ಜೀವನ ಪದ್ಧತಿ ಬದಲಿಸಿದರೆ ಪ್ರತಿಯೊಬ್ಬರು ಕೊರೋನಾ ಮಾರಿಯಿಂದ ಪಾರಾಗಬಹುದು
ಬರಹ: ಅರವಿಂದ ಚೊಕ್ಕಾಡಿ
ಲಾಕ್ಡೌನ್ ಪ್ರಾರಂಭದ ದಿನಗಳಲ್ಲಿ ಎಲ್ಲರೂ ಸೇರಿ ಜನರಿಗೆ ಬೈದದ್ದೇ ಬೈದದ್ದು.ನಾನು ಬೈಯ್ಯಲಿಲ್ಲ. ಯಾಕೆಂದರೆ ಒಂದು ಎಚ್ಚರ ಹುಟ್ಟಿಸಲು ಲಾಕ್ಡೌನ್ ಸಹಾಯಕವೆ ಹೊರತು ಅದೇ ವೈರಸ್ ಹೋಗುವ ತನಕ ಅಲ್ಲ ಎಂದು ಗೊತ್ತಿತ್ತು. ಆಗ ಬೈತಾ ಇದ್ದರೆ ಇವತ್ತು ಮಾತಾಡುವ ನೈತಿಕ ಅರ್ಹತೆ ಇರುವುದಿಲ್ಲ.
ಸರ್ವೈವಲ್ ಆಫ್ ದ ಫಿಟ್ಟೆಸ್ಟ್ ತತ್ವವನ್ನು ಕಲ್ಯಾಣ ರಾಷ್ಟ್ರಗಳು ಬದಲಿಸುವ ಅಭಿನಂದನಾರ್ಹ ಪ್ರಯತ್ನ ಮಾಡಿವೆ. ಆದರೂ ಪರಿಸ್ಥಿತಿ ಕಠಿಣವಾದಾಗ ಸರ್ವೈವಲ್ ಆಫ್ ದ ಫಿಟ್ಟೆಸ್ಟ್ ತತ್ವವೆ ವಿಜೃಂಭಿಸುತ್ತದೆ. ಹಸಿದ ಮಕ್ಕಳಿಗೆ ಸಾಂತ್ವನಕ್ಕಾಗಿ ತಾಯಿ ಕಲ್ಲುಗಳನ್ನು ಬೇಯಿಸಿದ ವಿಚಾರ ತಡೆಯಲಾಗದ ಸಂಕಟವನ್ನುಂಟು ಮಾಡುತ್ತದೆ. ನಮಗೆ ಊಟ ಮಾಡಲು ಕಷ್ಟವಾಗುತ್ತದೆ. ಆದರೂ ನಾನದರ ಬಗ್ಗೆ ಬರೆಯಲಿಲ್ಲ. ಯಾಕೆಂದರೆ ಅಂತಾದ್ದನ್ನೂ ಜೀರ್ಣಿಸಿಕೊಳ್ಳಬಲ್ಲ ಶಕ್ತಿ ನಮಗೆ ಇರಬೇಕಾಗುತ್ತದೆ. ಶಿವರಾಮ ಕಾರಂತರ ‘ಚಿಗುರಿದ ಕನಸು’ ನಲ್ಲಿ ನೂರು ವರ್ಷದ ಅಜ್ಜ,”ನನ್ನ ಮಕ್ಕಳು ಸತ್ತರು.