ಬೆಳ್ತಂಗಡಿ: ಮನುಷ್ಯನಿಗೆ ಸಂಸ್ಕಾರ ದೊರೆಯಬೇಕಾದರೆ ಗುರು ಇರಬೇಕು. ಶುದ್ಧ ಮನಸ್ಸು ಹಾಗೂ ಭಕ್ತಿಯಿಂದ ದೇವರನ್ನು ಭಜಿಸುವ ಮೂಲಕ ದೇವರನ್ನು ಒಲಿಸಿಕೊಳ್ಳಬಹುದು. ಭಜನೆಯಿಂದ ಸಂಸ್ಕಾರಯುತ ನಾಗರಿಗ ಸಮಾಜ ನಿರ್ಮಾಣ ಸಾಧ್ಯ ಎಂದು ಮೂಡಬಿದ್ರೆಯ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ| ಎಂ. ಮೋಹನ ಆಳ್ವ ಹೇಳಿದರು.ಅವರು ಧರ್ಮಸ್ಥಳದ ಮಹೋತ್ಸವ ಸಭಾಭವನದಲ್ಲಿ ಸೆಪ್ಟೆಂಬರ್ 14ರಿಂದ 21ರವರೆಗೆ ನಡೆಯಲಿರುವ 27ನೇ ವರ್ಷದ ಭಜನಾ ಕಮ್ಮಟವನ್ನು ಸೆಪ್ಟೆಂಬರ್ 14ರಂದು ಉದ್ಘಾಟಸಿ ಮಾತನಾಡುತ್ತಿದ್ದರು.ಮಾನವನಿಗೆ ಉತ್ತಮ ಸಂಸ್ಕಾರ ನೀಡಿ ಭವಿಷ್ಯದ ನಾಗರಿಕನನ್ನಾಗಿಸಲು ಧರ್ಮಸ್ಥಳ ಧರ್ಮಾಧಿಕಾರಿಗಳ ಕೊಡುಗೆ ಅತ್ಯಮೂಲ್ಯ. ಈವರೆಗೆ 350 ದೇವಸ್ಥಾನಗಳ ಜೀರ್ಣೋದ್ಧಾರ, 18 ಸಾವಿರ ಧಾರ್ಮಿಕ ಕ್ಷೇತ್ರಗಳಿಗೆ ದಾನ ಧರ್ಮ ಮಾಡಿ, ವಾರ್ಷಿಕ 70 ಲಕ್ಷಕ್ಕೂ ಅಧಿಕ ಮಂದಿಗೆ ಅನ್ನದಾಸೋಹ ನಡೆಸುತ್ತಿರುವ ಹೆಗ್ಗಡೆಯವರ ಮನಸ್ಸೇ ಅಕ್ಷಯಪಾತ್ರೆ ಎಂದು ಡಾ| ಎಂ. ಮೋಹನ ಆಳ್ವ ಹೇಳಿದರು.ಧರ್ಮಸ್ಥಳದ ಧರ್ಮಾಧಿಕಾರಿಯವರು ತಮ್ಮ ಅಧಿಕಾರದ 58ನೇ ವರ್ಷದ ಸುಧೀರ್ಘ ಪಯಣದಲ್ಲಿ ಸಾವಿರಾರು ಸೇವಾ ಕಾರ್ಯಕ್ರಮ ಅನುಷ್ಠಾನ ಮಾಡಿದ್ದು, ಇಂತಹಾ ಕಾರ್ಯ ಜಗತ್ತಿನಲ್ಲಿ ಜನ ಮನ್ನಣೆಗಳಿಸಿದೆ. ಹಾಗಾಗಿ ಅವರು ಗುರುಸ್ಥಾನದಲ್ಲಿ ಇದ್ದಾರೆ. ಗುರುಗಳು ನಮ್ಮನ್ನು ದೇವರ ಬಳಿಗೆ ಕರೆದೊಯ್ಯುಲು ಭಜನೆಯೆಂಬ ಶುದ್ಧ ಭಕ್ತಿ ಮಾರ್ಗವನ್ನು ಸುಂದರವಾಗಿ ಸಮರ್ಪಿಸಿದ್ದಾರೆ. ಮನುಷ್ಯನ ಜೀವನವನ್ನು ಹೇಗೆ ಸುಂದರವಾಗಿ ಕಟ್ಟಬಹುದೆಂದು ದಾಸ ಸಾಹಿತ್ಯ ತಿಳಿಸುತ್ತದೆ. ಮನುಷ್ಯನಿಗೆ ಮಾನಸಿಕ ನೆಮ್ಮದಿ ಭಜನೆಯಿಂದ ಸಿಗಲು ಸಾಧ್ಯ ಎಂದು ಅವರು ಹೇಳಿದರು.