ರಸ್ತೆ ರಿಪೇರಿಗೆ ಕೊಡೆ ಹಿಡಿಯಬೇಕಾಗಿಲ್ಲ – ರಸ್ತೆ ಗುಂಡಿಯಲ್ಲಿ ದೀಪ ಬೆಳಗಿ ವಿನೂತನ‌ ಪ್ರತಿಭಟನೆ

ರಸ್ತೆ ರಿಪೇರಿಗೆ ಕೊಡೆ ಹಿಡಿಯಬೇಕಾಗಿಲ್ಲ – ರಸ್ತೆ ಗುಂಡಿಯಲ್ಲಿ ದೀಪ ಬೆಳಗಿ ವಿನೂತನ‌ ಪ್ರತಿಭಟನೆ
Facebook
Twitter
LinkedIn
WhatsApp

ಬೆಳ್ತಂಗಡಿ: ಹೆದ್ದಾರಿಯ ರಸ್ತೆ ದುರಸ್ತಿಗೆ ಆಗ್ರಹಿಸಿ, ರಸ್ತೆ ಗುಂಡಿಗಳಲ್ಲಿ ಬಾಳೆಗಿಡ ನೆಟ್ಟು ಅಥವಾ ತೆಂಗಿನ ಗಿಡ ಹಾಗೂ ಅಡಿಕೆ ಗಿಡ ನೆಟ್ಟು ಪ್ರತಿಭಟಿಸುವುದನ್ನು ಕಂಡಿದ್ದೇವೆ.‌ ಹೊಂಡಗುಂಡಿಯ ರಸ್ತೆಗಳಲ್ಲಿ ಬ್ಯಾನರ್ ಅಳವಡಿಸಿ ಅಥವಾ ಹೋಲ್ಡಿಂಗ್ಸ್ ಅಳವಡಿಸಿ ಪ್ರತಿಭಟಿಸಿ ಸರಕಾರದ ಕಣ್ಣು ತೆರೆಸುವ ಪ್ರತಿಭಟನೆಯನ್ನೂ ನೋಡಿದ್ದೇವೆ. ರಸ್ತೆ ದುರಸ್ಥಿಗೆ ಒತ್ತಾಯಿಸಿ, ರಸ್ತೆ ತಡೆ ನಡೆಸಿ ಆಕ್ರೋಶ ಹೊರಹಾಕಿದ ಹೋರಾಟಗಳನ್ನೂ ನೋಡಿದ್ದೇವೆ. ಆದರೆ ರಸ್ತೆ ಹೊಂಡಗುಂಡಿಗಳಲ್ಲಿ ದೀಪಗಳನ್ನು ಹಚ್ಚಿ ರಸ್ತೆ ದುರವಸ್ಥೆಗೆ ಆಕ್ರೋಶ ವ್ಯಕ್ತಪಡಿಸಿ, ರಸ್ತೆ ದುರಸ್ತಿಗೆ ಆಗ್ರಹಿಸಿ ಪ್ರತಿಭಟಿಸಿದ ಉದಾಹರಣೆ ಈ ಹಿಂದೆ ಇದ್ದಂತಿಲ್ಲ.ಕೆಲ ದಿನಗಳ ಹಿಂದೆ ಬೆಳ್ತಂಗಡಿಯ ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥ ಸ್ವಾಮಿ ಕಲಾಭವನದಲ್ಲಿ ನಡೆದ ಭಾರತ್ ಸೌಟ್ಸ್-ಗೈಡ್ಸ್‌ನ ಅಂತರಾಷ್ಟ್ರೀಯ ಜಾಂಬೂರಿ ಕಾರ್ಯಕ್ರಮದ ಪೂರ್ವಭಾವಿ ಸಭೆಯಲ್ಲಿ ‘ಸಧ್ಯಕ್ಕೆ ಹದಗೆಟ್ಟ ರಸ್ತೆ ದುರಸ್ತಿ ಪಡಿಸಬೇಕಾದರೆ ಡಾ. ಮೋಹನ ಆಳ್ವರು ರಸ್ತೆ ದುರಸ್ತಿ ಕಾಮಗಾರಿ ಮಾಡುವ ಕಾರ್ಮಿಕರಿಗೆ ಕೊಡೆ ಹಿಡಿಯಲು ಜನ ಕೊಡಬೇಕು’ ಎಂದು ಶಾಸಕ ಹರೀಶ್ ಪೂಂಜ ನೀಡಿದ ಹೇಳಿಕೆ ಸಾಕಷ್ಟು ವಿವಾದ ಸೃಷ್ಟಿಸಿತ್ತು. ಇದೀಗ ಬೆಳ್ತಂಗಡಿ ಸಮೀಪದ ಲಾಯ್ಲ ಶ್ರೀ ರಾಘವೇಂದ್ರ ಮಠದ ಸಮೀಪ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಕ್ಟೋಬರ್ 26ರಂದು ಯುವಕರ ತಂಡವೊಂದು ಹೆದ್ದಾರಿಯ ಹೊಂಡಗುಂಡಿಗಳಲ್ಲಿ ದೀಪ ಹಚ್ಚುವ ಮೂಲಕ ‘ಮಳೆಗೆ ದೀಪ ಆರಿಲ್ಲ; ಆದ್ದರಿಂದ ರಸ್ತೆ ದುರಸ್ತಿಗೆ ಮಳೆಯ ಭಯವಿಲ್ಲ; ಕೊಡೆ ಹಿಡಿಯಲು ಜನ ಬೇಕಾಗಿಲ್ಲ; ಶಾಸಕ ಹರೀಶ್ ಪೂಂಜರೇ, ನೀವು ರಸ್ತೆ ದುರಸ್ತಿ ಕಾಮಗಾರಿ ಆರಂಭಿಸಿ’ ಎಂಬ ಸಂದೇಶ ರವಾನಿಸಿದ್ದಾರೆ. ಆ ಮೂಲಕ ರಸ್ತೆ ದುರಸ್ತಿ ವಿಚಾರವಾಗಿ ಮೂಡುಬಿದಿರೆ ಆಳ್ವಾಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ| ಎಂ. ಮೋಹನ ಆಳ್ವರ ಕಾಲೆಳೆದ ಬೆಳ್ತಂಗಡಿಯ ಶಾಸಕ ಹರೀಶ್ ಪೂಂಜರಿಗೆ ಸರಿಯಾಗಿಯೇ ಟಾಂಗ್ ನೀಡಿದ್ದಾರೆ.ಬೆಳ್ತಂಗಡಿ ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ಅನಿಲ್ ಪೈ, ಕಮ್ಯೂನಿಸ್ಟ್ ನಾಯಕ ಶೇಖರ್ ಲಾಯ್ಲ, ಜಿಲ್ಲಾ ಯುವ ಕಾಂಗ್ರೆಸ್ ಕಾರ್ಯದರ್ಶಿ ಪ್ರಜ್ವಲ್ ಜೈನ್, ಯುವ ಇಂಟೆಕ್ ಅಧ್ಯಕ್ಷ ನವೀನ್ ಗೌಡ, ಸಾಮಾಜಿಕ ಕಾರ್ಯಕರ್ತರಾದ ಅಲ್ತಫ್, ಗಣೇಶ್ ಕಣಿಯೂರು, ನೌಷಾದ್ ಕೈಕಂಬ ಮತ್ತಿತರರು ಈ ವಿನೂತನ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

Latest News

Related Posts