ಅಮೃತ ಮಹೋತ್ಸವದ ಸಂಭ್ರಮದಲ್ಲಿ ಬಳಂಜ ಸರಕಾರಿ ಉನ್ನತೀಕರಿಸಿದ ಶಾಲೆ

ಅಮೃತ ಮಹೋತ್ಸವದ ಸಂಭ್ರಮದಲ್ಲಿ ಬಳಂಜ ಸರಕಾರಿ ಉನ್ನತೀಕರಿಸಿದ ಶಾಲೆ
Facebook
Twitter
LinkedIn
WhatsApp

ಸರಕಾರೀ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಮತ್ತು ಪ್ರೌಢ ಶಾಲೆ ಬಳಂಜ ಅಮೃತ ಮಹೋತ್ಸವದ ಪರ್ವಕಾಲದಲ್ಲಿದೆ. 1948ರಲ್ಲಿ ಊರ ಪಟೇಲರಾಗಿದ್ದ ಕಿನ್ನಿ ಯಾನೆ ಕೋಟಿ ಪಡಿವಾಳರ ವಿಶೇಷ ಮುತುವರ್ಜಿಯಿಂದ ಊರ ಮಹನೀಯರ ದಾನ ಮತ್ತು ಶ್ರಮದಾನದ ಫಲವಾಗಿ ಬಳಂಜ ಪ್ರಾಥಮಿಕ ಶಾಲೆ ರೂಪುಗೊಂಡಿತು. ಕಳೆದ 75ವರ್ಷಗಳಲ್ಲಿ ಅಸಂಖ್ಯಾತ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಸಮಾಜಕ್ಕೆ ನೀಡಿದ ಹೆಮ್ಮೆ ಬಳಂಜ ಶಾಲೆಯದು. ಅಮೃತ ಮಹೋತ್ಸವದ ಪ್ರಯುಕ್ತ ಈಗಾಗಲೇ ಅಶ್ವಥ್ ಹೆಗ್ಡೆ ಫೌಂಡೇಶನ್ ಮೂಲಕ ಸುಮಾರು ರೂಪಾಯಿ 15 ಲಕ್ಷಕ್ಕೂ ಮಿಕ್ಕಿದ ಶಾಶ್ವತ ಕಾಮಗಾರಿಗಳನ್ನು ನಡೆಸಲಾಗಿದ್ದು; ಈ ಕಾಮಗಾರಿಗಳನ್ನು ಬೆಳ್ತಂಗಡಿಯ ಮಾನ್ಯ ಶಾಸಕರಾದ ಹರೀಶ್ ಪೂಂಜಾರವರು ಈಗಾಗಲೇ ಉದ್ಘಾಟಿಸಿದ್ದಾರೆ. ಡಿಸೆಂಬರ್ ತಿಂಗಳ ದಿನಾಂಕ 13 ಶನಿವಾರ ಮತ್ತು 14 ರವಿವಾರ ಅಮೃತ ಸಂಭ್ರಮ ವಿಶೇಷ ಕಾರ್ಯಕ್ರಮಗಳು ಜರುಗಲಿವೆ. ದಿನಾಂಕ 13ರಂದು ಸರಕಾರದ ಮಂತ್ರಿಗಳು, ಶಾಸಕರುಗಳು, ಸಮಾಜದ ವಿಶೇಷ ಗಣ್ಯರ ಸಮ್ಮುಖದಲ್ಲಿ ಅಮೃತ ಸಂಭ್ರಮ ಕಾರ್ಯಕ್ರಮ ಉದ್ಘಾಟನೆಗೊಳ್ಳಲಿದೆ. ಅದೇ ದಿನ ಸಂಜೆ 3 ಘಂಟೆಯಿಂದ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದು ಸಂಜೆ 6 ಘಂಟೆಗೆ ಸರಿಯಾಗಿ ತುಳು ರಂಗಭೂಮಿಯ ಇತಿಹಾಸದಲ್ಲೇ ವಿನೂತನ ದಾಖಲೆ ಬರೆದ ದೇವದಾಸ್ ಕಾಪಿಕಾಡ್, ನವೀನ ಡಿ ಪಡೀಲ್, ಭೋಜರಾಜ್ ವಾಮಂಜೂರ್, ಸಾಯಿಕೃಷ್ಣ ಮಹಾ ಸಂಗಮದಲ್ಲಿ ತುಳು ಹಾಸ್ಯಮಯ ನಾಟಕ ‘ಪುದರ್ ದೀತಿಜಿ’ ಪ್ರದರ್ಶನಗೊಳ್ಳಲಿದೆ. ದಿನಾಂಕ 14 ರವಿವಾರ ಬೆಳಿಗ್ಗೆ ಗಂಟೆ 9-30ಕ್ಕೆ ಸರಿಯಾಗಿ ಬಳಂಜ ಶಾಲೆಯಲ್ಲಿ ಸೇವೆ ಸಲ್ಲಿಸಿದ ಎಲ್ಲಾ ಶಿಕ್ಷಕರನ್ನು ಆಹ್ವಾನಿಸಿ ಅವರಿಗೆ ಶಿಷ್ಯರಿಂದ ಗುರುವಂದನಾ ಕಾರ್ಯಕ್ರಮ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಖ್ಯಾತ ಚಲನಚಿತ್ರ ನಟ ಸಂಸ್ಕಾರ ಭಾರತೀಯ ಪ್ರಾಂತ ಅಧ್ಯಕ್ಷರಾದ ಸುಚೇಂದ್ರ ಪ್ರಸಾದ್, ಖ್ಯಾತ ಸಾಹಿತಿ ಜೋಗಿ, ಸುವರ್ಣ ನ್ಯೂಸ್ ಆಡಳಿತ ನಿರ್ದೇಶಕ ರವಿ ಹೆಗಡೆಯವರು ಭಾಗವಹಿಸಲಿದ್ದಾರೆ. ಅಂದು ಸಂಜೆ 3 ಗಂಟೆಯಿಂದ ಪ್ರೌಢಶಾಲಾ ಮಕ್ಕಳು ಹಾಗೂ ಉಮಾಮಹೇಶ್ವರ ಯುವಕ ಮಂಡಲ, ಜ್ಯೋತಿ ಮಹಿಳಾ ಮಂಡಲದ ಸದಸ್ಯರು ಹಾಗೂ ಹಳೆವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಲಿದೆ. ಸಂಜೆ 6 ಗಂಟೆಗೆ ಸರಿಯಾಗಿ ಖ್ಯಾತ ಚಲನ ಚಿತ್ರ ನಟ, ಕಾಂತಾರ ಖ್ಯಾತಿಯ ಪ್ರಕಾಶ್ ತೂಮಿನಾಡು ಮತ್ತು ದೀಪಕ್ ರೈ ಪಾಣಾಜೆ ತಂಡದಿಂದ ತೆಲಿಕೆದ ಬರ್ಸ ಕಾರ್ಯಕ್ರಮ ನಡೆಯಲಿದೆ. ತದನಂತರ ಹಿನ್ನಲೆ ಗಾಯಕಿ ಅಖಿಲ ಪಜಿಮಣ್ಣು , ಸುಪ್ರೀತ್ ಸಫಲಿಗ ಹಾಗೂ ಮೋಹನ್ ಮಜಾ ಟಾಕೀಸ್ ತಂಡದವರಿಂದ ಸರಿಗಮ ಸಂಗೀತ ಸುಧೆ ವಿಶೇಷ ಕಾರ್ಯಕ್ರಮ ಜರುಗಲಿದೆ. ಅರೆಹೊಳೆ ಪ್ರತಿಷ್ಠಾನದಿಂದ ಸಾಂಸ್ಕೃತಿಕ ವೈಭವ ಕಾರ್ಯಕ್ರಮ ಜರುಗಲಿದೆ. ಈ ಎಲ್ಲಾ ಕಾರ್ಯಕ್ರಮಗಳ ಗೌರವಾಧ್ಯಕ್ಷತೆಯನ್ನು ಶ್ರೀ ಸುರೇಶ್ ಶೆಟ್ಟಿ ಕುರೆಲ್ಯ , ಅಧ್ಯಕ್ಷರಾಗಿ ಚಂದ್ರಶೇಖರ್ ಪಿ.ಕೆ., ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರು ಹರೀಶ್ ವೈ. ಚಂದ್ರಮ ನೇತೃತ್ವದಲ್ಲಿ ಮತ್ತು ಎಲ್ಲಾ ಪದಾಧಿಕಾರಿಗಳ ಸಹಕಾರದಲ್ಲಿ ನಡೆಯಲಿದೆ ಎಂದು ಸಮಿತಿಯ ಪ್ರಧಾನ ಸಂಚಾಲಕರಾದ ಅಶ್ವಥ್ ಹೆಗ್ಡೆ ಬಳಂಜ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Latest 5

Related Posts