ಮಾಣಿಲದ ಮೋಹನದಾಸ ಸ್ವಾಮೀಜಿ ಆಶೀರ್ವಚನ ನೀಡಿ; ಗ್ರಾಮೀಣ ಜನರ ಭಕ್ತಿಗೆ ಭಜನೆ ಮೂಲಕ ಆಯಾಮ ನೀಡಿದವರು ಹೆಗ್ಗಡೆಯವರು. ಮೂಢನಂಬಿಕೆ ಹೋಗಲಾಡಿಸಿ ಮೂಲನಂಬಿಕೆಯನ್ನು ಉಳಿಸುವ ಕೆಲಸ ಮಾಡಿದ್ದಾರೆ. ದೇವರ ಮೇಲಿನ ಭಯವೇ ಭಕ್ತಿಯ ಆರಂಭ ಎಂಬಂತೆ ಭಜನೆಯಲ್ಲಿ ನೃತ್ಯ ಭಜನೆ ಅಳವಡಿಸಿ ಜನರನ್ನು ಆಕರ್ಷಿಸುವ ಕೆಲಸ ಮಾಡಿದೆ. ಭಜನೆಯಲ್ಲಿ ಪುರುಷರು ಮಾತ್ರವಲ್ಲದೆ ತಾಯಂದಿರು ತೊಡಗಿಸಿಕೊಳ್ಳುವಲ್ಲಿ ಹೇಮಾವತಿ ಅಮ್ಮನವರು ಮಾಡಿದ ಪರಿವರ್ತನೆ ಸಮಾಜದಲ್ಲಿ ಕ್ರಾಂತಿಗೆ ಕಾರಣವಾಯಿತು ಎಂದು ಹೇಳಿದರು.ಧರ್ಮಸ್ಥಳದ ಜೋತಿರ್ಲಿಂಗ ಶಾಶ್ವತವಾಗಿರುವಂತಹದು. ಇಲ್ಲಿನ ಮಂಜುನಾಥ ಸ್ವಾಮಿ, ಅಣ್ಣಪ್ಪ ಸ್ವಾಮಿ, ಧರ್ಮದೇವತೆಗಳ ಪ್ರಭಾವ ಹಾಗೂ ಶಕ್ತಿ ಕುಂದಿಲ್ಲ, ಕುಂದುವುದೂ ಇಲ್ಲ. ಧರ್ಮಾಧಿಕಾರಿಗಳ ಪೀಠಕ್ಕೆ ಚ್ಯುತಿ ತರುವ ಕೆಲಸ ಮಾಡುತ್ತಿದ್ದಾರೆ. ಆದರೆ ಇಲ್ಲಿನ ದೇವತೆಗಳೇ ಸೂತ್ರದಾರಿಗಳು ಎಂದು ಅವರಿಗೆ ತಿಳಿದಿಲ್ಲ, ಬೇರೆಲ್ಲ ಪಾತ್ರಧಾರಿಗಳಾಗಿ ಹುಟ್ಟಿಕೊಳ್ಳುತ್ತಿದ್ದಾರೆ ಅಷ್ಟೆ. ಆದರೆ ದುಷ್ಟಶಕ್ತಿಯ ಅಂತ್ಯ ಶೀಘ್ರದಲ್ಲೇ ಆಗಲಿದೆ ಎಂದು ಮಾಣಿಲ ಶ್ರೀ ಹೇಳಿದರು. ಧರ್ಮಕ್ಷೇತ್ರದ ಸಂರಕ್ಷಣೆಗೆ ಭಜನಾ ಮಂಡಳಿಗಳು ತಮ್ಮ ಭಜನಾ ಕಾರ್ಯಕ್ರಮದಲ್ಲಿ ಪ್ರತಿನಿತ್ಯ ಶಿವ ಪಂಚಾಕ್ಷರಿಯನ್ನು ಹಾಡುವ ಮೂಲಕ ದೇವರಲ್ಲಿ ಪ್ರಾರ್ಥಿಸಬೇಕೆಂದು ಸ್ವಾಮೀಜಿ ಕರೆ ನೀಡಿದರು.