ಹೆಂಡತಿ ಸತ್ತಳು. ಮೊಮ್ಮಕ್ಕಳು ಸತ್ತರು. ಅದನ್ನೆಲ್ಲ ನೋಡಿಯೂ ಬದುಕಿದ್ದೇನೆ. ಕೇವಲ ಬದುಕಿದ್ದೇನೆ ಎಂಬ ಕಾರಣಕ್ಕಾಗಿ ಬದುಕುತ್ತಿದ್ದೇನೆ”ಎಂದು ಹೇಳುತ್ತಾನೆ. ಯಾರದೊ ಸಂಕಟದ ವಿಚಾರವನ್ನು ಬರೆದು ನಾವು ಏನು ಮಾಡಲಿಕ್ಕಾ ಗುತ್ತದೆ. ಏಕೆಂದರೆ ನಾವೂ ಅಸಹಾಯಕರೇ. ಆ ಸ್ಥಳಕ್ಕೆ ಹೋಗಿ ಸರಿಪಡಿಸಲು ನಮಗೆ ಸಾಧ್ಯವಿಲ್ಲ. ವ್ಯವಸ್ಥೆಯನ್ನು ದೂಷಿಸಬಹುದು. ಯಾರನ್ನೊ ದೂಷಿಸುವುದರಿಂದ ಭಾವನಾತ್ಮಕ ಸಮಾಧಾನ ಸಿಗಬಹುದು ಹೊರತು ಸಮಸ್ಯೆ ಪರಿಹಾರ ವಾಗುವುದಿಲ್ಲ. ಮತ್ತೊಬ್ಬರ ದಾರುಣತೆಯನ್ನು ವೈಭವೀಕರಿಸಿ ಹೇಳಿ ನಮಗೆ ಹೇಗೂ ಅನ್ನ ಸೇರುವುದಿಲ್ಲ; ಉಳಿದ ಎಲ್ಲರಿಗೂ ಅನ್ನ ಸೇರದ ಹಾಗೆ ಮಾಡಿ ಉಳಿದವರನ್ನೂ ಹಿಂಸಿಸ ಬಹುದು ಅಷ್ಟೆ. ನಿಜವಾಗಿ ನಮ್ಮ ಬಹುತೇಕ ನಡೆವಳಿಕೆಗಳು ಅನೈತಿಕವೆ ಆಗಿರುತ್ತದೆ. ಸಮುದ್ರದ ಮೀನನ್ನು ಹಿಡಿಯುವುದು ಅನೈತಿಕ. ಯಾಕೆಂದರೆ ಆ ಮೀನನ್ನು ನಾವು ಪೋಷಿಸಿ ಬೆಳೆಸಿಲ್ಲ. ಅದರ ಮೇಲೆ ನಮಗಾವ ಅಧಿಕಾರವೂ ಇಲ್ಲ. ಮನೆ ಕಟ್ಟಲು ಮರ ಕಡಿಯುವುದು ಕ್ರೌರ್ಯ. ಏಕೆಂದರೆ ಕಾಡಿನ ಮರವನ್ನು ನಾವು ಬೆಳೆಸಿಲ್ಲ. ಅದರ ಮೇಲೆ ನಮಗೆ ಯಾವ ಅಧಿಕಾರವೂ ಇಲ್ಲ. ಆದರೆ ಇಂತಹ ಕ್ರೌರ್ಯ ನಡೆಯುತ್ತಲೇ ಬಂದಿದೆ. ಆದ್ದರಿಂದ ಅದು ಸಹಜ ಎಂದು ಆಗಿದೆ. ಪ್ರಕೃತಿಯೇ ಮುನಿದಾಗ ನಾವೇ ಹಿಂಸೆಗೊಳಗಾಗಬೇಕಾಗಿ ಬಂದರೂ ಎದುರಿಸುವ ತಾಕತ್ತು ನಮ್ಮಲ್ಲೆ ಇರುತ್ತದೆ.
