ಬೆಳ್ತಂಗಡಿ: ಕುಡಿಯುವ ನೀರಿನ ಸಮಸ್ಯೆ ಇರುವ ಅನಾರೋಗ್ಯ ಪೀಡಿತ ದಲಿತ ವೃದ್ಧ ದಂಪತಿಯ ಮನೆಯೂ ಸೇರಿದಂತೆ ಹಲವು ಬಡ ಕುಟುಂಬಗಳ ಕುಡಿಯುವ ನೀರಿನ ನಳ್ಳಿ ಸಂಪರ್ಕವನ್ನು ಗ್ರಾಮಪಂಚಾಯತ್‌ನ ಸಾಮಾನ್ಯ ಸಭೆಯಲ್ಲಿ ಯಾವುದೇ ನಿರ್ಣಯ ಮಾಡದೇ ಹಾಗೂ ಮುನ್ಸೂಚನೆ ಅಥವಾ ನಿಗದಿತ ಗಡುವು ನೀಡದೇ ಪಂಪು ಚಾಲಕ ದಿಡೀರ್ ಕಡಿತಗೊಳಿಸಿದ ಘಟನೆ ಕೊಯ್ಯೂರು ಗ್ರಾಮಪಂಚಾಯತ್ ವ್ಯಾಪ್ತಿಯ ಮಲೆಬೆಟ್ಟು ಪರಿಶಿಷ್ಟ ಜಾತಿ ಕಾಲೋನಿಯಲ್ಲಿ ನಡೆದಿದೆ. ಕೊಯ್ಯೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಮಲೆಬೆಟ್ಟು ನೀರಕಜೆ ಪರಿಸರದಲ್ಲಿ ಅಧ್ಯಕ್ಷರ ವಾರ್ಡಿನಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ 30 ಕುಟುಂಬಗಳೂ ಸೇರಿದಂತೆ ಸುಮಾರು 50 ಬಡ ಕುಟುಂಬಗಳು ಗ್ರಾಮ ಪಂಚಾಯತ್ ಸರಬರಾಜು ಮಾಡುವ ನಳ್ಳಿ ನೀರನ್ನೇ ಅವಲಂಬಿಸುತ್ತಿದ್ದು, ಇದೀಗ ಗ್ರಾಮ ಪಂಚಾಯತ್ ಆಡಳಿತ ಯಾವುದೇ ನಿರ್ಣಯ ಕೈಗೊಳ್ಳದಿದ್ದರೂ, ಯಾವುದೇ ಮುನ್ಸೂಚನೆಯಾಗಲಿ ನೋಟೀಸ್ ಆಗಲಿ ನೀಡದೆ ಪಂಪು ಚಾಲಕ ಸ್ಥಳೀಯ ಕೆಲವು ಕಡು ಬಡ ಕುಟುಂಬಗಳ ಮನೆಗಳ ನಳ್ಳಿ ಸಂಪರ್ಕವನ್ನು ಅಕ್ರಮವಾಗಿ ಕಡಿತಗೊಳಿಸಿರುವುದು ಫಲಾನುಭವಿಗಳ ಆಕ್ರೋಶಕ್ಕೆ ಕಾರಣವಾಗಿದೆ.ಮಲೆಬೆಟ್ಟು ಜನತಾ ಕಾಲೋನಿಯಲ್ಲಿ ಅನಾರೋಗ್ಯ ಪೀಡಿತ ಮಹಿಳೆ ಇರುವ ಕಡು ಬಡ ದಲಿತ ಕುಟುಂಬದ ಮನೆಯ ನಳ್ಳಿ ಸಂಪರ್ಕವನ್ನೂ ಅಮಾನವೀಯವಾಗಿ ಕಡಿತಗೊಳಿಸಿರುವುದು ಸ್ಥಳೀಯವಾಗಿ ಚರ್ಚೆಗೆ ಕಾರಣವಾಗಿದೆ.ಕೆಲವು ಬಡ ದಲಿತ ಕುಟುಂಬಗಳೂ ಸೇರಿದಂತೆ ಇತರ ಬಡ ಫಲಾನುಭವಿ ಕುಟುಂಬಗಳು ಗ್ರಾಮ ಪಂಚಾಯತ್ ಸರಬರಾಜು ಮಾಡುವ ಕುಡಿಯುವ ನೀರಿನ ಬಿಲ್ ಪಾವತಿ ಬಾಕಿ ಮಾಡಿರುವ ನೆಪ ಹೇಳಿ ಪಂಪು ಚಾಲಕ ನಳ್ಳಿ ನೀರಿನ ಸಂಪರ್ಕ ಕಡಿತಗೊಳಿಸುತ್ತಿರುವುದಾಗಿ ತಿಳಿಸಿದ್ದರೂ ಈ ಬಗ್ಗೆ ಗ್ರಾಮ ಪಂಚಾಯತ್ ಆಡಳಿತ ಯಾವುದೇ ಅಧಿಕೃತ ಸಭೆ ನಡೆಸಿಯೂ ಇಲ್ಲ; ನಿರ್ಣಯವನ್ನೂ ಕೈಗೊಂಡಿರುವುದಿಲ್ಲ:; ಯಾವುದೇ ನೋಟೀಸೂ ನೀಡಿರುವುದಿಲ್ಲ ಎಂದು ಸ್ಥಳೀಯ ಫಲಾನುಭವಿಗಳು ತಿಳಿಸಿದ್ದಾರೆ.