ಧಮಾಧಿಕಾರಿಗಳಾದ ಡಾ. ಡಿ. ವೀರೇಂದ್ರ ಹೆಗ್ಗಡೆ ಅಧ್ಯಕ್ಷತೆ ವಹಿಸಿ ಮಾತನಾಡಿ; ಭಜನಾ ಕಮ್ಮಟದಿಂದ ಶುದ್ಧ ಉಚ್ಚಾರಣೆ, ಪದಗಳ ಬಳಕೆ ಸ್ಪಷ್ಟವಾಗುತ್ತದೆ. ಭಜನೆಯಿಂದ ಮಕ್ಕಳಲ್ಲಿ ನಾಯಕತ್ವ ಬೆಳೆಸುವುದು ಪ್ರಮುಖ ಉದ್ದೇಶವಾಗಿದೆ. ಸಂಸ್ಕಾರ ಎಂದರೆ ಧಾರ್ಮಿಕ ಸಂಸ್ಕಾರ ಮಾತ್ರವಲ್ಲ; ಸಾಮಾಜಿಕ ಸಂಸ್ಕಾರವು ಅಗತ್ಯ. ಭಜನೆಯು ದೇವರಿಗೆ ಆಪ್ಯಾಯಮಾನವಾಗುವ ಮೂಲಕ ಪ್ರಕೃತಿ, ಪ್ರಪಂಚ ಎಲ್ಲವೂ ನಮ್ಮದೇ ಎಂದು ತಿಳಿದು ಸಂರಕ್ಷಿಸುವ ಜವಾಬ್ದಾರಿ ನಮ್ಮಲ್ಲಿ ಬೆಳೆಯಬೇಕು ಎಂದರು.ವೇದಿಕೆಯಲ್ಲಿ ಡಾ. ಹೇಮಾವತಿ ವೀ. ಹೆಗ್ಗಡೆ, ಡಿ. ಹರ್ಷೇಂದ್ರ ಕುಮಾರ್, ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್ ಅಧ್ಯಕ್ಷ ಚಂದ್ರಶೇಖರ್ ಸಾಲಿಯಾನ್, ಉಪಾಧ್ಯಕ್ಷ ರಾಜೇಂದ್ರ ಕುಮಾರ್ ಉಪಸ್ಥಿತರಿದ್ದರು.ಭಜನಾ ಕಮ್ಮಟದ ಕಾರ್ಯದರ್ಶಿ ಎ.ವಿ. ಶೆಟ್ಟಿ ವರದಿ ವಾಚಿಸಿ; ಸನಾತನ ಪರಂಪರೆಯನ್ನು ಬೆಳೆಸುವ ಸಲುವಾಗಿ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮೋತ್ಥಾನ ಟ್ರಸ್ಟ್ ನಿಂದ ಭಜನಾ ಕಮ್ಮಟ ಆಯೋಜಿಸಲಾಗುತ್ತಿದೆ. ಈವರೆಗೆ ರಾಜ್ಯದ ಎಲ್ಲೆಡೆ ಭಜನಾ ತಂಡಗಳಿಗೆ ಕ್ಷೇತ್ರದಿಂದ 2.37 ಕೋ.ರೂಪಾಯಿ ನೆರವು ಒದಗಿಸಲಾಗಿದೆ. ಈ ವರ್ಷ 35 ಕಡೆಗಳಲ್ಲಿ ಆಯ್ಕೆಯ ಸಭೆಗಳು ನಡೆದಿದ್ದು 19 ತಾಲೂಕಿನ 87 ಭಜನಾ ಮಂಡಳಿಗಳಿಂದ 111 ಪುರುಷ ಹಾಗೂ 71 ಮಹಿಳಾ ಸದಸ್ಯರೊಂದಿಗೆ ಒಟ್ಟು 182 ಮಂದಿ ಶಿಬಿರಾರ್ಥಿಗಳು ಭಾಗವಹಿಸಿದ್ದಾರೆ ಎಂದು ತಿಳಿಸಿದರು.