ಪ್ರಸ್ತುತ ನಮ್ಮನ್ನು ನಾವು ಸಿದ್ಧಗೊಳಿಸಿ ಕೊಳ್ಳಬೇಕಾದ್ದು ಎರಡು ರೀತಿಯಲ್ಲಿ. ಹಿಂದೆ ಏಯ್ಡ್ಸ್ ಭಾರೀ ಅಬ್ಬರದ ಕಾಲದಲ್ಲಿತ್ತು. ನಾನದರ ಬಗ್ಗೆ ಚಿಂತಿಸಬೇಕಾಗಿರಲಿಲ್ಲ. ನನ್ನ ತಲೆ ಕೂದಲು ಬಾಲ್ಯದಿಂದಲೂ ಅಮ್ಮನೇ ತೆಗೆಯುತ್ತಿದ್ದುದರಿಂದ ಏಯ್ಡ್ಸ್ ಗೆ ನಾನು ಚಿಂತಿಸುವ ಪ್ರಮೇಯವಿರಲಿಲ್ಲ. ಆದರೆ ಇದು ಹಾಗಲ್ಲ. ಹಲವು ವೈದ್ಯಕೀಯ ಲೇಖನಗಳು ಕೊರೋನಾ ನೆಗಡಿಯಂತೆ ಬಂದು ಹೋಗಬಹುದು ಎಂದರು. ಇರಬಹುದು; ಆದರದು ಅಷ್ಟಕ್ಕೇ ಸೀಮಿತವಲ್ಲ. ಆವಾಗ ಅದನ್ನು ಹೇಗೆ ಹೇಳಬೇಕು? ಜನ ಏನೂ ಮಾಡಬೇಕಾಗಿಲ್ಲವೆ? ಇನ್ಯಾವುದೊ ವೈದ್ಯಕೀಯ ಲೇಖನದಲ್ಲಿ ಭಾರತದಲ್ಲಿ ಒಂದು 2%ಜನರಿಗೆ ತೊಂದರೆಯಾಗ ಬಹುದಷ್ಟೇ ಎಂದು ಇತ್ತು.100ಕ್ಕೆ 2 ಆದರೆ 135ಕೋಟಿಗೆ ಎಷ್ಟಾಯಿತು? 27 ಲಕ್ಷ ಜನ ಆಗುತ್ತಾರೆ; ಅಲ್ಲವೆ? (ನನಗೆ ಗಣಿತ ಗೊತ್ತಿಲ್ಲ) ಆವಾಗ ಅದನ್ನು ತೀರಾ ಏನೂ ಅಲ್ಲ ಎಂದರೆ ಸಾಮಾನ್ಯ ಜನರು ಕೇರ್ ಲೆಸ್ ಆಗುತ್ತಾರೆ. ಹಾಗೆಂದು “ಮಹಾಮಾರಿ” ” ಜೀವದ ಪ್ರಶ್ನೆ” ಎಂದರೆ ಹೆದರಿಕೊಂಡುಬಿಡುತ್ತಾರೆ.
ಆದರೆ ಏನು ಮಾಡಬೇಕೆಂದು ಹೇಳಬೇಕಾದರೆ ಮೊದಲು ವಿಷಯ ಏನು? ಎಂದು ಖಚಿತವಾಗಿ ಗೊತ್ತಿರಬೇಕು. ಕೊರೋನಾದ ವಿಚಾರದಲ್ಲಿ ಇದು ಇಂತಹ ಕಾರಣಕ್ಕೆ ಮಾತ್ರ, ಈ ರೀತಿಯಲ್ಲೇ, ಈ ರೀತಿಯ ದೇಹಸ್ಥಿತಿಯವರಿಗೇನೆ ಬರುತ್ತದೆ ಎಂದು ನಿಖರವಾಗಿ ಹೇಳಲು ಇನ್ನೂ ವೈದ್ಯ ಲೋಕಕ್ಕೆ ಸಾಧ್ಯವಾಗಿಲ್ಲ. ಆವಾಗ ಯಾರಿಗೆ ಬೇಕಾದರೂ ಬರಬಹುದು ಎಂದೇ ತೆಗೆದುಕೊಳ್ಳಬೇಕು. ವೈದ್ಯರು ಹೇಳಿದ ಹಾಗೆ ಒಬ್ಬನಿಗೆ ರೋಗ ನಿರೋಧಕ ಶಕ್ತಿ ಚೆನ್ನಾಗಿದ್ದು ಸಣ್ಣ ನೆಗಡಿಯಾಗಿ ಬಂದು ಹೋಗಬಹುದು. ಆದರೆ ಅವನಿಂದ ಸೋಂಕು ತಗಲಿದವನಿಗೆ ಅಷ್ಟೇ ರೋಗ ನಿರೋಧಕ ಶಕ್ತಿ ಇರಬೇಕಾಗಿಲ್ಲ. ಅವನಲ್ಲಿ ಅದು ಉಲ್ಬಣಾವಸ್ಥೆಯನ್ನು ತಲುಪಬಹುದು.ಆವಾಗ ಸಣ್ಣಗೆ ನೆಗಡಿಯಾಗಿ ಸುಧಾರಿಸಿಕೊಳ್ಳ ಬಲ್ಲವನೂ ತನ್ನಿಂದ ಬೇರೆಯವರಿಗೆ ಹರಡದಂತೆ ನೋಡಿಕೊಳ್ಳ ಬೇಕಾಗುತ್ತದೆ. ಮಾಸ್ಕ್ ಸಹಾಯಕ ಹೌದು. ಆದರೆ ಮಾಸ್ಕ್ ಅನ್ನು ಎಲ್ಲೆಂದರಲ್ಲಿ ಎಸೆಯಬಾರದು. ಸೋಪು ನೀರಿಗೆ ಹಾಕಿ ತಾನೇ ತೊಳೆಯಬೇಕು. ನಿರುಪಯುಕ್ತವಾದಾಗ ಸುಡಬೇಕು.