ಇಲ್ಲಿನ ಬಹುತೇಕ ಬಡ ಕುಟುಂಬಗಳಿಗೆ ಗ್ರಾಮ ಪಂಚಾಯತ್‌ನ ನಳ್ಳಿ ನೀರು ಅಲ್ಲದೆ ಕುಡಿಯುವ ನೀರಿಗಾಗಿ ಯಾವುದೇ ಪರ್ಯಾಯ ವ್ಯವಸ್ಥೆ ಇಲ್ಲವೆಂಬ ಸಂಗತಿ ಗೊತ್ತಿದ್ದರೂ ನಳ್ಳಿ ನೀರಿನ ಸಂಪರ್ಕ ಕಡಿತ ಗೊಳಿಸಿರುವುದು ಫಲಾನುಭವಿಗಳಿಗೆ ಕುಡಿಯುವ ನೀರಿಗೆ ತೊಂದರೆಯಾಗಿದ್ದರೂ ಈ ಬಗ್ಗೆ ಗ್ರಾಮ ಪಂಚಾಯತ್ ಆಡಳಿತ ಯಾವುದೇ ರೀತಿಯ ಅಗತ್ಯ ಸ್ಪಂದನೆ ನೀಡದಿರುವುದು ನಿರ್ಲಕ್ಷ್ಯ ಧೋರಣೆಗೆ ಸಾಕ್ಷಿಯಾಗಿದೆ ಎಂಬ ಆರೋಪ ಕೇಳಿ ಬಂದಿದೆ.ನೀರಿನ ಬಿಲ್ ಕಟ್ಟಲು ಬಾಕಿ ಇರುವ ನಳ್ಳಿ ನೀರಿನ ಫಲಾನುಭವಿಗಳ ಸಂಪರ್ಕ ಕಡಿತಗೊಳಿಸಲಾಗಿದೆ ಎಂದು ಹೇಳಲಾಗುತ್ತಿದ್ದರೂ ಕಡಿಮೆ ಬಿಲ್ ಬಾಕಿ ಇರುವ ಫಲಾನುಭವಿಗಳ ಸಂಪರ್ಕವನ್ನು ಮಾತ್ರ ಕಡಿತಗೊಳಿಸಿದ್ದು 4000 ರೂಪಾಯಿ ಅಥವಾ ಅದಕ್ಕಿಂತಲೂ ಹೆಚ್ಚು ಬಿಲ್ ಪಾವತಿಸಲು ಬಾಕಿ ಇರುವ ದೊಡ್ಡವರ ನಳ್ಳಿ ನೀರಿನ ಸಂಪರ್ಕವನ್ನು ಕಡಿತ ಮಾಡದೆ ಕಡು ಬಡವರಿಗೊಂದು ನ್ಯಾಯ, ಅನುಕೂಲ ಇರುವವರಿಗೊಂದು ಕಾನೂನು ಎಂಬಂತೆ ತಾರತಮ್ಯ ರಾಜಕೀಯ ಮಾಡಲಾಗುತ್ತಿದೆ; ಮಾತ್ರವಲ್ಲದೆ ಮನೆಯೇ ಇಲ್ಲದ ಸರಕಾರಿ ಅಧಿಕಾರಿಯ ಖಾಸಗಿ ಜಾಗಕ್ಕೆ ಉಚಿತವಾಗಿ ಅನಧಿಕೃತ ನೀರಿನ ಸಂಪರ್ಕವನ್ನು ಒದಗಿಸಲಾಗಿದೆ ಎಂಬ ಆರೋಪವೂ ನೊಂದ ಫಲಾನುಭವಿಗಳಿಂದ ಕೇಳಿ ಬಂದಿದೆ. ಈ ಬಗ್ಗೆ ಗ್ರಾಮ ಪಂಚಾಯತ್ ಆಡಳಿತಕ್ಕೆ ಮನವಿ ನೀಡಿರುವ ಫಲಾನುಭವಿಗಳುಸುಡು ಬೇಸಿಗೆಯಲ್ಲಿ ಕುಡಿಯುವ ನೀರಿನ ಬವಣೆಯಲ್ಲಿ ಬಡ ಕುಟುಂಬಗಳು ಪರದಾಡುತ್ತಿದ್ದರೂ ಮುನ್ಸೂಚನೆ ನೀಡದೆ ನಿರ್ದಾಕ್ಷೀಣ್ಯವಾಗಿ ಕಡಿತಗೊಳಿಸಲಾದ ನಳ್ಳಿಗಳಿಗೆ ಕೂಡಲೇ ಮತ್ತೆ ನೀರಿನ ಸಂಪರ್ಕವನ್ನು ಒದಗಿಸಬೇಕು, ಬಿಲ್ ಕಟ್ಟಲು ಬಾಕಿ ಇರುವ ಬಡ ಕುಟುಂಬಗಳಿಗೆ ಹಂತಹಂತವಾಗಿ ಬಿಲ್ ಪಾವತಿಸಲು ವಿಶೇಷ ಕಾಲಾವಕಾಶ ಕಲ್ಪಿಸಬೇಕು ಎಂದು ಒಕ್ಕೊರಲಿನಿಂದ ಆಗ್ರಹಿಸಿದ್ದಾರೆ.