ಶಿಬಿರಾರ್ಥಿಗಳಾದ ಮಹೇಶ್ ಕುಂದಾಪುರ ಮತ್ತು ಶಿಲ್ಪಾ ಕಡಬ ಅವರಿಗೆ ಭಜನಾಕಿಟ್ ವಿತರಿಸುವ ಮೂಲಕ ಭಜನಾ ಕಮ್ಮಟಕ್ಕೆ ಡಾ. ಹೆಗ್ಗಡೆ ಚಾಲನೆ ನೀಡಿದರು. ಕಾರ್ಯಕ್ರಮದಲ್ಲಿ ಭಜನಾ ಕಮ್ಮಟ-2025 ಎಂಬ ಮಾಹಿತಿ ಕೈಪಿಡಿ ಬಿಡುಗಡೆ ಮಾಡಲಾಯಿತು. ಸುಪ್ರೀತಾ ಮತ್ತು ವರ್ಚಸ್ ಧರ್ಮಸ್ಥಳ ಪ್ರಾರ್ಥನೆ ನೆರವೇರಿಸಿ, ವಿದುಷಿ ಚೈತ್ರಾ ತಂಡದವರು ದೃಶ್ಯರೂಪಕ ಸಾದರಪಡಿಸಿದರು. ಶಿಕ್ಷಕಿ ಪದ್ಮಶ್ರೀ ಕಾರ್ಯಕ್ರಮ ನಿರೂಪಿಸಿದರು. ಭಜನಾ ಕಮ್ಮಟ ಸಂಚಾಲಕ ಸುಬ್ರಹ್ಮಣ್ಯ ಪ್ರಸಾದ್ ಪ್ರಾಸ್ತಾವಿಸಿ, ಸ್ವಾಗತಿಸಿದರು. ಪ್ರತಿ ದಿನ ಮಧ್ಯಾಹ್ನ 12 ಗಂಟೆಯಿಂದ 1 ಗಂಟೆಯವರೆಗೆ ಧಾರ್ಮಿಕ ಉಪನ್ಯಾಸ, ಸಂಜೆ ಗಂಟೆ 5-30 ರಿಂದ ನಗರಭಜನೆ ಇರಲಿದೆ. ಸೆಪ್ಟೆಂಬರ್ 21 ರಂದು ಸಮಾರೋಪ ಸಮಾರಂಭ ನಡೆಯಲಿದ್ದು ಪೂರ್ವಾಹ್ನ 10 ಗಂಟೆಯಿಂದ 400 ಭಜನಾ ತಂಡಗಳ 8,000 ಭಜನಾ ಪಟುಗಳಿಂದ ಶೋಭಾಯಾತ್ರೆ ಹಾಗೂ ಅಮೃತವರ್ಷಿಣಿ ಸಭಾಭವನದಲ್ಲಿ ಸಾಮೂಹಿಕ ನೃತ್ಯಭಜನೆ ನಡೆಯಲಿದೆ. ಈವರೆಗೆ 29 ತರಬೇತಿ ನಡೆದಿದ್ದು, 5,800 ಮಂದಿಗೆ ತರಬೇತಿ ನೀಡಲಾಗಿದೆ. 26 ಕಮ್ಮಟಗಳಿಂದ 240 ಹಾಡು ರಚಿಸಿ, 2,000 ಮಂದಿಗೆ ಕುಣಿತ ಭಜನೆ ಕಲಿಸಿಕೊಡಲಾಗಿದೆ. ಈಮೂಲಕ ರಾಜ್ಯಾದ್ಯಂತ 5,500 ಭಜನಾ ಮಂಡಳಿ ತೊಡಗಿಸಿಕೊಂಡಿದೆ ಎಂದು ತಿಳಿಸಿದರು. ಕೋಶಾಧಿಕಾರಿ ಪದ್ಮರಾಜ್ ಜೈನ್ ವಂದಿಸಿದರು.ಖ್ಯಾತ ಗಾಯಕರಾದ ಶಂಕರ್‌ಶಾನ್‌ಭಾಗ್, ಅರ್ಚನಾ ಉಡುಪ, ರಾಮಕೃಷ್ಣ ಕಾಟುಕುಕ್ಕೆ, ಉಷಾ ಹೆಬ್ಬಾರ್, ಮಣಿಪಾಲ, ಸೌಮ್ಯ ಸುಭಾಷ್, ಧರ್ಮಸ್ಥಳ, ಮಂಗಲದಾಸ ಗುಲ್ವಾಡಿ, ವಿದುಷಿ ಚೈತ್ರಾ ಉಜಿರೆ, ಸುನಿಲ್ ಶೆಟ್ಟಿ, ಧರ್ಮಸ್ಥಳ ಮೊದಲಾದವರು ಸಂಪನ್ಮೂಲ ವ್ಯಕ್ತಿಗಳಾಗಿ ಕಮ್ಮಟದಲ್ಲಿ ಮಾಹಿತಿ, ಮಾರ್ಗದರ್ಶನ ನೀಡಲಿರುವರು.