ಸಧ್ಯಕ್ಕೆ ಲಭ್ಯ ಮಾಹಿತಿಯ ಪ್ರಕಾರ ಸೋಪು ಬಳಸಿ ಕೈತೊಳೆಯದೆ ನವದ್ವಾರಗಳನ್ನು ಸ್ಪರ್ಶಿಸಬಾರದು. ಸ್ಪರ್ಶಿಸಿದ ನಂತರ ಸೋಪಿನಲ್ಲಿ ಕೈ ತೊಳೆದುಕೊಳ್ಳಬೇಕು. ಇದನ್ನು ಅಭ್ಯಾಸ ಮಾಡುವುದು ಕಷ್ಟವಿದೆ. ಆದರೆ ಮಾಡಲೇ ಬೇಕು. ಆಹಾರ ವಸ್ತುಗಳನ್ನು ಮತ್ತು ಅದನ್ನು ತಂದ ಚೀಲವನ್ನು ಬಿಸಿಲಿನಲ್ಲಿ ಚೆನ್ನಾಗಿ ಒಣಗಿಸಿ ಒಳಗೆ ತರಬೇಕು. ಅಥವಾ ತೊಳೆಯಲು ಸಾಧ್ಯವಾಗುವುದನ್ನು ಸೋಪು ನೀರಿನಲ್ಲಿ ತೊಳೆದು ತರಬೇಕು. ಆಹಾರವನ್ನು ಬೇಯಿಸಿಯೇ ತಿನ್ನಬೇಕು. ಮನೆಯಿಂದ ಹೊರಗೆ ಹೋದರೆ ಒಳಗೆ ಬರುವಾಗ ಬಟ್ಟೆಗಳನ್ನು ಸೋಪು ನೀರಿಗೆ ಹಾಕಿ ಸ್ನಾನ ಮಾಡಿ ಹೊಸ ಬಟ್ಟೆ ಧರಿಸಿಬಿಡಬೇಕು. ಇವೆಲ್ಲದರ ಜೊತೆಗೆ ಎಲ್ಲಕಡೆ ಮುಖ್ಯವಾಗಿ ಸಾರ್ವಜನಿಕ ಸ್ಥಳಗಳಲ್ಲಿ ವೈಯಕ್ತಿಕ ಅಂತರ ಕಾಪಾಡಬೇಕಾದ್ದು ತೀರಾ ಅಗತ್ಯ. ಎಲ್ಲಿ ಹೋದರೂ ಮುಗಿಬೀಳುವ ಹವ್ಯಾಸವನ್ನು, ಸ್ನೇಹಿತರನ್ನು ಮೈಮುಟ್ಟಿ ಮಾತನಾಡಿಸುವ ಅಭ್ಯಾಸವನ್ನು ಬಿಡಬೇಕು.
ಜೊತೆಗೆ ಸಾಧ್ಯವಾದಷ್ಟೂ ಸಾಂಪ್ರದಾಯಿಕ ಆಹಾರ ಪದ್ಧತಿಯನ್ನು ರೂಢಿಸಿಕೊಳ್ಳಬೇಕು. ಕಾಳು ಮೆಣಸಿನ ಕಶಾಯ,ಅಮೃತಬಳ್ಳಿ ಕಶಾಯ, ಅರಿಸಿನ,ಶುಂಠಿ ಇಂತಹ ಬಳಕೆ ಸಹಾಯಕವಾಗುತ್ತವೆ.ಆಹಾರ ವೈವಿಧ್ಯವನ್ನು ಅಳವಡಿಸಿಕೊಳ್ಳಬೇಕು.
