಸರ್ವಾನುಮತದ ಮಂಜೂರಾತಿ ಪಡೆದರು. ಕಾರ್ಯಕ್ರಮದಲ್ಲಿ ರಾಜ್ಯ ಸಹಾಯಕ ಸಂಘಟನಾ ಆಯುಕ್ತರಾದ ಭರತ್ ರಾಜ್‌ರವರು ಸಂಸ್ಥೆಯ ವಾರ್ಷಿಕ ವರದಿಯಲ್ಲಿ ಎಲ್ಲಾ ವಿಚಾರಗಳು ಸವಿಸ್ತಾರವಾಗಿವೆ ಮತ್ತು ಅಚ್ಚುಕಟ್ಟಾಗಿದೆ ಎನ್ನುತ್ತಾ ವರದಿಯನ್ನು ಶ್ಲಾಘಿಸಿ, ಸರಕಾರದ ಹೊಸ ಕಾನೂನಿನ ಪ್ರಕಾರ ಶಾಲಾ ದಿನಗಳಲ್ಲಿ ಸ್ಕೌಟ್ ಗೈಡ್ ಚಟುವಟಿಕೆಗಳನ್ನು ಸ್ಥಳೀಯ ಮತ್ತು ಜಿಲ್ಲಾ ಮಟ್ಟದಲ್ಲಿ ನಡೆಸುವುದು ತುಂಬಾ ಕಷ್ಟಕರವಾಗಿದೆ. ಆದರೆ ಶಾಲಾ ಮಟ್ಟದಲ್ಲಿ ದಳ ನಡೆಸಲು ಯಾವುದೇ ತೊಂದರೆ ಇಲ್ಲ. ಆದ್ದರಿಂದ ಶಾಲಾ ಮಟ್ಟದಲ್ಲಿ ಮಕ್ಕಳಿಗೆ ಸ್ಕೌಟಿಂಗ್ ಗೈಡಿಂಗ್ ಶಿಕ್ಷಣ ನೀಡುವಂತೆ ತಿಳಿಸಿದರು. ಇತರ ವಿಷಯಗಳ ಹಂತದಲ್ಲಿ ವಾರ್ಷಿಕ ರಾಲಿ ಬಗ್ಗೆ ಮತ್ತು ವಿವಿಧ ವಾರ್ಷಿಕ ಚಟುವಟಿಕೆಗಳನ್ನು ನಡೆಸುವ ಬಗ್ಗೆ ವಿಚಾರ ವಿನಿಮಯ ಮಾಡಲಾಯಿತು. ಅಧ್ಯಕ್ಷೀಯ ಭಾಷಣದಲ್ಲಿ ಸಂಸ್ಥೆಯ ಅಧ್ಯಕ್ಷರಾದ ಹಾಜಿ ಅಬ್ದುಲ್ ಲತೀಫ್ ಸಾಹೇಬ್‌ರವರು ಕಾರ್ಯದರ್ಶಿಯವರ ಕಾರ್ಯವೈಖರಿಗೆ ಮೆಚ್ಚುಗೆ ವ್ಯಕ್ತಪಡಿಸಿ, ನಾವೆಲ್ಲರೂ ಒಂದೇ ಮನಸ್ಸಿನಿಂದ ದುಡಿದರೆ ಯಾವ ಕೆಲಸವೂ ಕಷ್ಟ ವಾಗಲಾರದು. ರಾಲಿಯನ್ನು ಸೇಕ್ರೆಡ್ ಹಾರ್ಟ್ ಆಂಗ್ಲ ಮಾಧ್ಯಮ ಶಾಲೆ ಮಡಂತ್ಯಾರಿನಲ್ಲಿ ನಡೆಸುವಂತೆ ಕೇಳಿರುತ್ತೇವೆ. ಒಂದು ವೇಳೆ ಅವರು ಒಪ್ಪದಿದ್ದರೆ ಮಾಲಾಡಿ ಶಾಲೆಯಲ್ಲಿ ರಾಲಿಯನ್ನು ಹಮ್ಮಿಕೊಳ್ಳಲಾಗುವುದು ಎಂದರು. ವೇದಿಕೆಯಲ್ಲಿ ಕೆಪಿಎಸ್ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಡಾ. ಸರೋಜಿನಿ ಆಚಾರ್, ಉಪ ಪ್ರಾಂಶುಪಾಲರಾದ ಉದಯ ಕುಮಾರ್ ಬಿ .ಸಂಸ್ಥೆಯ ಉಪಾಧ್ಯಕ್ಷರುಗಳಾದ ರುಕ್ಮಿಣಿ ಮತ್ತು ಶ್ರೀಧರ ರಾವ್ ಪೇಜಾವರ, ಜಿಲ್ಲಾ ಸಹಾಯಕ ಆಯುಕ್ತರಾದ ಜೆರಾಲ್ಡ್ ಫೆರ್ನಾಂಡಿಸ್ ಉಪಸ್ಥಿತರಿದ್ದರು. ಕಟ್ಟದಬೈಲು ಶಾಲಾ ಕಬ್ ಮಾಸ್ಟರ್ ಶಿವಾನಂದ ಭಂಡಾರಿ ಸ್ವಾಗತಿಸಿ, ಜಿಲ್ಲಾ ಸಹಾಯಕ ಆಯುಕ್ತರಾದ ದತ್ತಾತ್ರೇಯಗೊಲ್ಲ ಎಚ್‌ಡಬ್ಲ್ಯೂಬಿ(ಸ್ಕೌಟ್) ಧನ್ಯವಾದ ಸಮರ್ಪಿಸಿದರು. ಸಹ ಕಾರ್ಯದರ್ಶಿ ಧರಣೇಂದ್ರ ಎಚ್‌ಡಬ್ಲ್ಯೂಬಿ (ಸ್ಕೌಟ್) ರವರು ಕಾರ್ಯಕ್ರಮ ಸಂಯೋಜಿಸಿದರು. ರಾಷ್ಟ್ರಗೀತೆ ಯೊಂದಿಗೆ ಸಭೆಯನ್ನು ಮುಕ್ತಾಯಗೊಳಿಸಲಾಯಿತು.