ಮನಸಿಗೆ ವಿಪರೀತ ಒತ್ತಡ ಮಾಡಿಕೊಳ್ಳದೆ ಶಾಂತ ಚಿತ್ತವನ್ನು ಕಾಪಾಡಿಕೊಳ್ಳಬೇಕು. ಟಿವಿ ನೋಡಬಾರದೆಂದಲ್ಲ. ನೋಡದೆ ಇರಲು ಆಗುವುದಿಲ್ಲ. ನೋಡಿಯೂ ಅದರಿಂದ ಪ್ರಭಾವಿತರಾಗದಿರುವ ಮನಸ್ಥಿತಿಯನ್ನು ತಂದುಕೊಂಡಾಗ ಮಾನಸಿಕ ಒತ್ತಡ ಆಗುವುದಿಲ್ಲ.
ಕೆಲವರಿಗೆ ಮದ್ಯಪಾನದಂತಹ ಅಭ್ಯಾಸ ಇರುತ್ತದೆ. ಒಳ್ಳೆಯದಲ್ಲ ಎನ್ನುವುದು ಹೇಗೆ ಸತ್ಯವೋ ಹಾಗೆಯೇ ಅದು ಅಪರಾಧವಲ್ಲ ಎನ್ನುವುದೂ ಅಷ್ಟೇ ಸತ್ಯ. ಆದರೆ ಅದರಿಂದ ಸಂಸಾರದ ಮೇಲೆ ದುಷ್ಪರಿಣಾಮ ಆಗಬಾರದು. ಸಾರ್ವಜನಿಕ ಪ್ರದರ್ಶನ ಆಗಬಾರದು. ಮಕ್ಕಳ ಮುಂದೆಯೇ ಪ್ರದರ್ಶನ ಆಗದ ಹಾಗೆ ಎಚ್ಚರ ವಹಿಸಬೇಕು. ಮಾನವ ದೇಹ ಹೇಗಿರುತ್ತದೆ ಎಂದು ಎಲ್ಲರಿಗೂ ಗೊತ್ತಿದೆ.ಹಾಗೆಂದು ನಾವು ಬಟ್ಟೆ ಧರಿಸದೆ ಓಡಾಡಿದರೆ ಹೇಗಾದೀತು. ಮದ್ಯ ಬೇಕು ಅನಿಸಿದಾಗ ಸೇವಿಸಿದರೆ ಅದು ಸಾಮಾಜಿಕ ಮೌಲ್ಯವೊಂದರ ಇರುವಿಕೆಯ ಎಚ್ಚರ ಇಲ್ಲದ ಸೇವಿಸುವಿಕೆ ಯಾಗದ ಹಾಗೆ ನೋಡಿಕೊಳ್ಳಬೇಕು.
ಎರಡನೆಯದು ಬದುಕನ್ನು ಹೇಗೆ ಕಟ್ಟಿಕೊಳ್ಳಬೇಕು ಎನ್ನುವುದು. ಅಲ್ಲಿಯೂ ಪ್ರಭುತ್ವವನ್ನೆ ಗುರಿಯಾಗಿಟ್ಟುಕೊಂಡರೆ ಆಗುವುದಿಲ್ಲ. ಪ್ರಭುತ್ವ ಸಹಾಯ ಮಾಡಬಹುದೆ ಹೊರತು ಎಲ್ಲವನ್ನೂ ಅದೇ ಮಾಡಲು ಆಗುವುದಿಲ್ಲ. ಅಲ್ಲಿ ಮತ್ತೆ ಜಾತಿ,ಧರ್ಮ ಎಲ್ಲ ಮಾನದಂಡಗಳಾಗುತ್ತವೆ. ಈ ಮಾನದಂಡಗಳಾದಾಗ ಆಯಾ ಜಾತಿ,ಧರ್ಮಗಳಲ್ಲಿ ಯಾರು ಉಳಿದವರನ್ನು ಹಿಂದಿಕ್ಕಬಲ್ಲನೊ ಅವನಿಗೆ ಅನುಕೂಲವಾಗುವುದು. ಹಿಂದೆ ಬಿದ್ದವನು ಹಿಂದೆಯೇ.ಆದ್ದರಿಂದ ನಮ್ಮ ಬದುಕನ್ನು ನಾವೆ ಕಟ್ಟಿಕೊಳ್ಳಬೇಕು. ಚಿಂತೆ ಬೇಡ, ಒಂದು ಆರ್ಥಿಕ ರಚನೆ ಕುಸಿದಾಗ ಮತ್ತೊಂದು ತಲೆ ಎತ್ತಿಯೂ ಇರುತ್ತದೆ.ಅಲ್ಲಿ ನಮಗೆ ಎಲ್ಲಿ ಹೇಗೆ ಅವಕಾಶ ಮಾಡಿಕೊಳ್ಳ ಬಹುದು ಎಂದು ಯೋಚಿಸಿದರೆ ದಾರಿ ಸಿಗುತ್ತದೆ. ಮದುವೆ ಮನೆಯಲ್ಲಿ ಆಟವಾಡುವ ಮಕ್ಕಳನ್ನು ಸ್ಥಳಾವಕಾಶವಿಲ್ಲ ಎಂದು ಓಡಿಸಿದರೆ ಮತ್ತೆ ಐದು ನಿಮಿಷ ಕಳೆದಾಗ ಅವರು ಇನ್ನೊಂದು ಕಡೆ ಆಡುತ್ತಿರುತ್ತಾರೆ. ಅಂದರೆ ಸ್ಥಳಾವಕಾಶವಿಲ್ಲ ಎನ್ನುವುದು ಸುಳ್ಳು. ಅದನ್ನು ಹುಡುಕಲು ಗೊತ್ತಿರಬೇಕು ಅಷ್ಟೆ.
ಶಿಕ್ಷಣ ಶಾಸ್ತ್ರದಲ್ಲಿ ಶಿಕ್ಷಣ ಎಂದರೇನು?ಎನ್ನುವುದಕ್ಕೆ ಒಳ್ಳೆಯ ವ್ಯಾಖ್ಯಾನ ವೊಂದಿದೆ. “ಯಾವುದೆ ಸನ್ನಿವೇಶಕ್ಕೆ ತನ್ನನ್ನು ತಾನು ಸಿದ್ಧಪಡಿಸಿಕೊಂಡು ನಿರ್ವಹಿಸುವ ಸಾಮರ್ಥ್ಯವನ್ನು ಬೆಳೆಯಿಸುವುದು” ಎಂದು. ನಮ್ಮದು ಮಾರ್ಕಿನ ಶಿಕ್ಷಣವಾದ್ದರಿಂದ ನಾವದನ್ನು ಮಾಡುತ್ತಿಲ್ಲ. ಸಧ್ಯಕ್ಕೆ ನಮ್ಮ ವಿದ್ಯಾವಂತರು ಯೋಚಿಸುವುದಿಲ್ಲ. ವಾದಿಸುತ್ತಾರೆ.ಪ್ರತಿಯೊಂದನ್ನೂ ಆಕ್ಷೇಪಿಸಲು ಬೇಕಾದ ವಾದವನ್ನು ಕಟ್ಟಿಕೊಳ್ಳಬಲ್ಲರೆ ಹೊರತು ಚಿಂತಿಸಲಾರರು. ಚಿಂತನೆ ಇಲ್ಲದೆ ಬದುಕನ್ನು ಕಟ್ಟಿಕೊಳ್ಳಲು ಆಗುವುದಿಲ್ಲ. ಏಕೆಂದರೆ ಮನುಷ್ಯ ಆತನ/ಆಕೆಯ ವಿಚಾರಗಳಿಂದ ರೂಪಿತನಾ/ಳಾಗುತ್ತಾಳೆ/ನೆ. ಯೋಚಿಸಿ ವರ್ತಿಸುವುದನ್ನು ಕಲಿತರೆ ಕೊರೋನಾದಿಂದ ಒಬ್ಬನಿಗೂ ತೊಂದರೆಯಾಗದ ಹಾಗೆ ಅದನ್ನು ದಾಟಬಲ್ಲೆವು.







